ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ. ಈಗ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಸ್ಟಾರ್ ಚಂದ್ರ ಅವರನ್ನು ಆಯ್ಕೆ ಮಾಡಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಣಕ್ಕಿಳಿದಿದ್ದಾರೆ. ಈ ನಡುವೆ ಹಾಲಿ ಸಂಸದೆ, ಸ್ವಾಭಿಮಾನಿ ಸುಮಲತಾ ಅಂಬರೀಶ್ (Sumalatha Ambareesh) ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಅವರು ತಮ್ಮ ಅಂತಿಮ ನಿರ್ಧಾರವನ್ನು ಏಪ್ರಿಲ್ 3ರಂದು ಹೇಳುವುದಾಗಿ ಈಗಾಗಲೇ ಹೇಳಿದ್ದಾರೆ. ಅಪ್ಪಿತಪ್ಪಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ಎಂಬ ಆತಂಕದ ನಡುವೆಯೇ ಇಂದು (ಭಾನುವಾರ – ಮಾ. 31) ಸುಮಲತಾ ಅವರನ್ನು ಎಚ್‌ಡಿಕೆ ಭೇಟಿ ಮಾಡಿದ್ದಾರೆ. ಈ ವೇಳೆ ಸುಮಲತಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರಾದರೂ ಇನ್ನೊಂದು ಸುತ್ತು ಬಿಜೆಪಿ ನಾಯಕರ ಜತೆ ಮಾತನಾಡಬೇಕು. ಅದಾದ ಬಳಿಕ ತಾವು ಅಭಿಮಾನಿಗಳ ಜತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ಹೇಳುವುದಾಗಿ ಹೇಳಿದ್ದಾರೆ. ಹೀಗಾಗಿ ಸುಮಲತಾ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಸುಮಲತಾ ಅಂಬರೀಶ್ ಅವರನ್ನು ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜಕೀಯವಾಗಿ ತಮ್ಮಿಂದ ಏನೆಲ್ಲ ಸಹಕಾರ ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಇದು ಸೌಹಾರ್ದಯುತವಾದ ಭೇಟಿಯಾಗಿದೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಕ್ಕನವರ ಸಹಕಾರ ಕೋರಿದ್ದೇನೆ. ಅಂಬರೀಶ್ ಮನೆ ನನಗೆ ಹೊಸದಲ್ಲ. ಅವರು ಮಂಡ್ಯದಲ್ಲಿ ತಮ್ಮ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ನಿನ್ನೆ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೊನ್ನೆ ಇಲ್ಲಿಗೆ ಭೇಟಿ ನೀಡಿ ಹಲವು ವಿಚಾರವನ್ನು ಚರ್ಚೆ ಮಾಡಿ ಬಂದಿದ್ದಾರೆ ಎಂದು ಹೇಳಿದರು.
ಸುಮಲತಾ ಅಂಬರೀಶ್ ಅವರು ಏಪ್ರಿಲ್ 3ರಂದು ತೀರ್ಮಾನ ಮಾಡುತ್ತಾರೆ. ಎಲ್ಲವನ್ನೂ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಅದನ್ನು ನಾನು ಇಲ್ಲಿ ಹೇಳಲು ಆಗಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಡಿಕೆಶಿ ನನ್ನ ದೊಡ್ಡ ಹಿತೈಶಿ!
ಡಿಸಿಎಂ ಡಿ.ಕೆ. ಶಿವಕುಮಾರ್ ನನಗೆ ವೈರಿಯಲ್ಲ. ಅವರು ನನಗೆ ದೊಡ್ಡ ಹಿತೈಷಿ. ಐದು ವರ್ಷ ಸರ್ಕಾರ ಸಂಪೂರ್ಣ ನಡೆಸಲಿ ಎಂದು 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ಟೆವು ಎಂದು ಪದೇ ಪದೆ ಹೇಳುತ್ತಿದ್ದಾರೆ. ಐದು ವರ್ಷ ನಾಮ್‌ಕಾವಸ್ತೆಯಾಗಿ ಅಧಿಕಾರ ಕೊಟ್ಟರು. ಒಂದು ದಿನವೂ ಅಧಿಕಾರವನ್ನು ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತಿರುಗೇಟು ಕೊಟ್ಟರು.
ಯಾರು ಶತ್ರು? ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಸುಮಲತಾ ಅಂಬರೀಶ್ ಅವರು ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಸೂಕ್ಷ್ಮವಾಗಿ ಹೆಜ್ಜೆ ಇಡುತ್ತೇನೆ: ಸುಮಲತಾ ಅಂಬರೀಶ್
ಎಚ್‌ಡಿಕೆ ಭೇಟಿ ಬಳಿಕ ಸುಮಲತಾ ಅಂಬರೀಶ್ ಮಾತನಾಡಿ, ಕುಮಾರಸ್ವಾಮಿಯವರು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ನಾನು ಏಪ್ರಿಲ್ 3ರಂದು ಮಂಡ್ಯದಲ್ಲಿ ತೀರ್ಮಾನ ಹೇಳುವುದಾಗಿ ಹೇಳಿದ್ದೇನೆ. ಆ ಸಭೆಯಲ್ಲಿ ದರ್ಶನ್, ಅಭಿಷೇಕ್ ಅಂಬರೀಶ್ ಇರುತ್ತಾರೆ. ನಾನು ರಾಜಕೀಯವಾಗಿ ಆ ಸಭೆಯನ್ನು ಕರೆದಿಲ್ಲ. ರಾಜಕೀಯವಾಗಿ 2019ಕ್ಕೂ ಮುಂಚೆ ಯಾವುದೇ ಅನುಭವ ಇರಲಿಲ್ಲ. ಆ ಬಳಿಕ ಐದು ವರ್ಷಗಳಲ್ಲಿ ಒಂದಷ್ಟು ಪಾಠ ಕಲಿಸಿದೆ. ರಾಜಕೀಯ ಚದುರಂಗದಾಟ ಅನ್ನೋದು ಗೊತ್ತಾಗಿದೆ. ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುನ್ನ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತೇನೆ. ಮಂಡ್ಯ ಜಿಲ್ಲೆಯ ಜನರಿಗೆ ಅನುಕೂಲ ಆಗಲೆಂದು ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ಜನರ ಹಿತದೃಷ್ಟಿಯನ್ನಿಟ್ಟುಕೊಂಡು ತೀರ್ಮಾನ
ಕಾಂಗ್ರೆಸ್ ನಾಯಕರು ಅವರವರ ಪಕ್ಷದ ಪರ ಹೇಳಿಕೆ ಕೊಡುತ್ತಾರೆ. ಆದರೆ, ನಾನು ಜಿಲ್ಲೆಯ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ನನ್ನ ಜತೆ ಇರುವ ಬೆಂಬಲಿಗರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅವರ ಹಿತವನ್ನೂ ನಾನು ಕಾಯಬೇಕು ಅಲ್ಲವೇ? ಎಂದು ಸುಮಲತಾ ಅಂಬರೀಶ್ ಪ್ರಶ್ನೆ ಮಾಡಿದರು.
ಡಿಕೆಶಿ ಹೇಳಿಕೆಗೆ ಕಿಡಿ
ವಿಷ- ವೈರಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, ಡಿಕೆಶಿ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ. ಹಾಗಾದರೆ ಕಾಂಗ್ರೆಸ್‌ಗೆ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ. ಕಾಂಗ್ರೆಸ್‌ಗೆ ಅಂಬರೀಶ್ ಏನು ಅನ್ಯಾಯ ಮಾಡಿದ್ದರು? 25 ವರ್ಷ ಅಂಬರೀಶ್ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದರು. ಈ ಐದು ವರ್ಷದಲ್ಲಿ ಕಾಂಗ್ರೆಸ್ ನಾಯಕರಿಗೆ ಅದು ನೆನಪಾಗಲಿಲ್ಲವಾ? ನಾನೂ ಹಾಗೆಯೇ ಪ್ರಶ್ನೆ ಮಾಡಬಹುದಲ್ವಾ? ಡಿ.ಕೆ. ಶಿವಕುಮಾರ್ ಈಗ ಈ ವಿಷಯ ಮಾತನಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರು ಯಾರು ಯಾರು ಸಂಪರ್ಕ ಮಾಡಿದ್ದಾರೆ? ಮಾಡುತ್ತಿದ್ದಾರೆ ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ ಎಂದು ಹೇಳಿದರು.