Site icon Vistara News

Lorry Strike: ಹಿಟ್‌ ಆ್ಯಂಡ್‌ ರನ್‌ ಕಾಯಿದೆ ವಿರುದ್ಧ ಸಿಡಿದೆದ್ದ ಲಾರಿ ಮಾಲೀಕರು, ಇಂದಿನಿಂದ ರಾಜ್ಯವ್ಯಾಪಿ ಮುಷ್ಕರ, 8 ಲಕ್ಷ ವಾಹನ ಬಂದ್

lorry strike

ಬೆಂಗಳೂರು: ಹಿಟ್‌ ಆ್ಯಂಡ್‌ ರನ್‌ (Hit And Run) ಅಪಘಾತ ಪ್ರಕರಣದಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ನೀಡುವ ಕೇಂದ್ರ ಸರ್ಕಾರದ ಹೊಸ ಕಾಯಿದೆಯ ಜಾರಿ ರದ್ದು ಮಾಡಲು ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ (Lorry strike) ಕರೆ ನೀಡಲಾಗಿದೆ. ರಾಜ್ಯವ್ಯಾಪಿ 8 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯದೆ ಮುಷ್ಕರ ಹೂಡಲಿವೆ. ಅಗತ್ಯ ವಸ್ತುಗಳು ಸರಬರಾಜಾಗದೆ ಕೊರತೆ ತಲೆದೋರುವ ಹಾಗೂ ಬೆಲೆಯೇರಿಕೆ ಆಗುವ ಆತಂಕ ಎದುರಾಗಿದೆ.

ಲಾರಿ ಮಾಲೀಕರ ಸಂಘಟನೆ ಅಧ್ಯಕ್ಷ ಚೆನ್ನರೆಡ್ಡಿ ನೇತೃತ್ವದಲ್ಲಿ ಮುಷ್ಕರಕ್ಕೆ ಚಾಲಕ- ಮಾಲೀಕರು ಮುಂದಾಗಿದ್ದಾರೆ. ‌ಕೇಂದ್ರ ಸರ್ಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಕೇಂದ್ರ ಸರ್ಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ ಎಂಬುದು ಲಾರಿ ಮಾಲಿಕರ ದೂರು. ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಲಾರಿ ಚಾಲಕ ಮಾಲಿಕರು ಆಗ್ರಹಿಸಿದ್ದಾರೆ.

ಹಿಟ್ ಆ್ಯಂಡ್‌ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಈ ಕಾನೂನಿನಂತೆ ಹಿಟ್‌ ಆ್ಯಂಡ್‌ ರನ್‌ ಜೀವಹಾನಿ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಆದರೆ ಸಂಬಂಧಪಟ್ಟವರ ಜೊತೆಗೆ ಚರ್ಚೆ ನಡೆಸಿದ ಬಳಿಕ ಮಾತ್ರ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಕೇಂದರ ಸಚಿವರು ಭರವಸೆ ನೀಡಿದ್ದಾರೆ.

ಏನಿದು ಹೊಸ ಕಾನೂನು?

ಅತಿವೇಗದ & ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದ ಯಾವುದೇ ಚಾಲಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡದೆ ಸ್ಥಳದಿಂದ ಪಲಾಯನ ಮಾಡಿದರೆ (ಹಿಟ್ ಆ್ಯಂಡ್‌ ರನ್) ಅಂಥವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಏಳು ಲಕ್ಷಗಳವರೆಗೆ ದಂಡವನ್ನು ವಿಧಿಸುತ್ತದೆ ಈ ಹೊಸ ಕಾನೂನು.

ಹಿಂದೆ ಕಾನೂನು ಏನಿತ್ತು?

ಹಳೆಯ, ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (IPC) ಹಿಟ್ ಮತ್ತು ರನ್ ಪ್ರಕರಣಗಳಿಗೆ ನಿರ್ದಿಷ್ಟ ನಿಬಂಧನೆಯನ್ನು ಹೊಂದಿರಲಿಲ್ಲ. ಐಪಿಸಿಯ ಸೆಕ್ಷನ್ 304ಎ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಾ ಇತ್ತು. ;ಉದ್ದೇಶಪೂರ್ವಕವಲ್ಲದ ಮತ್ತು ನಿರ್ಲಕ್ಷ್ಯದ ಕೃತ್ಯ’ದಿಂದ ಸಾವಿಗೆ ಕಾರಣವಾಗುವ ವ್ಯಾಪ್ತಿಯ ಅಡಿಯಲ್ಲಿ ಬರುವ IPCಯ ಸೆಕ್ಷನ್ 304 A ಅಡಿಯಲ್ಲಿ ದಾಖಲಿಸಲಾಗ್ತಿತ್ತು. ಅದರಡಿ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ / ದಂಡ ವಿಧಿಸಬಹುದಿತ್ತು.

ವಿರೋಧ ಯಾಕೆ?

ದೊಡ್ಡ ವಾಹನ & ಚಿಕ್ಕ ವಾಹನಗಳ ನಡುವೆ ಅಪಘಾತ ನಡೆದಾಗ ತನಿಖೆ ನಡೆಸದೆ ಭಾರಿ ಗಾತ್ರದ ವಾಹನಗಳದ್ದೇ ತಪ್ಪೆಂದು ಕೇಸ್ ಹಾಕಲಾಗುತ್ತದೆ. ಹಿಟ್ & ರನ್ ಪ್ರಕರಣದಲ್ಲಿ ಚಾಲಕರಿಗೆ 10 ವರ್ಷದವರೆಗೆ ಜೈಲು ಹಾಗೂ ದೊಡ್ಡ ಮೊತ್ತದ ದಂಡವನ್ನು ಕೂಡ ಕಟ್ಟಬೇಕಾಗುತ್ತದೆ. ಇದರಿಂದ ಲಾರಿ &ಟ್ರಕ್ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಅಪಘಾತ ನಡೆದಾಗ ಲಾರಿಗಳನ್ನು ವಶಕ್ಕೆ ಪಡೆಯಲಾಗುತ್ತದೆ. ನಂತರ ಇಂತಹ ಲಾರಿಗಳನ್ನು ಹಿಂದಿರುಗಿಸಲು ಸತಾಯಿಸುತ್ತಾರೆ. ಸಂಚಾರ ದಟ್ಟಣೆ ನೆಪವೊಡ್ಡಿ ಲಾರಿಗಳಿಗೆ ಹೆಚ್ಚು ದಂಡ ವಿಧಿಸುತ್ತಾರೆ. ದೇಶದಲ್ಲಿ ಸಾರಿಗೆ ವಲಯವು ಶೇ.27ರಷ್ಟು ಚಾಲಕರ ಕೊರತೆ ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಈ ಕಾನೂನಿಂದ ಹೊಸಬರು ಈ ವೃತ್ತಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಚಾಲಕ- ಮಾಲಿಕರ ದೂರು.

ಬೇಡಿಕೆಗಳು ಏನೇನು?

1) ಗಡಿ ಭಾಗದ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ ತೆರವು

2) ಹೆಚ್ಚುವರಿ ಪ್ರೊಜೆಕ್ಷನ್ ದಂಡ ಇಳಿಕೆ

3) ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್ಸಿ ಮತ್ತು ಪರ್ಮಿಟ್ ನವೀಕರಣಕ್ಕೆ ಅನುಮತಿ

4) ಅಪಘಾತದ ವೇಳೆ ಪೊಲೀಸರು ಚಾಲನಾ ಪತ್ರ ವಶಪಡಿಸಿಕೊಳ್ಳಬಾರದು

5) ಹೊರರಾಜ್ಯ ವಾಹನಗಳ ಅಪಘಾತವಾದಾಗ ಬಿಡುಗಡೆಗೆ ಸ್ಥಳೀಯ ವ್ಯಕ್ತಿಗಳ ಭದ್ರತೆ ಹಾಗೂ ಜಾಮೀನು ಕೇಳಬಾರದು

Exit mobile version