Site icon Vistara News

Lokayukta Raid : ಬಿಬಿಎಂಪಿ ರೆವಿನ್ಯೂ ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್!

Lokayukta raid on BBMP revenue offices

ಬೆಂಗಳೂರು: ಬಿಬಿಎಂಪಿ ರೆವಿನ್ಯೂ ಕಚೇರಿಗಳ (BBMP Revenue Office) ಮೇಲೆ ಲೋಕಾಯುಕ್ತ ಮೆಗಾ ರೇಡ್ (Lokayukta Raid) ನಡೆದಿದೆ. ಪದೇ ಪದೆ ದೂರುಗಳು ಕೇಳಿ ಬಂದಿದ್ದರಿಂದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರೇ ಖುದ್ದು ದಾಳಿ ನಡೆಸಿದ್ದಾರೆ. ಸ್ವತಃ ಅಖಾಡಕ್ಕೆ ಇಳಿದು ಭ್ರಷ್ಟ, ಸೋಮಾರಿ ಅಧಿಕಾರಿಗಳ ಬೆವರಿಳಿಸಿದ್ದಾರೆ. ಮಲ್ಲೇಶ್ವರಂ, ದೊಮ್ಮಲೂರು, ವಿದ್ಯಾರಣ್ಯಪುರ, ಜಯನಗರ, ಪದ್ಮನಾಭನಗರ, ಬನಶಂಕರಿ, ಬ್ಯಾಟರಾಯನಪುರ,‌ ಬಸವನಗುಡಿ, ಜಯನಗರ, ಗಿರಿನಗರ,‌ ಬೊಮ್ಮನಹಳ್ಳಿ, ಆರ್ ಆರ್ ನಗರ, ದಾಸರಹಳ್ಳಿ, ಯಶವಂತಪುರ ಸೇರಿದಂತೆ ಒಟ್ಟಾರೆಯಾಗಿ 45 ಕಡೆ‌ ದಾಳಿ ನಡೆಸಲಾಗಿದೆ.

ಅಕ್ರಮಗಳಿಗೆ ಸಂಬಂಧಿಸಿದಂತೆ, ಅಧಿಕಾರಿಗಳ ಬೇಜವಾಬ್ದಾರಿತನ, ಲಂಚ ಬೇಡಿಕೆ ಸೇರಿದಂತೆ ನೂರಾರು ಜನ ಬೆಂಗಳೂರಿನ ನಾಗರಿಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಸಾಲು‌ ಸಾಲು ದೂರುಗಳು ದಾಖಲಾ ಗುತ್ತಿರುವುದರಿಂದ ಗುರುವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಬಿಎಂಪಿ ಎಆರ್‌ಓ, ಆರ್‌ಓ ಕಚೇರಿಗಳ‌ ಮೇಲೆ ರೇಡ್ ಮಾಡಿದೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಏಕಕಾಲಕ್ಕೆ ಬೆಂಗಳೂರಿನ‌ 28 ವಿಧಾನಸಭಾ ಕ್ಷೇತ್ರಗಳಲ್ಲಿನ ರಾಜಾಜಿನಗರ, ಬನಶಂಕರಿ, ಕೆ.ಆರ್. ಪುರಂ, ವಿಜಯನಗರ, ಜಯನಗರ, ಮಲ್ಲೇಶ್ವರಂ, ಬ್ಯಾಟರಾಯನಪುರ ಸೇರಿದಂತೆ 45 ಕಚೇರಿಗಳ ಮೇಲೆ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನೊಳಗೊಂಡಂತೆ ಎಸ್‌ಪಿ, ಡಿವೈಎಸ್ಪಿಗಳ ನೇತೃತ್ವದಲ್ಲಿ ನೂರಾರು ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Gruha jyothi Scheme : ಗೃಹಜ್ಯೋತಿ ಬಿಲ್‌ ಬಂತಾ? ಅಪ್ಲೈ ಮಾಡಿಲ್ವಾ? ಫ್ರೀ ಬೇಕಿದ್ದರೆ ಹೀಗೆ ಮಾಡಿ!

ದಾಳಿ ವೇಳೆ ದೂರುಗಳಿಗೆ ಸಂಬಂಧಿಸಿದಂತೆ ರೆವಿನ್ಯೂ ವಿಭಾಗದಲ್ಲಿ ಬಾಕಿ ಇರುವ ಹಾಗೂ ವಿಲೇವಾರಿಯಾಗಿರುವ ಕಡತಗಳ ಪರಿಶೀಲನೆ ಮಾಡಿದ್ದು, ಲೆಕ್ಕವಿಲ್ಲದೆ ಅಧಿಕಾರಿಗಳ ಕಚೇರಿಯಲ್ಲಿ ಪತ್ತೆಯಾದ ಹಣವನ್ನು ಸೀಜ್ ಮಾಡಲಾಗಿದೆ. ಅಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರು ಕ್ರಮಕ್ಕೆ ಸೂಚಿಸಿದ್ದಾರೆ.

ಖುದ್ದು ಕಡತ ಪರಿಶೀಲನೆ

ಈ ವೇಳೆ ಲೋಕಾಯುಕ್ತರು ಅಧಿಕಾರಿಗಳ ಲಂಚದ ಬಗ್ಗೆ ಅರ್ಜಿದಾರರಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದರು. ಇನ್ನು ರಾಜಾಜಿನಗರ, ವಿಜಯನಗರ ಸೇರಿದಂತೆ ಕೆಲಸ ಆರ್‌ಓಗಳ ಕಚೇರಿಗೆ ಖುದ್ದು ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿಗಳು ಕಡತಗಳನ್ನು ಪರಿಶೀಲನೆ ಮಾಡಿ, ಅಲ್ಲಿ ಕಂಡು ಬಂದ ಲೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಇದರ ಜತೆಗೆ ಸಮಪರ್ಕವಾಗಿ ಕ್ಯಾಶ್‌ ರಿಜಿಸ್ಟರ್ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತರು, ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಉಢಾಪೆ ಉತ್ತರ ನೀಡಿದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ತಾವೇ ಅರ್ಜಿದಾರರ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಕೆಲಸವನ್ನು ಕಾಲ ಕಾಲಕ್ಕೆ ಸರಿಯಾಗಿ ಮಾಡಿಕೊಡಲಾಗಿದೆಯೇ? ಅಧಿಕಾರಿಗಳಿಗೆ ಎಷ್ಟು ಲಂಚ ನೀಡಿದ್ದೀರಿ? ಒಂದು ವೇಳೆ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಣ ನೀಡಬಾರದು ಎಂದು ಅರ್ಜಿದಾರರಿಗೆ ಸಲಹೆ ನೀಡಿದರು.

ಅನೇಕ ಸಂಗತಿಗಳು ಬೆಳಕಿಗೆ

ಲೋಕಾಯುಕ್ತರು ನಡೆಸಿದ ವೇಳೆ ಖಾತೆ ಬದಲಾವಣೆ, ಟೌನ್ ಪ್ಲಾನಿಂಗ್ ಸಂಬಂಧಿಸಿದಂತೆ ಕೆಲಸಗಳು ಪೂರ್ಣಗೊಂಡಿದ್ದರೂ ಅರ್ಜಿದಾರರಿಗೆ ದಾಖಲೆಗಳನ್ನು ನೀಡದೆ ಇರುವುದು ಬೆಳಕಿಗೆ ಬಂದಿದೆ. ಅಂತಹ ಅಧಿಕಾರಿಗಳಿಗೆ ಲೋಕಾಯುಕ್ತರು ಬೆವರಿಳಿಸಿದ್ದಾರೆ. ದಾಳಿ ವೇಳೆ ಪತ್ತೆಯಾದ ಅಕ್ರಮ ಹಣವನ್ನು ಸೀಜ್ ಮಾಡಿ ಅಂತಹ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದಾರೆ.

ಕಂದಾಯ ಇಲಾಖೆಗೆ ಸಕಾಲ ಅಡಿಯಲ್ಲಿ ಬರುವ 13 ಸೇವೆಗಳು

  1. ಖಾತಾ ವರ್ಗಾವಣೆ
  2. ಖಾತಾ ನೋಂದಣಿ
  3. ಖಾತಾ ವಿಭಜನೆ
  4. ಖಾತಾ ಒಗ್ಗೂಡಿಸುವಿಕೆ
  5. ಖಾತಾ ಉದೃತ್ವ/ಪ್ರಮಾಣ ಪತ್ರ
  6. ಏಕ ವಾಸ ಘಟಕದ ನಿವಾಸಕ್ಕಾಗಿ 2,400 ಚದರಡಿಯವರೆಗಿನ ನಿವೇಶನಗಳಲ್ಲಿ ಕಟ್ಟಡ ಯೋಜನೆ ಮಂಜೂರಾತಿ
  7. ಕಟ್ಟಡ ಸ್ವಾಧೀನಾನುಭವ ಪ್ರಮಾಣ ಪತ್ರ
  8. ಕಟ್ಟಡ ಪರವಾನಗಿ
  9. ಪ್ರಾರಂಭಿಕ ಪ್ರಮಾಣ ಪತ್ರ
  10. ವಾಣಿಜ್ಯ ಪರವಾನಗಿ
  11. ಜನನ/ಮರಣ ಪ್ರಮಾಣ ಪತ್ರ
  12. ಗುತ್ತಿಗೆದಾರರ ನೋಂದಣಿ
  13. ಮರಗಳ ವ್ಯವಸ್ಥಿತ ನಿರ್ವಹಣೆ

ಇದನ್ನೂ ಓದಿ: Gruha lakshmi : ಗೃಹಲಕ್ಷ್ಮಿ ದುಡ್ಡು ಬರೋದು ಯಾವಾಗ? ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವೇ? ಸಮಸ್ಯೆಯಾದರೆ?

ಇಷ್ಟು ಸೇವೆಗಳ ದಾಖಲೆ ನಿರ್ವಹಣೆಯನ್ನು ಜಿಲ್ಲಾ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಲೋಕಾಯುಕ್ತ ಪೊಲೀಸರಿಂದಲೂ ದಾಖಲೆ ಪರಿಶೀಲನೆ ನಡೆದಿದೆ.

Exit mobile version