ಬೆಂಗಳೂರು: ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ರಾಜ್ಯಾದ್ಯಂತ 10ಕ್ಕೂ ಹೆಚ್ಚು ಕಡೆಗಳಲ್ಲಿ ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ (Lokayukta Raid) ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬೆಂಗಳೂರು ಹಾಗೂ ಮತ್ತಿತರ ಕಡೆ 6 ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಚೀಫ್ ಜನರಲ್ ಮ್ಯಾನೇಜರ್ ಎಂಎಲ್ ನಾಗರಾಜ್, ಪಿಡಿಓ ಡಿಎಂ ಪದ್ಮನಾಭ, ಸೂಪರಿಂಟೆಂಡೆಂಟ್ ಇಂಜಿನಿಯರ್ ಎನ್. ಸತೀಶ್ ಬಾಬು, ಕೆಆರ್‌ಐಡಿಎಲ್ ಎಇಇ ಸೈಯದ್ ಮುನೀರ್ ಅಹ್ಮದ್ ಎಂಬವರ ಮನೆಗಳಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ರಾಮನಗರದಲ್ಲಿ ಚನ್ನೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹೆಚ್‌ಎಸ್ ಸುರೇಶ್, ಟೌನ್ ಪ್ಲಾನಿಂಗ್ ಮೆಂಬರ್ ಸೆಕ್ರೆಟರಿ ಮತ್ತು ಜಂಟಿ ನಿರ್ದೇಶಕ ಮಂಜೇಶ್ ಬಿ. ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಗ್ರಾ.ಪಂ ಸದಸ್ಯ ಸುರೇಶ್ ಮೇಲೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಸೀಗೆಹಳ್ಳಿ ಮನೆ ಮೇಲೆ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನಾಗರಾಜ್ ಕೆಲ ದಿನಗಳ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಟ್ರ್ಯಾಪ್ ಆಗಿದ್ದರು. ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದು, ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಾಜ್ ಪತ್ನಿಯ ಸಮ್ಮುಖದಲ್ಲಿ ನಾಗರಾಜ್‌ಗೆ ಸಂಬಂಧಿಸಿದ ಬಿಎಡ್ ಕಾಲೇಜ್, Ded ಕಾಲೇಜು, ಐಟಿಐ ಕಾಲೇಜು, ಪಿಯು ಕಾಲೇಜ್‌ಗಳನ್ನು ತಪಾಸಿಸಲಾಗುತ್ತಿದೆ. ನಾಗರಾಜ್ ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಮಂಜೇಶ್ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಮಂಡ್ಯದಲ್ಲಿ ಮೂರು ಕಡೆ, ಮಳವಳ್ಳಿ ತಾಲೂಕಿನ ಹಲಗೂರು ಹಾಗೂ ಗುಂಡಾಪುರದಲ್ಲಿ ಮಂಜೇಶ್ ಸಂಬಂಧಿ ಸುರೇಂದ್ರ ಎಂಬವವರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮದ್ದೂರಿನ ಎಸ್.ಐ.ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿಯ ಮನೆಯ ಮೇಲೂ ದಾಳಿ ನಡೆಸಲಾಗಿದೆ. ನಗರದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಪ್ಲಾನ್, ಒಸಿ ನೀಡಲು ಭಾರಿ ಪ್ರಮಾಣದಲ್ಲಿ ಲಂಚ ಪಡೆದಿರುವ ಆರೋಪ ಮಂಜೇಶ್ ಮೇಲಿದೆ. ಪ್ಲಾನ್ ಉಲ್ಲಂಘಿಸಿದ ಕಟ್ಟಡಗಳಿಗೂ ಒಸಿ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Lokayukta Raid : ಹೆರಿಗೆ ಮಾಡಿಸಲು ಕೊಡಬೇಕು ಗರಿ ಗರಿ ನೋಟು; ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್