ಯಾದಗಿರಿ: ರಸ್ತೆ, ಸೇತುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ಅಪಾಯವನ್ನು ನಿರ್ಲಕ್ಷಿಸಿ ಹುಚ್ಚಾಟ ಮಾಡುವ ವಾಹನ ಚಾಲಕರು ಹಲವು ಬಾರಿ ಅಪಾಯಕ್ಕೆ ಸಿಲುಕಿದ್ದಾರೆ. ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಪಾಠ ಕಲಿಯುತ್ತಿಲ್ಲ ಎನ್ನುವುದಕ್ಕೆ ಯಾದಗಿರಿಯಲ್ಲಿ ನಡೆದ ಘಟನೆಯೇ ಸಾಕ್ಷಿ.
ಮೊನ್ನೆ ಮೊನ್ನೆಯಷ್ಟೇ ಯಲ್ಲಾಪುರ ತಾಲೂಕಿನ ಪನಗುಳಿಯ ಗಂಗಾವಳಿ ನದಿ ಉಕ್ಕಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಚಾಲಕನೊಬ್ಬ ಅತೀವ ನಿರ್ಲಕ್ಷ್ಯದಿಂದ ಲಾರಿಯನ್ನು ಸೇತುವೆ ಮೇಲೆ ನುಗ್ಗಿಸಿದ್ದ. ಈ ವೇಳೆ ಲಾರಿ ನೀರಿನಲ್ಲಿ ಕೊಚ್ಚಿ ನದಿ ಪಾಲಾಗಿತ್ತು. ಲಾರಿಯಲ್ಲಿ ಐವರು ಇದ್ದು, ನಾಲ್ವರನ್ನು ಹೇಗೋ ರಕ್ಷಿಸಲಾಗಿತ್ತು. ಒಬ್ಬ ನಾಪತ್ತೆಯಾಗಿದ್ದ.
ಇದೇ ರೀತಿಯ ಇನ್ನೊಂದು ಘಟನೆ ಈಗ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮದರಕಲ್ ಬಳಿ ನಡೆದಿದೆ. ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದ ಕಾರಣಕ್ಕೆ ಹಳ್ಳ ತುಂಬಿ ಹರಿಯುತ್ತಿತ್ತು. ಮದರಕಲ್ ಹಾಗೂ ಹಯ್ಯಾಳ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೂ ನೀರು ಉಕ್ಕಿ ಹರಿಯುತ್ತಿತ್ತು. ಈ ವೇಳೆ, ಸಿಮೆಂಟ್ ಮೂಟೆಗಳನ್ನು ಹೊತ್ತ ಲಾರಿಯೊಂದು ಆ ದಾರಿಯಾಗಿ ಬಂತು.
ಅದು ಯಾವುದೇ ತಡೆಗೋಡೆಗಳಿಲ್ಲದ ಸೇತುವೆಯಾಗಿತ್ತು. ಮೇಲಿನಿಂದ ನೀರು ಹರಿಯುತ್ತಿತ್ತು. ಅದರ ಮೇಲೆಯೇ ಸಿಮೆಂಟ್ ತುಂಬಿದ ಲಾರಿಯನ್ನು ಹಾಯಿಸಲು ಚಾಲಕ ಮುಂದಾದ. ಆದರೆ, ಅಲ್ಲಿದ್ದವರು ಹಾಗೆ ಮಾಡದಂತೆ ಎಚ್ಚರಿಕೆ ನೀಡಿದರು. ಆದರೂ ದಾಟಿಯೇ ಬಿಡುತ್ತೇನೆ ಎಂದು ಆತ ಲಾರಿಯನ್ನು ನುಗ್ಗಿಸಿದ. ತುಂಬ ಉದ್ದವಿರುವ ಈ ಸೇತುವೆಯ ಮೇಲೆ ಸ್ವಲ್ಪ ಮುಂದೆ ಬಂದಿದ್ದಾನಷ್ಟೆ. ಆಗ ಲಾರಿ ಒಂದು ಬದಿಗೆ ಚಲಿಸಲು ಆರಂಭಿಸಿತು. ಅಷ್ಟು ಭಾರದ ಲಾರಿ ಕೂಡಾ ಆತನ ನಿಯಂತ್ರಣಕ್ಕೆ ಸಿಗದೆ ನೀರಿನಲ್ಲಿ ತೇಲುವಂತೆ ಚಲಿಸಿತು. ಕೊನೆಗೆ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಅದು ಸೇತುವೆಯಿಂದ ಕೆಳಗೆ ಉರುಳಿಯೇ ಬಿತ್ತು. ಸಿಮೆಂಟ್ ಚೀಲಗಳೆಲ್ಲ ನೀರಿನಲ್ಲಿ ಬಿದ್ದಿವೆ. ಚಾಲಕನಿಗೆ ಅಪಾಯವಾಗಿಲ್ಲವಾದರೂ ತಕ್ಷಣಕ್ಕೆ ಆತನನ್ನು ಅಲ್ಲಿಂದ ಕರೆತರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ| ಗಂಗಾವಳಿ ನದಿ ರಭಸಕ್ಕೆ ಕೊಚ್ಚಿ ಹೋದ ಲಾರಿ; ಐವರ ರಕ್ಷಣೆ, ಓರ್ವ ನಾಪತ್ತೆ