Site icon Vistara News

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Lokayukta Raid

ಮೈಸೂರು: ಆಹಾರ ಸರಬರಾಜು ಮಾಡಿದ ಬಿಲ್ ಪಾವತಿಸಲು 30 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ.

ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ನಟೇಶ್ ಎಂಬುವರಿಗೆ ಆಹಾರ ಪೂರೈಕೆ ಮಾಡಿದ ಬಿಲ್ ಪಾವತಿಸಲು 30 ಸಾವಿರ ಲಂಚಕ್ಕೆ ವಿಜಯ್ ಕುಮಾರ್ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀರಿಗೆ ನಟೇಶ್‌ ದೂರು ನೀಡಿದ್ದರು.

ಮೊದಲೇ ನಡೆದಿದ್ದ ಮಾತುಕತೆಯಂತೆ ಎಫ್‌ಡಿಎ ವಿಜಯ್‌ ಕುಮಾರ್‌, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ವಿ.ಕೃಷ್ಣಯ್ಯ ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್‌, ರೂಪಶ್ರೀ, ಲೋಕೇಶ್‌, ಸಿಬ್ಬಂದಿಯಾದ ಮೋಹನ್‌ ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್‌, ಲೋಕೇಶ್‌, ಪೃಥ್ವೀಶ್‌, ಶೇಖರ್‌ ಇದ್ದರು.

ಇದನ್ನೂ ಓದಿ | Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

ದೊಡ್ಡಬಳ್ಳಾಪುರ: ಕೊಲೆ ಆರೋಪಿಯೊಬ್ಬನ (Murder Suspect) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Encounter) ಬಂಧಿಸಿದ್ದಾರೆ. ಹೇಮಂತ್‌ ಕುಮಾರ್‌ ಗೌಡ ಎಂಬ ಯುವಕನ ಕೊಲೆ (Murder Case) ಆರೋಪಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಮಿಟ್ಟೆ ಕಾಲಿಗೆ ಗುಂಡು ಹಾರಿಸಿ (Shoot out) ಬಂಧಿಸಲಾಗಿದೆ.

ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಬಳಿ ಘಟನೆ ನಡೆದಿದೆ. ರೌಡಿ‌ ಶೀಟರ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಮೇಲೆ ಈತ ಹಲ್ಲೆ‌ ನಡೆಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ಅವರಿಂದ ಫೈರಿಂಗ್ ನಡೆದಿದೆ.

ಈತ ಕೊಲೆ ಕೇಸ್‌ನ 2ನೇ ಆರೋಪಿಯಾಗಿದ್ದಾನೆ. ಮೇ 11ರಂದು ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗ ಹೇಮಂತ್ ಕುಮಾರ್ ಗೌಡ (27) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೇಮಂತ್ ಅವರನ್ನು ಅಟ್ಟಾಡಿಸಿ ಕೊಲೆ ಮಾಡಿ ಆರೋಪಿಗಳು ಕಾರಿನಲ್ಲಿ ಶವದ ಜೊತೆ ರೌಂಡ್ಸ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್​ ಮಿಟ್ಟೆ ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಸಾಫ್ಟ್‌ವೇರ್‌ ಎಂಜಿನಿಯರ್‌ ಪತ್ನಿಯ ಅನುಮಾನಾಸ್ಪದ ಸಾವು

ಬೆಂಗಳೂರು: ರಾಜಧಾನಿಯ (bengaluru crime) ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ (woman self harming) ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರು ಸಾಫ್ಟ್‌ವೇರ್‌ ಎಂಜಿನಿಯರ್‌ (Software engineer) ಪತ್ನಿಯಾಗಿದ್ದು, ಇದೊಂದು ಅಸಹಜ ಸಾವು (UDR Case) ಎಂದು ಮೃತಳ ತವರಿನವರು ಶಂಕಿಸಿದ್ದಾರೆ.

ಮಂಜುನಾಥ ನಗರದ ಸಂಧ್ಯಾ ಮೃತ ಮಹಿಳೆ. ನೆನ್ನೆ ರಾತ್ರಿ ಘಟನೆ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಮೃತ ದೇಹ ಪತ್ತೆಯಾಗಿದೆ. ಇವರಿಗೆ ಮದುವೆಯಾಗಿ 5 ವರ್ಷ ಆಗಿತ್ತು. ನಾಲ್ಕು ವರ್ಷದ ಗಂಡು ಮಗುವೂ ಇತ್ತು. ಅಳಿಯ ಜಯಪ್ರಕಾಶ್‌ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲು ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ಈ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ತಂದೆ ಆಪಾದಿಸಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version