ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ತಲಾ 5000 ರೂಪಾಯಿ ಲಂಚ ಪಡೆಯುವಾಗ ಉಪ ತಹಸೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ, ಲೋಕಾಯುಕ್ತ ಪೊಲೀಸರಿಗೆ (Lokayukta Raid) ಸಿಕ್ಕಿಬಿದ್ದಿದ್ದಾರೆ. ನಿಪ್ಪಾಣಿ ಉಪ ತಹಸೀಲ್ದಾರ್ ಅಭಿಜಿತ್ ಬೋಂಗಾಳೆ ಜತೆ ಗ್ರಾಮ ಲೆಕ್ಕಿಗ ಪರೇಸ್ ಹಟ್ಟಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ಬಳಕೆ, ಗಾಂಜಾ ಸೇವನೆ; ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಪರಿಶೀಲನೆ
ರಾಮನಗರ: ಕೈದಿಗಳು ಗಾಂಜಾ ಸೇವನೆ ಹಾಗೂ ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ನೇತೃತ್ವದ ಪೊಲೀಸರ ತಂಡ ಬುಧವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಟೌನ್ ವ್ಯಾಪ್ತಿಯ 7 ಇನ್ಸ್‌ಪೆಕ್ಟರ್‌ಗಳು ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ಸತತ ಎರಡು ಗಂಟೆಗಳ ಕಾಲ ಕಾರಾಗೃಹ ಪರಿಶೀಲನೆ ನಡೆಸಿದರು. ಮೊಬೈಲ್ ಹಾಗೂ ಗಾಂಜಾ ಬಳಸುತ್ತಿದ್ದ ಕೈದಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವ ಎಎಸ್‌ಪಿ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಕಾರಾಗೃಹದ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | Terrorists in Bengaluru : ಬೆಂಗಳೂರಲ್ಲಿ ರಕ್ತದೋಕುಳಿಗೆ ಸಜ್ಜಾಗಿದ್ದ ಐವರು ಶಂಕಿತ ಉಗ್ರರಿಗೆ 7 ದಿನ ಕಸ್ಟಡಿ
ರಸ್ತೆ ಬದಿ ನಿಂತಿದ್ದ ಆಟೋಗೆ ಬೈಕ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ
ಯಾದಗಿರಿ: ರಸ್ತೆ ಬದಿ ನಿಂತಿದ್ದ ಆಟೋಗೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರವಾಗಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರ ಬಳಿ ನಡೆದಿದೆ. ಶಹಾಪುರದಿಂದ ಯಾದಗಿರಿಗೆ ಕಡೆ ಬರುತ್ತಿದ್ದ ಬೈಕ್ ಸವಾರ, ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳೀಯರು ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಟ್ಯೂಷನ್‌ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ
ಹಾಸನ: ಮಗಳನ್ನು ಟ್ಯೂಷನ್‌ಗೆ ಬಿಡಲು ಹೋಗಿದ್ದ ತಂದೆ ಸ್ಕೂಟರ್ನಲ್ಲಿ ಕುಳಿತಿದ್ದಂತೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಲಕ್ಷ್ಮಣ (42) ಮೃತಪಟ್ಟವರು. ಹಾಸನದಲ್ಲಿ ಈ ಘಟನೆ ನಡೆದಿದ್ದು ಅವರನ್ನು ತಕ್ಷಣದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅದಕ್ಕಿಂತ ಮೊದಲೇ ಪ್ರಾಣ ಹೋಗಿತ್ತು.
ಲಕ್ಷ್ಮಣ ಅವರ ತಮ್ಮ ಪುತ್ರಿಯನ್ನು ಬೆಳಿಗ್ಗೆ 5.30ಕ್ಕೆ ಟ್ಯೂಷನ್‌ಗೆ ಬಿಡಲು ಆ್ಯಕ್ವಿವ್ ಹೋಂಡಾದಲ್ಲಿ ಹೋಗಿದ್ದರು. ಮಗಳು ಸ್ಕೂಟರ್ನಿಂದ ಇಳಿದರು ಸೆಂಟರ್ಗೆ ಹೋಗುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನೋವಿನಿಂದ ಅವರು ಸ್ಕೂಟರ್ನಿಂದ ಕೆಳಕ್ಕೆ ಬಿದ್ದಿದ್ದಾರೆ. ಅಪ್ಪ ಕುಸಿದು ಬಿದ್ದಿದ್ದನ್ನು ಕಂಡು ಓಡಿ ಬಂದಿದ್ದ ಮಗಳು ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ.
ಇದನ್ನೂ ಓದಿ | Auto Rickshaw Accident: ಚಳ್ಳಕೆರೆಯಲ್ಲಿ ಆಟೋ ಪಲ್ಟಿಯಾಗಿ 6 ವಿದ್ಯಾರ್ಥಿಗಳಿಗೆ ಗಾಯ
ಸ್ಥಳೀಯರ ನೆರವಿನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಮಗಳು. ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಲಕ್ಷ್ಮಣ ಅವರು ಹಾಸನದ ಹೇಮಾವತಿ ನಗರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.