Site icon Vistara News

Lokayukta Raid: 14 ಜಿಲ್ಲೆಗಳಲ್ಲಿ 15 ಭ್ರಷ್ಟರ ಮೇಲೆ ಲೋಕಾ ದಾಳಿ; 31.57 ಕೋಟಿ ರೂ. ನಗ, ನಗದು ವಶ

Lokayukta raid Ajit rai

ಬೆಂಗಳೂರು: ಬುಧವಾರ ರಾಜ್ಯದ 14 ಜಿಲ್ಲೆಗಳಲ್ಲಿ 15 ಭ್ರಷ್ಟ ಅಧಿಕಾರಿಗಳ (Corrupt officers) ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta raid) ಮುಗಿಬಿದ್ದಿದ್ದರು. 15 ಅಧಿಕಾರಿಗಳಿಗೆ ಸಂಬಂಧಿಸಿದ 62 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು, ದಾಳಿಯ ವೇಳೆ ಭಾರಿ ಮೊತ್ತ ನಗದು, ಚಿನ್ನಾಭರಣ, ಆಸ್ತಿಪಾಸ್ತಿ ಪತ್ತೆಯಾಗಿದೆ. ಇವರ ಮನೆ ಮತ್ತು ಕಚೇರಿಗಳಲ್ಲಿ ಸಿಕ್ಕಿದ ನಗದು ಮತ್ತು ಚಿನ್ನಾಭರಣದ ಮೌಲ್ಯ 31.57 ಕೋಟಿ ರೂ. ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಇದರ ಜತೆಗೆ ಆಸ್ತಿ ಪಾಸ್ತಿ ಮತ್ತು ಇತರ ಹೂಡಿಕೆಗಳ ದಾಖಲೆಗಳು ಸಿಕ್ಕಿದ್ದು, ಅವುಗಳ ಮೊತ್ತವನ್ನು ಅಂದಾಜು ಮಾಡಲಾಗುತ್ತಿದೆ.

ಭ್ರಷ್ಟ ಅಧಿಕಾರಿಗಳು ಮಾತ್ರವಲ್ಲ ಅವರ ಸಂಬಂಧಿಕರ ಮನೆಗೂ ದಾಳಿ ನಡೆದಿದೆ. ಇವರೆಲ್ಲ ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದ ಈ ಅಧಿಕಾರಿಗಳ ಎಲ್ಲ ಚಲನವಲನಗಳ ಮೇಲೆ ಕಣ್ಣಿಟ್ಟು ಈ ದಾಳಿ ನಡೆದಿದೆ. ಇವರ ಮನೆಗಳಲ್ಲಿ ಹಣ ಮಾತ್ರವಲ್ಲದೆ, ಐಷಾರಾಮಿ ಕಾರುಗಳು, ನಕ್ಷತ್ರ ಆಮೆ, ಮದ್ಯ ಮತ್ತು ಇತರ ವಸ್ತುಗಳು ಸಿಕ್ಕಿವೆ.

ದಾಳಿ ನಡೆದ 14 ಜಿಲ್ಲೆಗಳು: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಡಿಕೇರಿ, ತುಮಕೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಬೆಳಗಾವಿ, ಕೋಲಾರ, ಯಾದಗಿರಿ.

ದಾಳಿಗೆ ಒಳಗಾದ ಅಧಿಕಾರಿಗಳು ಮತ್ತು ಸಿಕ್ಕಿದ ಸಂಪತ್ತು

1. ಕೆ.ಆರ್‌ ಪುರದ ತಹಸೀಲ್ದಾರ್‌ ಅಜಿತ್‌ ರೈ 1000 ಕೋಟಿಯ ಒಡೆಯ!

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೊರಕೆಯ ಅಜಿತ್‌ ರೈಗೆ ಉದ್ಯೋಗ ಸಿಕ್ಕಿದ್ದೇ ಅನುಕಂಪದ ಆಧಾರದಲ್ಲಿ. ಸರ್ವೇಯರ್‌ ಆಗಿದ್ದ ತಂದೆ ಆನಂದ ರೈ ಕರ್ತವ್ಯದಲ್ಲಿದ್ದಾಗಲೇ ನಿಧನರಾದ ಹಿನ್ನೆಲೆಯಲ್ಲಿ ಸಿಕ್ಕಿದ ಹುದ್ದೆಯನ್ನು ಹಣ ಮಾಡುವುದಕ್ಕಾಗಿ ಬಳಸಿಕೊಂಡ ಆರೋಪ ಅಜಿತ್‌ ರೈ ಅವರ ಮೇಲೆ ಇದೆ.

ಅಜಿತ್‌ ರೈ ಅವರಿಗೆ ಸೇರಿದ ಸಹಕಾರ ನಗರ, ಕೆ.ಆರ್‌. ಪುರದ ಮನೆಗಳು ಸೇರಿದಂತೆ 11 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅವರು ತಮ್ಮ ಹೆಸರಲ್ಲಿ ಮಾತ್ರವಲ್ಲ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಬೇನಾಮಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ದಾಳಿಯ ಸಂದರ್ಭದಲ್ಲಿ 40 ಲಕ್ಷ ರೂ. ನಗದು ಸೇರಿದಂತೆ 1.90 ಕೋಟಿ ಮೌಲ್ಯದ ನಗ-ನಗದು ಪತ್ತೆಯಾಗಿದೆ.

ನಾಲ್ಕು ಫಾರ್ಚ್ಯುನರ್, ನಾಲ್ಕು ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಸರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ವಕ್ಕೆ ಪಡೆಯಲಾಗಿದೆ. ನಾಲ್ಕು ಐಶಾರಾಮಿ ಬೈಕ್‌ಗಳು ಇದ್ದು, ಇವರ ಬಳಿಕ 1000 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ.

2. ಚೇತನಾ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಬಾಗಲಕೋಟೆ

ಯಮನಪ್ಪ ಎಂಬವರ ಪತ್ನಿಯಾಗಿರುವ ಚೇತನಾ ಅವರಿಗೆ ಸೇರಿದ ಎರಡು ಸ್ಥಳಗಳಲ್ಲಿ ಶೋಧ ನಡೆದಿದೆ. 32 ಲಕ್ಷ ನಗದು ಸೇರಿದಂತೆ ಅಂದಾಜು 1.45 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಮನೆಯಲ್ಲಿ ಬೆಲೆ ಬಾಳುವ ನಕ್ಷತ್ರ ಆಮೆಗಳು ಕೂಡಾ ಸಿಕ್ಕಿದ್ದು, ಬಾಗಲಕೋಟೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇತನಾ ಮನೆಯಲ್ಲಿ ನಕ್ಷತ್ರ ಆಮೆಗಳು ಪತ್ತೆ

3. ಕೃಷ್ಣ ರಾಮಪ್ಪ ಶಿರೂರ್, ಕೃಷಿ ಅಧಿಕಾರಿ, ಬೀಳಗಿ ಬಾಗಲಕೋಟೆ

ಆರೋಪಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಶೋಧ ಕಾರ್ಯ ನಡೆಸಿದೆ. 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

4. ಜಿನ್ನಪ್ಪ ಪದ್ಮಣ್ಣ ಶೆಟ್ಟಿ, AEE, ಕುಡಿಯುವ ನೀರು, ನೈರ್ಮಲ್ಯ ಇಲಾಖೆ, ಮುದ್ದೇಬಿಹಾಳ

ಮೂರು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, 1.42 ಕೋಟಿ ರೂ. ಮೌಲ್ಯದ ನಗ-ನಗದು ವಶವಾಗಿದೆ.

5. ಭೀಮನಗೌಡ ಬಿರಾದಾರ್, ಜೆಇ ಪಿಡಬ್ಲ್ಯುಡಿ ಉಪವಿಭಾಗ, ಬಸವನ ಬಾಗೇವಾಡಿ

ಆರೋಪಿಗೆ ಸೇರಿದ ಎರಡು ಸ್ಥಳಗಳ ಮೇಲೆ ದಾಳಿ ನಡೆದಿದೆ. ಶೋಧ ಕಾರ್ಯಾಚರಣೆ ವೇಳೆ 1.90 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಭೀಮನಗೌಡನ ಮನೆಯಲ್ಲಿ ಸಿಕ್ಕಿದ ಚಿನ್ನಾಭರಣಗಳು

6. ಪಿ.ಎಂ. ಅಬ್ದುಲ್ ಬಶೀರ್, FDA ಮಡಿಕೇರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಆರೋಪಿಗೆ ಸೇರಿದ 3 ಸ್ಥಳಗಳ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ 14 ಲಕ್ಷ ರೂ. ನಗದು ಸೇರಿ ಅಂದಾಜು 1.14 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

7. ಶರಣಪ್ಪ ಮಡಿವಾಳ, ಸದಸ್ಯ ಕಾರ್ಯದರ್ಶಿ, ನಗರ, ಗ್ರಾಮಾಂತರ ಯೋಜನೆ, ಸಿಂಧನೂರು

ಶರಣಪ್ಪ ಮಡಿವಾಳಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆಸಿದ ಲೋಕಾಯುಕ್ತ ಟೀಮ್‌ಗೆ 14 ಲಕ್ಷ ನಗದು ಸೇರಿದಂತೆ ಅಂದಾಜು 2.03 ಕೋಟಿ ಮೌಲ್ಯದ ಅಕ್ರಮ ಆಸ್ತಿಯ ಮಾಹಿತಿ ದೊರೆತಿದೆ.

ಶರಣಪ್ಪ ಮಡಿವಾಳ ಮನೆಯಲ್ಲಿ ಸಿಕ್ಕಿದ ಬೆಲೆಬಾಳುವ ವಸ್ತುಗಳು

8. ಕೆ.ಎಚ್. ರವಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ತುಮಕೂರು

ಆರೋಪಿಗೆ ಸೇರಿದ 6 ಸ್ಥಳಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಪರಿಶೀಲನೆ ವೇಳೆ 4.27 ಕೋಟಿ ರೂಪಾಯಿ ಮೌಲ್ಯದ ಅಕ್ರಮ‌ ಆಸ್ತಿ ಸಿಕ್ಕಿದೆ.

ಕೆ.ಎಚ್‌. ರವಿ, ತುಮಕೂರು

9. ಜಿ.ಎನ್. ಪ್ರಕಾಶ್, A.E.E, PWD ಇಲಾಖೆ ರಾಯಚೂರು

ಆರೋಪಿಗಳಿಗೆ ಸೇರಿದ 2 ಸ್ಥಳಗಳ ಮೇಲೆ ದಾಳಿ ಮಾಡಲಾಗಿತ್ತು. ಕಡತಗಳ ಪರಿಶೀಲನೆಯಿಂದ ಅಂದಾಜು 2.71 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

10. ಶೇಖರ್ ಹನುಮಂತ್ ಬಹುರೂಪಿ. ಇಇ. ಜೆಸ್ಕಾಂ, ಹಗರಿಬೊಮ್ಮನಹಳ್ಳಿ, ವಿಜಯನಗರ

ಆರೋಪಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ಹಾಗೂ ಶೋಧ ನಡೆದಿದೆ. ಕಡತಗಳ ಪರಿಶೀಲನೆಯಿಂದ ಅಂದಾಜು 3 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಶೇಖರ್‌ ಬಹುರೂಪಿ, ಹಗರಿಬೊಮ್ಮನಹಳ್ಳಿ

11. ವಿ.ರಮೇಶ್, ಅಬಕಾರಿ ನಿರೀಕ್ಷಕರು, ಗೌರಿಬಿದನೂರು

ಆರೋಪಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಟೀಂ ಅಂದಾಜು 2.44 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದೆ.

ವಿ. ರಮೇಶ್‌ ಮನೆ

12. ವಿಶ್ವನಾಥ ರೆಡ್ಡಿ,A.E.E, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು

ಆರೋಪಿಗಳಿಗೆ ಸೇರಿದ 2 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ದಾಳಿ ವೇಳೆ ಅಂದಾಜು 1.27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

13. ಕೆ.ಬಿ. ಪುಟ್ಟರಾಜು, ಎ.ಇ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ-ವಿಭಾಗ, ಸಿರಾ

ಆರೋಪಿಗೆ ಸೇರಿದ 4 ಮನೆಗಳಿಗೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಪತ್ತೆಯಾದ ಕಡತಗಳಿಂದ ಅಂದಾಜು 1.04 ಕೋಟಿ ಮೌಲ್ಯದ ಅಕ್ರಮ ಆಸ್ತಿಯ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಅಬ್ಬಬ್ಬಾ.. ತಹಸೀಲ್ದಾರ್‌ ಅಜಿತ್‌ ರೈ ಸಂಪತ್ತು ನೋಡಿ ಅಧಿಕಾರಿಗಳು ಸುಸ್ತೋ ಸುಸ್ತು!

14. ಕೋದಂಡರಾಮಯ್ಯ. ಎಇ ಗ್ರೇಡ್-2, KRIDL, ತುಮಕೂರು

ಆರೋಪಿಗೆ ಸೇರಿದ 6 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಪತ್ತೆಯಾದ ಕಡತಗಳ ಪರಿಶೀಲನೆಯಿಂದ 2.47 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

15. ಗಂಗಾಧರ್, ಯೋಜನಾ ವ್ಯವಸ್ಥಾಪಕರು, ನಿರ್ಮಿತಿ‌ ಕೇಂದ್ರ, ಚಿಕ್ಕಮಗಳೂರು

ಆರೋಪಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ಕೈಗೊಳ್ಳಲಾಯಿತು. ಪರಿಶೀಲನೆ ವೇಳೆ ಅಂದಾಜು 3.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

Exit mobile version