Site icon Vistara News

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

Lok Sabha Election 2024 HD Kumaraswamy to file nomination for Mandya Lok Sabha seat on April 4

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೆ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಧುಮಿಕಿದ್ದಾರೆ. ಈ ವೇಳೆ ಎಚ್‌ಡಿಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರ ನೇತೃತ್ವದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರ ಸಮನ್ವಯ ಸಮಿತಿ ಸಭೆ ನಡೆದಿದ್ದು, ಯಶಸ್ವಿಯಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವ ನಿಟ್ಟಿನಲ್ಲಿ ಎಚ್‌ಡಿಕೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಶಪಥ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಆಗಿರುವ ಈ ಮೈತ್ರಿಯೂ ರಾಜ್ಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ. ನಾನು ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿ ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಪ್ರಕಟಿಸಿದರು.

ಇದನ್ನೂ ಓದಿ: Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

ಈ ಮೈತ್ರಿ ಅತ್ಯಂತ ಸಹಜ ಮೈತ್ರಿಯಾಗಿದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್‌ ನಡುವೆ ಮೈತ್ರಿಯಾಗಿತ್ತು ನಿಜ. ಅದು ಅಸಹಜ ಮೈತ್ರಿಯಾಗಿತ್ತು. ಅದರ ಪ್ರತಿಫಲವೇನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಮೈತ್ರಿ ಹೆಸರಿನಲ್ಲಿ ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್-ಬಿಜೆಪಿ ಮೈತ್ರಿ ಸಹಜ ಮೈತ್ರಿ ಎನ್ನುವುದಕ್ಕೆ ನಿನ್ನೆ ಮೈಸೂರಿನಲ್ಲಿ ಹಾಗೂ ಇಂದು ಮಂಡ್ಯದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಕಂಡು ಬರುತ್ತಿರುವ ಉತ್ಸಾಹವೇ ನಿದರ್ಶನ ಎಂದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಮೈತ್ರಿಯಾಗಿದೆ. ರಾಜ್ಯ ಅಭಿವೃದ್ಧಿಗಾಗಿ ಈ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ-ಜೆಡಿಎಸ್‌ ಹಾಲುಜೇನಿನಂತೆ ಕೆಲಸ ಮಾಡಲಿವೆ. ಹಿಂದಿನಿಂದಲೂ ಜೆಡಿಎಸ್‌ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಲೇ ಇದೆ. ಆ ಪಕ್ಷದ ಜತೆ ಸರ್ಕಾರ ಮಾಡಿದ್ದು ನನ್ನ ಅತಿ ಕೆಟ್ಟ ನಿರ್ಧಾರ. ಬಿಜೆಪಿ ಜತೆ ನಾನು ಮಾಡಿದ 20 ತಿಂಗಳ ಆಡಳಿತವನ್ನು ಜನರು ಇಂದಿಗೂ ನೆನೆಯುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

17 ವರ್ಷ ವನವಾಸ ಅನುಭವಿಸಿದ್ದೇನೆ

ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಆರೋಪ ನನ್ನ ಮೇಲೆ ಕೆಲವರು ಮಾಡುತ್ತಾರೆ. ನಾನು ಮಾಡದೆ ಇರುವ ತಪ್ಪನ್ನು ನನ್ನ ತಲೆ ಮೇಲೆ ಹೊತ್ತಿದ್ದೇನೆ. 17 ವರ್ಷ ವನವಾಸ ಅನುಭವಿಸಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಆಗದೆ, ನಮ್ಮಲ್ಲಿದ್ದ ಪೈಪೋಟಿ ಅವರಿಗೆ ಲಾಭವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದಿದ್ದು ಆಕಸ್ಮಿಕ. ಅದು ಆಕಸ್ಮಿಕ ಸರ್ಕಾರ ಎಂದು ಎಂದು ಅವರು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು‌ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಾಂಧವ್ಯದ ಬಗ್ಗೆ ಕೆಲವರು ಲಘುವಾಗಿ ಮಾತನಾಡುವುದನ್ನು ಕೇಳಿದ್ದೇನೆ. ಗೌಡರು ಮೋದಿಯವರು ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿರಲಿಲ್ಲ. ರಾಜ್ಯಸಭೆಗೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಆ ಬಳಿಕ ಮೋದಿ ಅವರನ್ನು ಭೇಟಿಯಾದ ವೇಳೆ ದೇವೇಗೌಡರಿಗೆ ಅವರು ಕೊಟ್ಟ ಗೌರವವವನ್ನು ಇಡೀ ದೇಶ ನೋಡಿದೆ. ಹೀಗಾಗಿ ಯಾರೂ ಚುನಾವಣೆ ಸಮಯದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಎಚ್‌.ಡಿ. ಕುಮಾರಸ್ವಾಮಿ ಸಲಹೆ ಮಾಡಿದರು.

ನರೇಂದ್ರ ಮೋದಿ ಅವರು ದೇವೇಗೌಡರನ್ನು ತಂದೆ ಸಮನಾರಾಗಿ ನಡೆಸಿಕೊಳ್ಳುತ್ತಾರೆ. ಆದರೆ, ರಾಜಕೀಯ ಬದುಕು ಕೊಟ್ಟ ಅದೇ ದೇವೇಗೌಡರನ್ನು ಸಿದ್ದರಾಮಯ್ಯ ಹೀಯಾಳಿಸುತ್ತಾರೆ. ಇದು ಸಿದ್ದರಾಮಯ್ಯಗೂ ಮೋದಿ ಅವರಿಗೂ ಇರುವ ವ್ಯತ್ಯಾಸ. ಕಾಂಗ್ರೆಸ್ ಎಷ್ಟೇ ಶ್ರಮವಹಿಸಿದರೂ ಜೆಡಿಎಸ್‌ ಮುಗಿಸಲು ಆಗಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅನಿವಾರ್ಯ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಾದರೆ ಐತಿಹಾಸಿಕ ಗೆಲುವು ನಮ್ಮದಾಗಲಿದೆ ಎಂದರು ಕುಮಾರಸ್ವಾಮಿ ಹೇಳಿದರು.

ಡಿಸೆಂಬರ್ ಒಳಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ

ನಾನು ಜೋತ್ಯಿಷ್ಯಕಾರನಲ್ಲ. ಆದರೆ, ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ. ಅದು ತಾನಾಗಿಯೇ ಬಿದ್ದುಹೋಗಲಿದೆ. ನಾನು ಮತ್ತು ವಿಜಯೇಂದ್ರ ಅದಕ್ಕಾಗಿ ಕಷ್ಟಪಡಬೇಕಿಲ್ಲ. ಅವರೇ ಅವರ ಸರಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಮೇಕೆದಾಟು ಆಗುತ್ತಾ?

ಮೇಕೆದಾಟುಗಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರು. ಇವತ್ತು ಏನಾಗಿದೆ? ಮೇಕೆದಾಟು ಕಟ್ಟಲು ಅನುಮತಿ ಕೇಳುತ್ತಿದ್ದಾರೆ‌. ಮತ್ತೆ ಆವತ್ತು ಪಾದಯಾತ್ರೆ ಯಾಕೆ ನಡೆಸಿದರು? ನಿಮ್ಮ ಮಿತ್ರಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ಕೊಡಲ್ಲ ಎಂದಿದ್ದಾರೆ. ಪೇಪರ್ ಪೆನ್ನು ಕೊಟ್ಟರೆ ನಾಳೆ ಬೆಳಗ್ಗೆ ಮೇಕೆದಾಟು ಮಾಡುತ್ತೇನೆ ಎಂದರಲ್ಲ. ಈಗ ಏನಾಗಿದೆ ನಿಮಗೆ? ಮೇಕೆದಾಟು ಯೋಜನೆ ಮಾಡಿ. ಮೇಕೆದಾಟು ಹೆಸರೇಳಿಕೊಂಡು ರಾಜಕಾರಣ ಮಾಡುವ ದಾರಿದ್ರ್ಯ ದೇವೇಗೌಡರಿಗೆ ಬಂದಿಲ್ಲ. ಪಾದಯಾತ್ರೆಯಿಂದ ನೀರು ತರಲು ಆಗಲ್ಲ ಶಿವಕುಮಾರಣ್ಣ. ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು‌. ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಆಗಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇಲೆ ಎಚ್.ಡಿ. ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದರು.

ಪುಟ್ಟರಾಜು ನನ್ನ ಗಮನಕ್ಕೆ ತಾರದೆ ಘೋಷಣೆ ಮಾಡಿದ್ದಾರೆ

ಎರಡೂ ಪಕ್ಷಗಳ ಕಾರ್ಯಕರ್ತರು, ನಾಯಕರ ಒತ್ತಾಸೆಯೇ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳಲು ಕಾರಣ. ನಾನು ಸ್ಪರ್ಧಿಸುವ ಮಾಡಬೇಕೆಂಬ ಆದೇಶ ಕಾರ್ಯಕರ್ತರಿಂದ ಬಂದಿದೆ. ನಮ್ಮ ಹಳೇ ಸ್ನೇಹಿತರೊಬ್ಬರು ಪುಟ್ಟರಾಜು ಅವರ ಹೆಸರು ಹೇಳಿದ್ದಾರೆ. ಡಿ.ಸಿ. ತಮ್ಮಣ್ಣ ಹಾಗೂ ಸಿ.ಎಸ್. ಪುಟ್ಟರಾಜು ಸ್ಪರ್ಧೆ ಬಗ್ಗೆ ಚರ್ಚೆ ನಡೆದಿತ್ತು. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಕಾರ್ಯಕರ್ತರ ಅಪೇಕ್ಷೆ ಇದೆ. ಪುಟ್ಟರಾಜು ನನ್ನ ಗಮನಕ್ಕೆ ತಾರದೆ ಮೇಲುಕೋಟೆಯಲ್ಲಿ ಘೋಷಣೆ ಮಾಡಿದ್ದಾರೆ. ನಾನು ಪಲಾಯನವಾದಿಯಲ್ಲ. ಜನರ ಅಪೇಕ್ಷೆಗೆ ತಲೆ ಭಾಗಿ ಬಂದಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುಮಲತಾ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ

ಸುಮಲತಾ ಅಂಬರೀಶ್‌ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ಮತ್ತು ಅಂಬರೀಶ್ ಸ್ನೇಹಿತರು. ಅದೂ ಎಲ್ಲರಿಗೂ ತಿಳಿದಿರುವ ವಿಚಾರವೇ. ಸುಮಲತಾ ಅವರು ನನಗೆ ಅಂಬರೀಶ್‌ ಅವರೊಂದಿಗೆ ಊಟ ಬಡಿಸಿದ್ದಾರೆ. ನಾವು ಶತ್ರುಗಳಲ್ಲ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಅವರು ನಿರ್ಧಾರ ಮಾಡಿ ಘೋಷಣೆ ಮಾಡುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಬಗ್ಗೆಯೂ ಇದೇ ರೀತಿಯ ಚೇಷ್ಟೆ ಮಾಡುತ್ತಿದ್ದಾರೆ. ಅದೇನೂ ವರ್ಕೌಟ್ ಆಗಲ್ಲ. ಮಂಜುನಾಥ್ ಜನಸಾಮಾನ್ಯರ ಅಭ್ಯರ್ಥಿ. ಏನು ಕುತಂತ್ರ ಮಾಡಿದರು ಪ್ರಯೋಜನವಿಲ್ಲ. ಡಿ.ಕೆ. ಸುರೇಶ್ ಕೆಲಸ ಮಾಡಿದ್ದೀವಿ, ಕೂಲಿ ಕೇಳ್ತಿದ್ದೀವಿ ಅನ್ನೋ ವಿಚಾರ.
ನಾವೇನೂ ದರೋಡೆ ಮಾಡಿದ್ದೀವಾ? ರಾಮನಗರ ಜಿಲ್ಲೆಗೆ ನಾನು ಕಾಲಿಡುವ ಮುಂಚೆ ಯಾವ ಪರಿಸ್ಥಿತಿ ಇತ್ತು.
ನಾನು ಕಾಲಿಟ್ಟ ಬಳಿಕ ಯಾವ ಪರಿಸ್ಥಿತಿ ಇದೆ. ಯಾವ ರೀತಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೀವಿ. ನಾನು ಮತ್ತು ಯಡಿಯೂರಪ್ಪ ಇದ್ದ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾಡಿದ್ದೇವು. ಇದಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾಕ್ಷಿ ಇದ್ದಾರೆ ಎಂದು ಡಿ.ಕೆ. ಸುರೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಸಭೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್‌

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಸಾ.ರಾ.ಮಹೇಶ್, ಡಾ.ನಾರಾಯಣ ಗೌಡ, ಎಸ್.ಎ.ರಾಮದಾಸ್, ಶಾಸಕ ಎಚ್.ಟಿ. ಮಂಜುನಾಥ್, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಶರಣು ತಳ್ಳೀಕೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಬಿ.ಆರ್‌.ರಾಮಚಂದ್ರ, ಕೆ.ಎಸ್.ವಿಜಯ್ ಆನಂದ್ ಸೇರಿದಂತೆ ಎರಡೂ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು ಸೇರಿದ್ದರು.

Exit mobile version