ಮೈಸೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha 2024) ನರೇಂದ್ರ ಮೋದಿ ಸೋಲಲಿದ್ದು, ಆಗ ರಸಗೊಬ್ಬರ, ಎಲ್‌ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ, ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃತಜ್ನತಾ ಸಮಾವೇಶದಲ್ಲಿ ಮಾತನಾಡಿದರು.
ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಎರಡು ಸಾವಿರ ರೂ. ಅತ್ತೆಗೊ ಸೊಸೆಗೊ ಎಂಬ ವಿಚಾರ ರ್ಚೆ ಆಗುತ್ತಿದೆ. ಯಾರು ಯಜಮಾನಿ ಆಗಿತ್ತಾರೊ ಅವರಿಗೆ ಕೊಡುತ್ತೀವಿ. ಆದಾಯ ತೆರಿಗೆ ಕಟ್ಟುವವರಿಗೆ ಎರಡು ಸಾವಿರ ರೂ. ಇಲ್ಲ ಎಂದರು.
ಈ ನಡುವೆ ಎದುರು ಕೂತಿದ್ದ ಅಭಿಮಾನಿಯೊಬ್ಬರು, ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದರು. ಇದಕ್ಕೆ ಜನರು ದನಿಗೂಡಿಸಿದರು. ಹೇ ಕೂತುಕೊಳ್ಳಪ್ಪ ಎಂದು ಗದರಿದ ಸಿದ್ದರಾಮಯ್ಯ, ಅದು ನಾವು ಮಾಡಲಾಗಲ್ಲ. ಕೇಂದ್ರವರು ಮಾಡಬೇಕು. ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ. ಮೋದಿ ಸೋಲ್ತಾರೆ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ನಾವು ರಸಗೊಬ್ಬರ ಬೆಲೆ ಕಡಿಮೆ ಮಾಡುತ್ತೇವೆ, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದರು.
ನೀವು ನನ್ನನ್ನು ಶಾಸಕನಾಗಿ ಆಯ್ಕೆ ಮಾಡದೇ ಇದಿದ್ದರೆ ಏನೂ ಕೆಲಸ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ನಾವು ಏನೇ ಕೆಲಸ ಮಾಡಿದರೂ ಅದು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ನಿಮಗೆ ಸಲ್ಲುತ್ತದೆ. ಐದು ವರ್ಷಗಳ ಆಡಳಿತ ನಡೆಸಿದ್ದು ದೇವರಾಜು ಅರಸು ಮಾತ್ರ. ಆ ನಂತರ ನಿಮ್ಮ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿತ್ತು. ಆಗ ಉತ್ತಮ ಆಡಳಿತ ನೀಡಿದ್ದಕ್ಕಾಗಿ ಜನ ಈಗಲೂ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳಿ ಗೆಲ್ಲಿಸಿದ್ದಾರೆ.
ಸಿಎಂ ಕುರ್ಚಿ ಸುಖದ ಸುಪ್ಪತ್ತಿಗೆಯ ಕುರ್ಚಿ ಅಲ್ಲ. ನಾವು ಐದು ಗ್ಯಾರಂಟಿ ಜಾರಿಗೆ ತರಲು ಮುಂದಾಗಿದ್ದೀವಿ. ಈ ಐದು ಯೋಜನೆಗಳನ್ನ ಜಾರಿಗೆ ತರಲು ತಗಲುವ ವೆಚ್ಚ 59 ಸಾವಿರ ಕೋಟಿ ರೂ ಆಗಲಿದೆ. ಮೋದಿ ಅವರು ಬಂದಾಗ ಈ ಗ್ಯಾರಂಟಿಗಳ ಬಗೆಗೆ ಮಾತನಾಡಿದ್ದರು. ಇವುಗಳನ್ನ ಜಾರಿಗೆ ತಂದ್ರೆ ರಾಜ್ಯ ದಿವಾಳಿ ಆಗಲಿದೆ ಎಂದಿದ್ದರು. ಒಬ್ಬ ಪ್ರಧಾನಿಯಾಗಿ ಹಾಗೆ ಹೇಳಿದ್ದರು. ಆದ್ರೆ ಗ್ಯಾರಂಟಿಗಳ ಬಗೆಗೆ ಒಳ್ಳೆಯ ಮಾತುಗಳನ್ನಾಡಬಹುದಿತ್ತು. ಆದ್ರೆ ಅವರು ರಾಜಕೀಯವಾಗಿ ಮಾತನಾಡ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದು 20 ದಿನಗಳಾಗಿವೆ. ಈ 20 ದಿನಗಳಲ್ಲಿ 5ಗ್ಯಾರಂಟಿಗಳನ್ನ ಈಡೇರಿಸಲು ನಿರ್ಧರಿಸಿದ್ದು ಐದು ಗ್ಯಾರಂಟಿಗಳನ್ನ ಜಾರಿಗೆ ತರೋದು ಗ್ಯಾರಂಟಿ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನ ಗೆಲ್ಲಲಿದೆ. ಬಿಜೆಪಿಯವರಿಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಲೋಕಸಭೆಯಲ್ಲಿ ಗೆಲ್ಲಲ್ಲ ಎಂದು ಗೊತ್ತಾಗಿದೆ. ನಮ್ಮ ರಾಜ್ಯದಲ್ಲಿ ರಾಹುಲ್ ಪಾದಯಾತ್ರೆ ಮಾಡಿದಾಗಲೇ ಚುನಾವಣೆ ಪ್ರಚಾರ ಆರಂಭ ಆಯ್ತು. ಎಲ್ಲರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ: Siddaramaiah: ಸಿಎಂ ಆದ ಬಳಿಕ ಇಂದು ಮೊದಲ ಬಾರಿಗೆ ಸಿದ್ದರಾಮಯ್ಯ ವರುಣಾಗೆ, ಭರ್ಜರಿ ಕೊಡುಗೆಯ ನಿರೀಕ್ಷೆ