ಮೈಸೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಸೂರಿಗೆ ಆಗಮಿಸಿ ಮತಬೇಟೆ ಆರಂಭಿಸುವ ಒಂದು ದಿನದ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಪ್ರಮುಖ ರಣತಂತ್ರ ಹೆಣೆದಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ (V Srinivas Prasad) ಅವರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು, ಕಾಂಗ್ರೆಸ್‌ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ, “ಭಾನುವಾರ ನಡೆಯುವ ಮೋದಿ ಸಮಾವೇಶಕ್ಕೆ ನಾನು ಹೋಗುವುದಿಲ್ಲ” ಎಂದು ಶ್ರೀನಿವಾಸ ಪ್ರಸಾದ್ ಅವರು ಹೇಳಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು ಕೆಲ ಹೊತ್ತು ಚರ್ಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್ ಅವರು ದೂರವೇ ಉಳಿದಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಇದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು, ಶ್ರೀನಿವಾಸ ಪ್ರಸಾದ್ ಅವರು ಬಹುಕಾಲದ ಗೆಳೆಯರು. ರಾಜಕೀಯ ನಿವೃತ್ತಿ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾದೆ ಅಷ್ಟೆ. ಇದು ರಾಜಕೀಯದ ಭೇಟಿ ಅಲ್ಲ” ಎಂದು ತಿಳಿಸಿದರು.
ಶ್ರೀನಿವಾಸ ಪ್ರಸಾದ್ ಅವರು ಈಗಾಗಲೇ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದರೂ ಅವರಿಗೆ ಬೇಡಿಕೆ ಇದೆ. ಪ್ರಭಾವಿ ದಲಿತ ನಾಯಕರಾಗಿರುವ ಕಾರಣ ಅವರ ಬೆಂಬಲ ಸೆಳೆಯಲು ಕಾಂಗ್ರೆಸ್ಸಿಗರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಧೀರಜ್ ಪ್ರಸಾದ್ ಅವರು ಕಾಂಗ್ರೆಸ್ ಸೇರಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ, ಸಿಎಂ ಕೂಡ ಸಂಸದರನ್ನು ಭೇಟಿಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ.
Karnataka CM Siddaramaiah met BJP MP from Chamarajanagar, Srinivas Prasad at his residence in Mysuru. pic.twitter.com/LK9jpNTbCi
— ANI (@ANI) April 13, 2024
ಕಾಂಗ್ರೆಸ್‌ಗೆ ಶ್ರೀನಿವಾಸ ಪ್ರಸಾದ್ ಬೆಂಬಲ ಎಂದ ಸುನೀಲ್ ಬೋಸ್
“ಶ್ರೀನಿವಾಸ ಪ್ರಸಾದ್ ಅವರ ಬೆಂಬಲ ನಮಗಿದೆ” ಎಂಬುದಾಗಿ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ಕೂಡ ಬಹಿರಂಗವಾಗಿ ಹೇಳಿದ್ದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಬೋಸ್, “ಶ್ರೀನಿವಾಸ ಪ್ರಸಾದ್ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್‌ಗೆ ಇದೆ. ಬಿಜೆಪಿ ಸಂಸದರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಾ ಎಂದು ಅವರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು ಹಾಗೂ ಚಾಮರಾಜನಗರ ಲೋಕಸಭೆ ಕ್ಷೇತ್ರಗಳನ್ನು ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಅವರು ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರೂ ಮೈಸೂರಿನಲ್ಲಿ ಬೃಹತ್ ಸಮಾವೇಶ ಕೈಗೊಳ್ಳುತ್ತಿದ್ದು, ಎರಡೂ ಕ್ಷೇತ್ರಗಳ ಮೇಲೆ ಇದು ಪ್ರಭಾವ ಬೀರಲಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಹೊಸ ದಾಳ ಉರುಳಿಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: Operation Kamala: ಸಿದ್ದರಾಮಯ್ಯ ತವರಲ್ಲಿ ಆಪರೇಷನ್ ಕಮಲ; ಸಿಎಂ ಆಪ್ತನನ್ನು ಬಿಜೆಪಿಗೆ ಸೆಳೆದ ವಿಜಯೇಂದ್ರ