Site icon Vistara News

Lok Sabha Election 2024 : 11 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲು? ಗೆಲ್ಲೋ ಲೆಕ್ಕಾಚಾರಕ್ಕೆ ಆತಂಕ ಹಲವು!

New Parilament building and Narendra modi

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ (Congress Guarantee Scheme) ಅಬ್ಬರದ ನಡುವೆ ಚುನಾವಣೆಯಲ್ಲಿ ಕಟ್ಟಿಹಾಕಲು ರಣತಂತ್ರವನ್ನು ಹೆಣೆಯಲಾಗುತ್ತಿದೆ. ಇದರ ಭಾಗವಾಗಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಮಾತುಕತೆ ಸಹ ನಡೆಯುತ್ತಿದೆ. ಈ ಮಧ್ಯೆ ಹಲವು ಹಾಲಿ ಸಂಸದರಿಗೆ (Sitting BJP MP) ಟಿಕೆಟ್‌ ಕೈ ತಪ್ಪುವ ಆತಂಕ ಎದುರಾಗಿದೆ. ವಯಸ್ಸು ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಹಾಲಿ 11 ಸಂಸದರ ಟಿಕೆಟ್‌ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಹಳೇ ಬೇರಿನ ಜತೆಗೆ ಹೊಸ ಚಿಗುರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಮೇಜರ್‌ ಸರ್ಜರಿಗೆ ಬಿಜೆಪಿ ಹೈಕಮಾಂಡ್‌ (BJP high command) ಮುಂದಾಗಿದೆ ಎನ್ನಲಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ಈ ಬಾರಿ ಹಲವು ಹಿರಿಯ ನಾಯಕರಿಗೆ ಕೊಕ್‌ ನೀಡಲಾಗುತ್ತಿದೆ. ಇತ್ತ ಪಕ್ಷಕ್ಕೆ ಯುವ ನಾಯಕತ್ವ ಬೆಳೆಸುವ ಅನಿವಾರ್ಯತೆಯಿಂದ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹೀಗಾಗಿ 11 ಕ್ಷೇತ್ರಗಳ ಅಭ್ಯರ್ಥಿ ಬದಲಾಗುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Water supply : ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ

ಆದರೆ, ಇದೇ ವೇಳೆ ಒಮ್ಮೆಲೆಗೆ ಇಷ್ಟು ಮಂದಿಯನ್ನು ಕೈಬಿಡುವ ಯೋಚನೆ ಬಗ್ಗೆ ಮರು ಪರಿಶೀಲನೆ ಮಾಡುವುದು ಒಳಿತು. ಕಾರಣ, ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು (Assembly Election Result) ಒಮ್ಮೆ ಗಮನದಲ್ಲಿ ಇಟ್ಟುಕೊಳ್ಳಬೇಕು. ಅಲ್ಲಿನ ಮಾದರಿ ಅನುಸರಿಸಿ ಜನರಿಂದ ಏಟು ತಿನ್ನಲಾಗಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಲೇಸು ಎಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆನ್ನಲಾಗಿದೆ.

ಇದಕ್ಕೆ ಕೆಲವು ಕಾರಣಗಳನ್ನೂ ನೀಡಲಾಗಿದೆ. ಒಂದು ವೇಳೆ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದರೆ, ಅವರು ನೇರವಾಗಿ ಬಂಡಾಯ ಏಳದೇ ಹೋದರೂ ಹೊಸ ಅಭ್ಯರ್ಥಿಗೆ ಬೆಂಬಲ ನೀಡುವುದು ಅನುಮಾನವಾಗಿದೆ. ಒಂದು ವೇಳೆ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಒಳಗೊಳಗೆ ಕೆಲಸ ಮಾಡಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನೂ ಹೊರಹಾಕಲಾಗಿದೆ.

ಈಗಾಗಲೇ ಕೆಲವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಿಲ್ಲ ಎಂಬ ಬಗ್ಗೆ ಮೌಖಿಕವಾಗಿ ಹೇಳಲಾಗಿದೆ ಎನ್ನಲಾಗಿದೆ. 11 ಲೋಕಸಭಾ ಕ್ಷೇತ್ರಗಳು ಯಾವುವು ಎಂಬುದನ್ನು ನೋಡೋಣ.

ಚಿಕ್ಕಬಳ್ಳಾಪುರದಲ್ಲಿ ಸಿಡಿದಿರುವ ಬಚ್ಚೇಗೌಡ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ಎನ್. ಬಚ್ಚೇಗೌಡ‌ (BN Bachegowda) ಅವರಿಗೆ ವಯಸ್ಸಿನ ಕಾರಣದಿಂದ ಮುಂದಿನ ಬಾರಿ ಟಿಕೆಟ್‌ ಇಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರೇ ಈಚೆಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ವಿರುದ್ಧ ಈಗಾಗಲೇ ಹರಿಹಾಯ್ದಿದ್ದಲ್ಲದೆ, ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (Deputy CM and KPCC president DK Shivakumar) ಅವರನ್ನು ಭೇಟಿ ಮಾಡಿ ಬಂದಿದ್ದಾರೆ.

ತುಮಕೂರಲ್ಲಿ ಹೊಸ ಅಭ್ಯರ್ಥಿ

ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಸವರಾಜು (MP Basavaraju) ಅವರಿಗೆ 82 ವರ್ಷ ವಯಸ್ಸಾಗಿದೆ. ಅವರು ಈಗಾಗಲೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಅವರು ಪಕ್ಷ ಸೂಚಿಸುವ ಅಭ್ಯರ್ಥಿಗೆ ಬೆಂಬಲ ಕೊಡಲಿದ್ದಾರೆ ಎಂದು ಹೇಳಲಾಗಿದೆ.

ಸಿದ್ದೇಶ್ವರ್‌ಗೆ ಟಿಕೆಟ್‌ ಕೊಡಲು ರೇಣುಕಾಚಾರ್ಯ ವಿರೋಧ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ (GM Siddeshwar) ಅವರು ಹಾಲಿ ಸಂಸದರಾಗಿದ್ದಾರೆ. ಅವರಿಗೆ ಈಗ 71 ವರ್ಷವಾಗಿದೆ. ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಜಿಲ್ಲಾ ನಾಯಕರಿಂದ ಒತ್ತಾಯ ಕೇಳಿಬಂದಿದೆ. ಇದಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ತಮಗೆ ಈ ಬಾರಿ ಟಿಕೆಟ್‌ ಕೊಡಿ ಎಂದು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ: Weather Report : ಸೆ.12ರಂದು ರಾಜ್ಯದ ಇಲ್ಲೆಲ್ಲ ಮಳೆ ನಿರೀಕ್ಷೆ

ಶ್ರೀನಿವಾಸ್‌ ಪ್ರಸಾದ್‌ ಹೇಳಿದವರಿಗೇ ಇಲ್ಲಿ ಟಿಕೆಟ್‌ ಸಾಧ್ಯತೆ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ (Shrinivas Prasad) ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾರೆ. ಆದರೆ, ತಾನು ಹೇಳಿದವರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹೀಗಾಗಿ ಇಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಟೀಲ್‌ಗೆ ಟಿಕೆಟ್‌ ಕೊಡಲು ವಿರೋಧ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್‌ ಕುಮಾರ್ ಕಟೀಲ್ (Nalin Kumar Katil) ಅವರಿಗೆ ಇನ್ನೂ 56 ವರ್ಷ. ಆದರೆ, ಅವರಿಗೆ ಸ್ವಪಕ್ಷ ಹಾಗೂ ಕಾರ್ಯಕರ್ತರ ವಿರೋಧ ಹೆಚ್ಚಿದೆ. ಹೀಗಾಗಿ ಪಕ್ಷದ ಹಲವರು ಅವರಿಗೆ ಈ ಬಾರಿ ಟಿಕೆಟ್ ಕೊಡಬೇಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಗೆಲ್ಲುವ ಕುದುರೆಗಾಗಿ ಹುಡುಕಾಟ

ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ದಿ. ಸುರೇಶ್‌ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ (Mangala Angadi) ಸಂಸದರಾಗಿದ್ದಾರೆ. ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ಸ್ಪರ್ಧೆ ಮಾಡಿದ್ದರು. ಆದರೆ, ಕಾಂಗ್ರೆಸ್‌ ವಿರುದ್ಧ ಕೇವಲ 5 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಇಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇಕಡಾ 19.85 ರಷ್ಟು ಕುಸಿತ ಕಂಡಿತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್‌ ಈ ಬಾರಿ ಇಲ್ಲಿ ಗೆಲ್ಲುವ ಕುದುರೆಯನ್ನು ಹುಡುಕುತ್ತಿದೆ. ಆದರೆ, ಅಭ್ಯರ್ಥಿಯನ್ನು ಬದಲಾಯಿಸಿದರೆ ಅಂಗಡಿ ಕುಟುಂಬದಿಂದ ವಿರೋಧ ವ್ಯಕ್ತವಾಗುವ ಭಯ ಕಾಡುತ್ತಿದೆ.

ವಿಜಯಪುರದಲ್ಲಿ ಕಣ್ಣಿಟ್ಟಿರುವ ಕಾರಜೋಳ

ವಿಜಯಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ರಮೇಶ್ ಜಿಗಜಿಣಗಿಗೆ (Ramesh Jigajinagi) ಈಗ 71 ವರ್ಷವಾಗಿದೆ. ಹೀಗಾಗಿ ಬಿಜೆಪಿ ನಿಯಮದ ಅನುಸಾರ ಅವರಿಗೆ ಟಿಕೆಟ್‌ ಕೈತಪ್ಪುವುದು ಪಕ್ಕಾ ಎಂದು ಹೇಳಲಾಗಿದೆ. ಇಲ್ಲಿ ಗೋವಿಂದ ಕಾರಜೋಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಕಾರಜೋಳ ಸೇರಿದಂತೆ ಯಾರಿಗೇ ಟಿಕೆಟ್‌ ಕೊಟ್ಟರೂ ಜಿಗಜಿಣಗಿ ಕಡೆಯಿಂದ ಬೆಂಬಲ ಸಿಗುವುದು ಮಾತ್ರ ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: Minister D Sudhakar : ತರಲೆ ಮಾಡಲೆಂದೇ ನನ್ನ ಮೇಲೆ ಕೇಸ್‌; ಅಟ್ರಾಸಿಟಿ ಕೇಸ್‌ ಬಗ್ಗೆ ಡಿ. ಸುಧಾಕರ್‌ ಸಿಡಿಮಿಡಿ

ಬಾಗಲಕೋಟೆಯಲ್ಲಿ ಗದ್ದಿಗೌಡರ್‌ ಬೆಂಬಲ ಸಿಗುವುದು ಕಷ್ಟ

ಬಾಗಲಕೋಟೆ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ್ (PC Gaddigowdar) ಅವರಿಗೆ 72 ವರ್ಷ ವಯಸ್ಸಾಗಿದೆ. ಇಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ನಿರಾಣಿ ಇಲ್ಲವೇ ಹೊಸ ಮುಖಕ್ಕೆ ಕೊಟ್ಟರೂ ಗದ್ದಿಗೌಡರ್‌ ಬೆಂಬಲ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

ಬಳ್ಳಾರಿಗೆ ಶ್ರೀರಾಮುಲುಗೆ ಟಿಕೆಟ್‌ ನೀಡುವ ಸಾಧ್ಯತೆ

ಬಳ್ಳಾರಿ ಕ್ಷೇತ್ರದ ಹಾಲಿ ಸಂಸದರಾಗಿರುವ ವೈ. ದೇವೇಂದ್ರಪ್ಪ (Y DEVENDRAPPA) ಅವರಿಗೆ ಈಗ 72 ವರ್ಷವಾಗಿದೆ. ಹೀಗಾಗಿ ಇವರಿಗೆ ಟಿಕೆಟ್‌ ಕೈತಪ್ಪುವ ಆತಂಕ ಇದೆ. ಇನ್ನು ಇಲ್ಲಿ ಇವರಿಗೆ ಪ್ರತಿಸ್ಪರ್ಧಿಯಾಗಿ ಬಹುತೇಕ ಮಾಜಿ ಸಚಿವ ಬಿ. ಶ್ರೀರಾಮುಲು ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಅಭ್ಯರ್ಥಿ ಬದಲಾದರೆ ಸಿಗುವುದೇ ಕರಡಿ ಬೆಂಬಲ?

ಕೊಪ್ಪಳ ಕ್ಷೇತ್ರದಲ್ಲಿ ಕರಡಿ ಸಂಗಣ್ಣ (Karadi Sanganna) ಹಾಲಿ ಸಂಸದರಾಗಿದ್ದಾರೆ. ಅವರಿಗೆ ಈಗ 72 ವರ್ಷವಾಗಿದೆ. ಹೀಗಾಗಿ ಅವರನ್ನು ಬದಲಾವಣೆ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಆದರೆ, ಅವರ ಕುಟುಂಬದವರನ್ನು ಬಿಟ್ಟು ಬೇರೆ ಯಾರಿಗೇ ಕೊಟ್ಟರೂ ಅವರ ಬೆಂಬಲ ಸಿಗುವುದಿಲ್ಲ.

ಇದನ್ನೂ ಓದಿ: Bitcoin Scam : ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದ ಬಿಟ್‌ ಕಾಯಿನ್‌ ಹಗರಣದ ತನಿಖೆ ಚುರುಕು; 3 ಆರೋಪಿಗಳ ಮನೆಗೆ ದಾಳಿ

ಚಿಕ್ಕೋಡಿಯಲ್ಲಿ ಜೊಲ್ಲೆಗೆ ಟಿಕೆಟ್‌ ಮಿಸ್?

ಚಿಕ್ಕೋಡಿ‌ ಕ್ಷೇತ್ರದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿ ಕತ್ತಿ ಸಹೋದರನಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜೊಲ್ಲೆ ಕುಟುಂಬ ಬೇರೆಯವರಿಗೆ ಬೆಂಬಲ ಕೊಡುತ್ತದೆಯೇ? ಅದರಲ್ಲೂ ಕತ್ತಿ ಕುಟುಂಬಕ್ಕೆ ಬೆಂಬಲ ಕೊಡುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

Exit mobile version