ಚಿಕ್ಕಮಗಳೂರು: ʻʻಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಈ ರೀತಿ ದಾಳಿಯೇ ಆಗ್ತಿರ್ಲಿಲ್ಲ, ಅವರು ಕೇಸ್ ಮುಚ್ಚಾಕೋ ಕೆಲಸ ಮಾಡುತ್ತಿದ್ದರುʼʼ- ಲಂಚ ಪಡೆಯುವಾಗ ಮಾಡಾಳು ವಿರೂಪಾಕ್ಷಪ್ಪನ ಮಗ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಪ್ರತಿಕ್ರಿಯೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈ ದಾಳಿ ಇವತ್ತು ಯಾರೇ ಇದ್ರು ಯಾವ ವಿಚಾರದಲ್ಲೂ ಯಾರನ್ನೂ ಬಚಾವ್ ಮಾಡೋ ಪ್ರಶ್ನೆಯೇ ಇಲ್ಲ ಅನ್ನೋದಕ್ಕೆ ನಿದರ್ಶನ ಎಂದರು
ʻʻಕಾಂಗ್ರೆಸ್ ಸರ್ಕಾರದಲ್ಲಿ ಎಸಿಬಿ ಮೂಲಕ 54 ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದರು. ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೂ ಕ್ಲೀನ್ ಚಿಟ್ ಕೊಟ್ರು. ನೀರಾವರಿ ಇಲಾಖೆ ಕಳ್ಳ ಬಿಲ್ ಬರೆದವರಿಗೂ ಕ್ಲೀನ್ ಚಿಟ್ ಕೊಟ್ರು. ಮರಳು ದಂಧೆ ಅವರಿಗೂ ಕ್ಲೀನ್ ಚಿಟ್ ಕೊಟ್ರುʼʼ ಎಂದು ಕಾಂಗ್ರೆಸ್ ಮೇಲೆ ಆರೋಪಗಳ ಸುರಿಮಳೆ ಸುರಿಸಿದರು.
ʻʻರೀಡೂನಲ್ಲಿ 8 ಸಾವಿರ ಕೋಟಿ ಸರ್ಕಾರಕ್ಕೆ ನಷ್ಟ ಆಗಿದೆ ಅಂತ ಕೆಂಪಣ್ಣ ಆಯೋಗ ವರದಿ ನೀಡಿದೆ. ಪ್ರಾಮಾಣಿಕ ತನಿಖೆ ಆಗಿದ್ರೆ ಕಳ್ಳ ಯಾರು, ಲೂಟಿ ಹೊಡೆದವರು ಯಾರು ಅಂತ ಹೊರ ಬರ್ತಿತ್ತುʼʼ ಎಂದರು.
ಕಾಂಗ್ರೆಸ್‌ನವರೇ ದೊಡ್ಡ ಲೂಟಿಕೋರರು
ʻʻದಾಳಿ ಆಗಿರೋದನ್ನು ನಾನು ಮಾಧ್ಯಮದಲ್ಲಿ ನೋಡಿದೆ. ತಪ್ಪು ಯಾರು ಮಾಡಿದರೂ ತಪ್ಪೇ.ʼʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಲೋಕಾಯುಕ್ತ ದಾಳಿ ಸಂಬಂಧ ಸಿಎಂ ರಾಜೀನಾಮೆ ನೀಡಬೇಕು ಎಂಬ ಡಿಕೆ ಶಿವಕುಮಾರ್ ಒತ್ತಾಯಕ್ಕೆ ಪ್ರತಿಕ್ರಿಯಸಿದ ಅವರು, ʻʻರಾಜೀನಾಮೆ ಕೇಳುವುದಕ್ಕೆ ಡಿಕೆಶಿ ಅವರಿಗೆ ನೈತಿಕತೆ ಇಲ್ಲ. ಡಿಕೆಶಿ ವಿರುದ್ಧವೇ ಸಾಕಷ್ಟು ಭ್ರಷ್ಟಾಚಾರದ ಆರೋಪ ಇವೆ. ಅವರೇ ದೊಡ್ಡ ಲೂಟಿ ಮಾಡಿದ್ದಾರೆ, ಜೈಲಿಗೆ ಹೋಗಿ ಬಂದಿದ್ದಾರೆʼʼ ಎಂದರು.
ಇದನ್ನೂ ಓದಿ : Lokayukta Raid : ಮಾಡಾಳ್ ಪುತ್ರ ಪ್ರಶಾಂತ್ ಲಂಚಾವತಾರ ಇದೇ ಮೊದಲಲ್ಲ, ಹಿಂದೆಯೂ ಸಿಕ್ಕಿಬಿದ್ದು ಸಸ್ಪೆಂಡ್ ಆಗಿದ್ದ!