Site icon Vistara News

Lok Sabha Election 2024: ಭ್ರಷ್ಟರನ್ನು ಜೈಲಿಗೆ ಹಾಕಬೇಕೋ ಬೇಡವೋ? ಗುಡುಗಿದ ಅಮಿತ್‌ ಶಾ!

Lok Sabha Election 2024 Should corrupt people be put in jail Amit Shah

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಚುನಾವಣಾ ಚಾಣಕ್ಯ, ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳ ಇಂಡಿಯಾ ಒಕ್ಕೂಟ (I.N.D.I.A) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರದ್ದು ಪರಿವಾರವಾ ಹಾಗೂ ಭ್ರಷ್ಟಾಚಾರ ಇಂಡಿ ಒಕ್ಕೂಟ ಎಂದು ಕಿಡಿಕಾರಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದ್ದೆವು. ಇಂಥವರನ್ನು ಜೈಲಿಗೆ ಹಾಕಬೇಕೋ ಬೇಡವೋ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕದೇ ಅರಮನೆಯಲ್ಲಿಡಬೇಕಿತ್ತಾ ಎಂದೂ ಪ್ರಶ್ನೆ ಮಾಡಿದ್ದಾರೆ.

“ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಲಾಗಿದ್ದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್‌ ಶಾ, ನೀವು ಕಿವಿಕೊಟ್ಟು ಕೇಳಿಸಿಕೊಳ್ಳಿ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ವಾದ ಮಾಡಿದ್ದೆವು. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕಬೇಕೋ? ಬೇಡವೋ? ರಾಹುಲ್ ಗಾಂಧಿ ಅವರೇ, ಹೇಳಿ ನಿಮ್ಮ ಸಂಸದನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ, ಜೈಲಿಗೆ ಹಾಕಬೇಕೋ ಬೇಡವೋ? ಮಮತಾ ದೀದಿ ನಿಮ್ಮ ಶಾಸಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಅವರನ್ನು ಜೈಲಿಗೆ ಹಾಕದೆ, ಅರಮನೆಯಲ್ಲಿ ಇಡಬೇಕಿತ್ತಾ? ಎಂದು ಪ್ರಶ್ನೆ ಮಾಡಿದರು.

ಹಗರಣಗಳ ಬಗ್ಗೆ ಮಾಹಿತಿ ಕೊಟ್ಟ ಶಾ

ನರೇಂದ್ರ ಮೋದಿ ಅವರ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಒಂದು ಕಡೆ ಇಂಡಿ ಅಲೆಯನ್ಸ್ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಕಾಲದ ಹಗರಣಗಳನ್ನು, ಭ್ರಷ್ಟಾಚಾರಗಳನ್ನು ನೋಡಿದ್ದೀರಾ? ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಇವರೆಲ್ಲರೂ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್ ಕಾಲದ ಒಂದೊಂದೇ ಹಗರಣಗಳ ಅಮಿತ್ ಶಾ ಮಾಹಿತಿ ನೀಡಿದರು.

ನಾನು ನರೇಂದ್ರ ಮೋದಿ ಅವರ ಜತೆ ನಲವತ್ತು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರು ಸಿಎಂ ಆಗಿ, ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಿದ ರೀತಿಯನ್ನು ಹತ್ತಿರದಿಂದ ನೋಡಿದ್ದೇನೆ. ಇಡೀ ದೇಶ ಮೋದಿ ಜತೆ ನಿಂತಿದೆ. ಮೋದಿ ಸರ್ಕಾರ ಬಡವರ, ದಲಿತರ, ಆದಿವಾಸಿಗಳ ಸರ್ಕಾರ ಆಗಿದೆ. ಬಡವರಿಗೆ ಆಹಾರ ಪೂರೈಸುವ ಕೆಲಸವನ್ನು ಮೋದಿ ಮಾಡಿದ್ದಾರೆ. 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಮನೆ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಿದ್ದು ಮೋದಿ ಸರ್ಕಾರ. ಕೋಟ್ಯಂತರ ಕಾರ್ಯಕರ್ತರಿಗೆ ಹೊಸ ಉತ್ಸಾಹ ಮೂಡಿಸುತ್ತಿರುವುದು ಮೋದಿ ಎಂದು ಅಮಿತ್‌ ಶಾ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ಆರ್ಟಿಕಲ್ 370 ತೆಗೆದರೆ ಕಾಶ್ಮೀರದಲ್ಲಿ ರಕ್ತಪಾತ ಆಗುತ್ತ ಎಂದು ಹೇಳಿದರು. ರಾಹುಲ್ ಗಾಂಧಿ ಅವರೇ, ಅಲ್ಲಿ ಯಾವುದೇ ಒಂದು ತೊಟ್ಟು ರಕ್ತವೂ ಬೀಳಲಿಲ್ಲ. ರಾಮಮಂದಿರ ನಿರ್ಮಾಣ ಮಾಡೋಕೆ ಬಿಡಲ್ಲ ಎಂದು ಹೇಳಿದರು. ರಾಮ ಮಂದಿರವನ್ನು ನಿರ್ಮಾಣ ಮಾಡಿ, ಭವ್ಯ ರಾಮಲಲ್ಲಾ ಪ್ರತಿಷ್ಠಾಪನೆಯನ್ನು ಕೂಡ ಮಾಡಲಾಯಿತು. ಧಮ್ಕಿ ಹಾಕಿದವರಿಗೆ, ರಾಮಮಂದಿರ ನಿರ್ಮಾಣ ಮಾಡಿ ತೋರಿಸಿದ್ದೇವೆ. ಭಕ್ತರು ಆರಾಮವಾಗಿ ರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ಅಮಿತ್‌ ಶಾ ಅವರು ಕಾಂಗ್ರೆಸ್‌ ನಾಯಕರನ್ನು ಕುಟುಕಿದರು.

ಸಿದ್ದರಾಮಯ್ಯ ಹಿಂದೆ ಅಹಿಂದ ಹೋಗದಂತೆ ನೋಡಿಕೊಳ್ಳಿ!

ಸಿಎಂ ಸಿದ್ದರಾಮಯ್ಯ ಅವರ (CM Siddaramaiah) ಹಿಂದೆ ಅಹಿಂದ ಹೋಗಲು ಬಿಡಬೇಡಿ. ಅಹಿಂದ ವೋಟ್ ಬ್ಯಾಂಕ್ ಅನ್ನು ಸೆಳೆಯು ಪ್ಲ್ಯಾನ್ ಮಾಡಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಹಿಂದ ಸಾಥ್ ನೀಡಿದೆ. ಈ ಬಾರಿ ಅಹಿಂದ ವೋಟ್ ಸೆಳೆಯಲು ಪ್ಲ್ಯಾನ್ ಮಾಡಿ. ರಾಜ್ಯದಲ್ಲಿ ಅಹಿಂದ ವೋಟ್ ಮೇಲೆ ಕಣ್ಣಿಡಿ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ ಸೆಳೆಯಲು ಯೋಜನೆ ರೂಪಿಸಿ, ಯಾವುದೇ ಸಮುದಾಯದ ವೋಟ್ ಮೈತ್ರಿ ಬಿಟ್ಟು ಹೋಗದಂತೆ ಪ್ಲ್ಯಾನ್ ಮಾಡಿ ಎಂದು ಸಭೆಯಲ್ಲಿ ಅಮಿತ್ ಶಾ ಕಿವಿ ಮಾತು ಹೇಳಿದರು.

ಈ ಬಾರಿ ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕರ್ನಾಟಕದಲ್ಲಿ 2014ರಲ್ಲಿ 17 ಸೀಟು, 2019ರಲ್ಲಿ 25 ಸೀಟು ಗೆಲ್ಲಿಸಿ, ಹೆಚ್ಚು ಮತಗಳನ್ನ ಕೊಟ್ಟಿದ್ದೀರಿ. ಹೀಗಾಗಿ ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಬೇಕು. 28 ಕ್ಷೇತ್ರಗಳನ್ನು ಗೆಲ್ಲಲು ಸಿದ್ಧರಾಗಿದ್ದೀರಾ? ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದೀರಾ ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Lok Sabha Election 2024: ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡಲೋ? ಕಿತ್ತುಕೊಳ್ಳಲೋ? ಸಿಎಂ ಪ್ರಶ್ನೆ

ಭಯೋತ್ಪಾದಕರ ಸೊಲ್ಲಡಗಿಸಿದ್ದು ಬಿಜೆಪಿ

ಸಿದ್ದರಾಮಯ್ಯ ಅವರೇ, ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಾ ಇದ್ದರು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮೌನವಾಗಿದ್ದರು. ನಮ್ಮ‌ ಕಾಲದಲ್ಲಿ ಪುಲ್ವಾಮಾ ದಾಳಿ ನಡೆಸಿದ್ದರು. ಆದರೆ, ನಾವು ಸುಮ್ಮನೆ ಕೂರಲಿಲ್ಲ. ನರೇಂದ್ರ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿ, ಭಯೋತ್ಪಾದಕರ ಸೊಲ್ಲಡಗಿಸಿತು ಎಂದು ಅಮಿತ್ ಶಾ ಹೇಳಿದರು.

ಎಲ್ಲ ಅಭ್ಯರ್ಥಿಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡ ಅಮಿತ್‌ ಶಾ!

ಭಾಷಣದ ಆರಂಭದಲ್ಲಿ ಮಾತನಾಡಿದ ಅಮಿತ್‌ ಶಾ ಅವರು ಪಕ್ಷದ ಒಬ್ಬೊಬ್ಬ ಅಭ್ಯರ್ಥಿಗಳ ಹೆಸರು ಕರೆದು ಪಕ್ಕದಲ್ಲಿ ನಿಲ್ಲುವಂತೆ ಸೂಚನೆ ನೀಡಿದರು. ಎಲ್ಲರೂ ನಿಂತ ಬಳಿಕ ಅವರ ಕಡೆ ಕೈ ಬೊಟ್ಟು ಮಾಡಿ ತೋರುತ್ತಾ, “ಇವರನ್ನು ಗೆಲ್ಲಿಸಬೇಕೋ, ಬೇಡವೋ? ಎಂದು ಅಲ್ಲಿ ಸೇರಿದ್ದ ಪ್ರಮುಖರನ್ನು ಪ್ರಶ್ನೆ ಮಾಡಿದರು. ಎಲ್ಲರೂ ಒಕ್ಕೊಲರಲಿನಿಂದ “ಗೆಲ್ಲಿಸಬೇಕು.. ಗೆಲ್ಲಿಸಬೇಕು..” ಎಂದು ಘೋಷಣೆ ಕೂಗಿದರು.

Exit mobile version