ಚಿಕ್ಕೋಡಿ: ಲೋಕಸಭೆ ಚುನಾವಣಾ ಪ್ರಚಾರದ ಭರಾಟೆ ನಡುವೆ ಶನಿವಾರ ಮುಂಬೈಗೆ ತೆರಳಿರುವ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು, ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನೀರು ಹರಿಸುವಂತೆ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದ ನಿಯೋಗ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಅಣ್ಣಾಸಾಹೇಬ್ ಜೊಲ್ಲೆಗೆ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಹುಕ್ಕೇರಿ ಶಾಸಕ ನಿಖಿಲ್ ಉಮೇಶ ಕತ್ತಿ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಸಾಥ್ ನೀಡಿದ್ದಾರೆ. ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿಯೋಗ ಮನವಿ ಮಾಡಿದೆ.
ಇದನ್ನೂ ಓದಿ | BJP’s 8th List Of Candidates : ಲೋಕ ಸಭಾ ಚುನಾವಣೆಗೆ ಬಿಜೆಪಿಯ 8ನೇ ಪಟ್ಟಿ ಬಿಡುಗಡೆ
ಕೃಷ್ಣಾ ಮತ್ತು ದೂಧಗಂಗಾ ನದಿ ನೀರು ನಂಬಿಕೊಂಡಿರುವ ಗಡಿ ಭಾಗದ ರೈತರ ಸಂಕಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಕುಡಿಯುವ ನೀರಿಗಾಗಿ ಪ್ರತಿವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಬೇಡುವ ಪರಿಸ್ಥಿತಿ ಇದೆ. ಅದೇ ರೀತಿ ಇತ್ತೀಚೆಗೆ ಕೃಷ್ಣಾ ನದಿ ಬರಿದಾಗಿ ಮೀನುಗಳ ಮಾರಣ ಹೋಮವಾಗಿತ್ತು. ಹೀಗಾಗಿ ಜೊಲ್ಲೆ ಅವರು ಪ್ರಚಾರಕ್ಕೆ ಬ್ರೇಕ್ ಹಾಕಿ ಮುಂಬೈಗೆ ಹೋಗಿ ಕೃಷ್ಣಾನದಿಗೆ ನೀರು ಬಿಡುವಂತೆ ಕೋರಿದ್ದಾರೆ.