Site icon Vistara News

Lokayukta Raid : ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವಿರೂಪಾಕ್ಷಪ್ಪ ಮಾಡಾಳ್‌, ನಾಳೆಗೆ ಲಿಸ್ಟಿಂಗ್‌

Madalu lokayukta

#image_title

ಬೆಂಗಳೂರು: ನಿರೀಕ್ಷೆಯಂತೆಯೇ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು (Anticipatory bail) ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಗುರುವಾರ ಜಲಮಂಡಳಿ ಅಧಿಕಾರಿ ಮಾಡಾಳ್‌ ಪ್ರಶಾಂತ್‌ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದ ಪ್ರಕರಣದಲ್ಲಿ ಅವರ ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಮೊದಲನೇ ಆರೋಪಿ ಎಂದು ಗುರುತಿಸಿ ಜನಪ್ತಿನಿಧಿಗಳ ನ್ಯಾಯಾಲಯಕ್ಕೆ ಎಫ್‌ಐಆರ್‌ ಸಲ್ಲಿಸಲಾಗಿತ್ತು. ಪೊಲೀಸರು ಕಳೆದ ನಾಲ್ಕು ದಿನಗಳಿಂದ ಮಾಡಾಳು ವಿರೂಪಾಕ್ಷಪ್ಪ ಅವರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದು ಫಲ ನೀಡಿಲ್ಲ. ಅವರು ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸಾರ್ವಜನಿಕ ವಲಯದ ಊಹಾಪೋಹ ಈಗ ನಿಜವಾಗಿದೆ.

ವಿರುಪಾಕ್ಷಪ್ಪ ಮೂಡಾಳ್ ಅವರು ಸೋಮವಾರ ಮುಂಜಾನೆ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಮುಂದೆ ವಕೀಲರ ಮುಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ವಕೀಲರು ಶೀಘ್ರ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಕೋರ್ಟ್‌ ಮಂಗಳವಾರ ಲಿಸ್ಟಿಂಗ್‌ಗೆ ಇಡುವುದಾಗಿ ತಿಳಿಸಿದೆ.

ಗುರುವಾರ ಸಂಜೆ ಶಾಸಕರ ಕಚೇರಿಗೇ ಲೋಕಾಯುಕ್ತ ದಾಳಿ ನಡೆಸಿ 40 ಲಕ್ಷ ರೂ. ನಗದು ಹಣದೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಮಾಡಾಳ್‌ ಪ್ರಶಾಂತ್‌ ಅವರನ್ನು ಬಂಧಿಸಿತ್ತು. ಇದು ವಿರೂಪಾಕ್ಷಪ್ಪ ಮಾಡಾಳ್‌ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ಟೆಂಡರ್‌ಗೆ ಸಂಬಂಧಿಸಿ ಲಂಚದ ಮೊತ್ತವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಈ ನಡುವೆ, ಇತ್ತ ಬೆಂಗಳೂರಿನಲ್ಲಿ ದಾಳಿ ನಡೆಯುತ್ತಿದ್ದಂತೆಯೇ ಅತ್ತ ಚನ್ನಗಿರಿಯ ಚನ್ನೇಶ್‌ ನಗರದ ಮನೆಯಲ್ಲಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಮಲ್ಲಿಕಾರ್ಜುನ್‌ ಅವರು ಮನೆ ಬಿಟ್ಟು ಪರಾರಿಯಾಗಿದ್ದವರು ಬಳಿಕ ನಾಪತ್ತೆಯಾಗಿದ್ದಾರೆ. ರಾಜ್ಯ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಪರಾರಿಯಾದ ಬಳಿಕ ಮಾಡಾಳ್‌ ಅವರು ಸಿಎಂ ಸೂಚನೆಯ ಮೇರೆಗೆ ಕೆಎಸ್‌ ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊಬೈಲ್‌ ಮೂಲಕ ಟ್ರ್ಯಾಕ್‌ ಮಾಡಬಹುದಾದ ಸಾಕಷ್ಟು ತಂತ್ರಜ್ಞಾನಗಳಿದ್ದರೂ ಮಾಡಾಳ್‌ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರವೇ ಅವರ ಬಂಧನದ ವಿಚಾರದಲ್ಲಿ ನಿಧಾನಗತಿಯನ್ನು ಅನುಸರಿಸುವ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತಿದೆ ಎಂದು ಹೇಳಲಾಗುತ್ತಿತ್ತು.

ಪ್ರಶಾಂತ್‌ ಕಸ್ಟಡಿಗೆ ಪೊಲೀಸರ ಮನವಿ

ಈ ನಡುವೆ, ಈಗಾಗಲೇ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳ ಬಗ್ಗೆ ಪ್ರಧಾನ ಆರೋಪಿಯಾಗಿರುವ ಪ್ರಶಾಂತ್‌ ಮಾಡಾಳ್‌ನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆಯಲು ಮುಂದಾಗಿದೆ. ಪ್ರಶಾಂತ್‌ ಮತ್ತು ಇತರ ಇಬ್ಬರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.

ಇದನ್ನೂ ಓದಿ : Lokayukta Raid: ಲೋಕಾಯುಕ್ತ ಬಲಪಡಿಸಿದ್ದೇ ಬಿಜೆಪಿ; ದಾಳಿಯಿಂದ ಪಕ್ಷಕ್ಕೆ ಮುಜುಗರ ಆಗಿಲ್ಲ: ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆ

Exit mobile version