ಬೆಂಗಳೂರು: ಇನ್ನೂ ಬುದ್ಧಿ ಬಲಿಯದ ಕಾಲದ, ಪ್ರೌಢತೆ ಇಲ್ಲದ ಪ್ರೇಮಾಲಾಪಗಳು ಅದೆಷ್ಟು ಅಪಾಯಕಾರಿ ಎನ್ನುವುದಕ್ಕೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿರುವ ಈ ವಿದ್ಯಮಾನವೇ ಸಾಕ್ಷಿ. ಆಕೆ ಇನ್ನೂ ಪಿಯುಸಿ ಹುಡುಗಿ. ಆದರೆ, ಎಸ್ಸೆಸ್ಸೆಲ್ಸಿಯಲ್ಲಿರುವಾಗಲೇ ಪ್ರೀತಿ ಪ್ರೇಮದ ಬಲೆಗೆ ಬಿದ್ದಿದ್ದಳು. ಇದು ಈಗ ಯಾವ ಪರಿಸ್ಥಿತಿ ತಲುಪಿದೆ ಎಂದರೆ ಯುವಕರು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯನ್ನೆಲ್ಲ ಕಿತ್ತುಕೊಂಡಿದ್ದಾರೆ. ಪ್ರೇಮಾಯಣದಲ್ಲಿ ಮುಳುಗಿದ್ದ ಆಕೆಯ ಚಿತ್ರಗಳನ್ನು ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಆಕೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲ ತೆಗೆದುಕೊಂಡು ಹೋಗಿ ಕೊಟ್ಟಿದ್ದಾಳೆ. ಅದು ಕೂಡಾ ಕಳೆದ ವರ್ಷವಷ್ಟೇ ಮೃತಪಟ್ಟ ಅಮ್ಮನ ಚಿನ್ನಾಭರಣಗಳನ್ನು.
ಬೆಳಕಿಗೆ ಬಂದಿದ್ದು ಹೇಗೆ?
ಅವರದು ಸುಂದರ ಸಂಸಾರವೇ ಆಗಿತ್ತು. ಅಪ್ಪ-ಅಮ್ಮ, ಮಗಳು ಮತ್ತು ಅಪ್ಪನ ತಂದೆ ಜತೆಯಾಗಿ ವಾಸಿಸುತ್ತಿದ್ದರು. ೨೦೧೮ರಲ್ಲಿ ಅಪ್ಪನ ತಂದೆ ತೀರಿಕೊಂಡಿದ್ದರು. ೨೦೨೧ರಲ್ಲಿ ಹುಡುಗಿಯ ತಾಯಿ ಅಕಾಲ ಮರಣವನ್ನು ಅಪ್ಪಿದ್ದಾರೆ. ಈ ಎಲ್ಲ ನೋವಿನ ನಡುವೆ ಬದುಕು ಸಾಗುತ್ತಲೇ ಇತ್ತು. ಈ ಮಧ್ಯೆ, ಹುಡುಗಿಯ ತಾಯಿಯ ಒಡವೆಗಳಿಗೆ ಸಂಬಂಧಿಸಿದ ಇನ್ಶೂರೆನ್ಸ್ ಬಾಂಡ್ ನವೀಕರಣಕ್ಕೆ ಎಲ್‌ಐಸಿಯಿಂದ ನೋಟಿಸ್ ಬಂದಿದೆ. ಇದು ಕಳೆದ ಆಗಸ್ಟ್ ೮ರಂದು. ಅದುವರೆಗೂ ಮನೆಯಲ್ಲಿದ್ದ ಚಿನ್ನದ ಬಗ್ಗೆ, ಬೆಳ್ಳಿಯ ಬಗ್ಗೆ ಹೆಚ್ಚು ಚಿಂತೆ ನಡೆಸದ ಅಪ್ಪ ಆವತ್ತು ಚಿನ್ನ ಎಲ್ಲಿದೆ, ಬಾಂಡ್ ಎಲ್ಲಿದೆ ಎಂದು ಹುಡುಕಲು ಶುರು ಮಾಡಿದ್ದಾರೆ. ಆದರೆ, ಇಟ್ಟ ಜಾಗದಲ್ಲಿ ಇಲ್ಲದ ಕಾರಣ ಮಗಳನ್ನು ಕೇಳಿದ್ದಾರೆ. ಆಕೆ ಅಲ್ಲೆಲ್ಲ ಹುಡುಕಬೇಡಿ ಎಂದು ನೆಪಗಳನ್ನು ಹೇಳಿದ್ದಾಳೆ. ಅಂತಿಮವಾಗಿ ತಿಳಿದುಬಂದಿದ್ದೇನೆಂದರೆ, ಆ ಮನೆಯಲ್ಲಿದ್ದ ಅಷ್ಟೂ ಚಿನ್ನ ಮನೆ ಬಿಟ್ಟುಹೋಗಿದೆ! ಮಗಳನ್ನು ಕುಳ್ಳಿರಿಸಿ ಅಪ್ಪ ಕೇಳಿದಾಗ ಅವಳು ಹೇಳಿದ್ದು ವಂಚನೆಯ ಕಥೆ.
ಲವ್ ಮಾಡುತ್ತಿದ್ದ, ಬ್ಲ್ಯಾಕ್ ಮೇಲ್ ಮಾಡಿದ!
ಹುಡುಗಿ ಹೇಳುವ ಪ್ರಕಾರ, ಆಕೆ ಹತ್ತನೇ ತರಗತಿಯಲ್ಲಿದ್ದಾಗಲೇ ಸುಮಿತ್ ಎಂಬ ಕಾಲೇಜಿನ ಹಳೆ ವಿದ್ಯಾರ್ಥಿಯನ್ನು ಪ್ರೀತಿ ಮಾಡಿದ್ದಳು. ಅವರಿಬ್ಬರು ಜತೆಯಾಗಿ, ಖುಷಿಯಾಗಿದ್ದರು. ಅದರ ಫೋಟೊಗಳನ್ನೆಲ್ಲ ತೆಗೆದುಕೊಂಡಿದ್ದರು. ಈ ನಡುವೆ, ಸುಮಿತ್ ಆಕೆಯ ಬ್ಲ್ಯಾಕ್ ಮೇಲ್‌ಗೆ ಶುರು ಮಾಡಿದ್ದಾನೆ. ಮೊದಲು ೨,೫೦೦ ರೂ. ತಂದುಕೊಂಡು ಇಲ್ಲದಿದ್ದರೆ ನಾನು-ನೀನು ಜತೆಗಿರುವ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಪನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಹುಡುಗಿ ೨,೫೦೦ ರೂ. ತಂದು ಕೊಟ್ಟಿದ್ದಾಳೆ. ಮುಂದೆ ಅದು ೫,೦೦೦ ರೂ., ೧೦,೦೦೦ ರೂ. ಆಗಿ ಬೆಳೆದಿದೆ. ಆದರೆ, ಅವನ ಆಸೆಗೆ ಮಿತಿ ಇರಲಿಲ್ಲ.
ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬಾಲಕಿಗೆ ಕಳುಹಿಸುತ್ತಿದ್ದ ಸುಮಿತ್ ಹಣದ ಬಳಿಕ ಚಿನ್ನಕ್ಕೆ ಕಣ್ಣು ಹಾಕಿದ್ದ. ತನ್ನ ಮೊಬೈಲ್ ಗೆ ಬಂದು ಬೀಳುತ್ತಿದ್ದ ಅಶ್ಲೀಲ ಫೋಟೊಗಳಿಗೆ ಆಕೆ ಬೆದರಿದ್ದಳು. ಇದನ್ನೆಲ್ಲ ವೈರಲ್ ಮಾಡುತ್ತೇನೆ, ಕಾಲೇಜಿನ ಗೋಡೆಗಳಿಗೆ ಪೋಸ್ಟರ್‌ನಂತೆ ಅಂಟಿಸುತ್ತೇನೆ ಎಂಬ ಸುಮಿತ್ ಮಾತಿಗೆ ಹೆದರಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳನ್ನು ಒಯ್ದು ಕೊಟ್ಟಿದ್ದಳು ಎನ್ನಲಾಗಿದೆ. ಒಂದು ಹಂತದಲ್ಲಿ ಬಾಟಲಿಯಲ್ಲಿ ನೀರು ಕುಡಿಯುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ಅದನ್ನೇ ಮಾದಕ ಪಾನೀಯ ಕುಡಿಯುವಂತೆ ಬಿಂಬಿಸಿ ಹೆದರಿಸಿದ್ದನಂತೆ.
ಸುಮಿತ್ ವಿಚಾರಣೆಯಲ್ಲಿ ಹೇಳಿದ್ದೇನು?
ಇಷ್ಟು ಕಥೆಯನ್ನು ಮಗಳು ಅಪ್ಪನ ಬಳಿ ಹೇಳಿದ್ದಾಳೆ. ತಂದೆ ಸುಮಿತ್ ವಿರುದ್ಧ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ಸುಮಿತ್‌ನನ್ನು ವಿಚಾರಣೆ ಮಾಡಿದ್ದಾರೆ. ಆಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಅವನೂ ಕಳ್ಳನೆ. ಹುಡುಗಿ ತಾನೇ ತಾನಾಗಿ ಇದನ್ನೆಲ್ಲ ತಂದುಕೊಟ್ಟಿದ್ದಾಳೆ. ನಾನೇನೂ ಒತ್ತಡ ಹಾಕಿಲ್ಲ ಎನ್ನುವುದು ಅವನ ವರ್ಷನ್. ಆದರೆ, ಅವನು ಹೇಳುವ ಪ್ರಕಾರ, ನಾಪತ್ತೆಯಾಗಿರುವ ಎಲ್ಲ ಚಿನ್ನಾಭರಣ ಅವನಿಗೆ ಕೊಟ್ಟಿಲ್ಲ! ಹಾಗಿದ್ದರೆ ಉಳಿದದ್ದು ಎಲ್ಲಿ ಹೋಯಿತು?
ನನಗೆ ಕೊಟ್ಟಿದ್ದು ೬೦೦ ಗ್ರಾಂ ಮಾತ್ರ!
ಹುಡುಗಿ ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಸುಮಿತ್ ಪಿಯುಸಿಯಲ್ಲಿದ್ದ. ಅವನು ಹೇಳೋ ಪ್ರಕಾರ, ಅವನು ಆಕೆಯನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದಾನೆ. ಈ ಪ್ರೀತಿಗೆ ಕಾಣಿಕೆ ಎಂಬಂತೆ ಆಕೆ ಹಣ, ಚಿನ್ನ ತಂದುಕೊಟ್ಟಿದ್ದಾಳಂತೆ! ಆದರೆ ತನಗೆ ಕೊಟ್ಟಿರುವುದು ೬೦೦ ಗ್ರಾಂ ಮಾತ್ರ. ಅದರಲ್ಲೂ ೩೫೦ ಗ್ರಾಂ ವಾಪಸ್ ಕೊಟ್ಟಿದ್ದಾನಂತೆ. ಉಳಿದ ಚಿನ್ನವನ್ನು ಆರ್ ಆರ್ ನಗರದ ರುಪಿಕ್ ಜ್ಯುವೆಲ್ಸ್ ನಲ್ಲಿ ಅಡಮಾನ ಇಟ್ಟಿದ್ದನಂತೆ.
ಹಾಗಂತ ಸುಮಿತ್ ಹೇಳಿದ್ದು ಪೂರ್ತಿ ಸತ್ಯವೇನಲ್ಲ. ಸುಖಾಸುಮ್ಮನೆ ಆಕೆ ಹಣ, ಚಿನ್ನ ತಂದುಕೊಟ್ಟಿರುವ ಸಾಧ್ಯತೆಗಳು ಇಲ್ಲ. ಈತನೂ ಬ್ಲ್ಯಾಕ್ ಮೇಲ್ ಮಾಡಿಯೇ ಅದನ್ನು ಪಡೆದುಕೊಂಡಿದ್ದಾನೆ ಎನ್ನುವುದು ಪೊಲೀಸರಿಗೆ ಅರ್ಥವಾಗಿದೆ. ಆದರೆ, ಅವರಿಗೆ ಆ ಕ್ಷಣಕ್ಕೆ ಅರ್ಥವಾಗದೆ ಇದ್ದದ್ದು ಉಳಿದ ಚಿನ್ನ ಎಲ್ಲಿ ಹೋಯಿತು?
ಮೊಬೈಲ್ ಜಾಲಾಡಿದಾಗ ಸಿಕ್ಕಿತು ಇನ್ನೂ ೩ ಲವ್!
ಸುಮಿತ್‌ನ ವಿಚಾರಣೆಯ ಬಳಿಕ ಪೊಲೀಸರು ಈಗ ಬಾಲಕಿಯ ಮೊಬೈಲ್‌ನ್ನು ಜಾಲಾಡಿದ್ದಾರೆ. ಅದರಲ್ಲಿ ಆಕೆ ಸುಮಿತ್ ಹೊರತಾಗಿ ಇತರ ಮೂವರು ಹುಡುಗರ ಜತೆಗೂ ಪ್ರೀತಿ-ಪ್ರೇಮ ಎಂದು ಓಡಾಡಿರುವುದು ಬೆಳಕಿಗೆ ಬಂದಿದೆ. ಅವರ ಮಾತುಕತೆ, ಸಂದೇಶಗಳು, ಫೋಟೊಗಳು ಸಿಕ್ಕಿವೆ. ಹಾಗಿದ್ದರೆ, ಈ ಬಾಲಕಿ ಎಲ್ಲರಿಗೂ ಚಿನ್ನಾಭರಣವನ್ನು ಎಲ್ಲರಿಗೂ ಸಮನಾಗಿ ಹಂಚಿ ಬಿಟ್ಟಿದ್ದಾಳಾ? ಈ ಕೋನದಲ್ಲಿ ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ.
ಮನೆಯಲ್ಲಿ ಹೆತ್ತವರು ಒಂದೊಂದು ರೂಪಾಯಿ ಸೇರಿಸಿ ಕಷ್ಟಪಟ್ಟು ಮಾಡಿಟ್ಟ ಆಪತ್ ಧನವನ್ನು ಮಕ್ಕಳು ಈ ರೀತಿ ತಮ್ಮ ಪ್ರೀತಿ-ಪ್ರೇಮದ ಆಟಕ್ಕೆ ಬಳಸಿಕೊಳ್ಳುವುದು ಒಂದು ಕಡೆಯಾದರೆ, ಹೆಣ್ಮಕ್ಕಳನ್ನು ಬ್ಲ್ಯಾಕ್ ಮೇಲ್ ಮಾಡಿ ಚಿನ್ನಾಭರಣಗಳನ್ನು ಕಸಿಯುವ ದುಷ್ಟತನ ಅದಕ್ಕಿಂತಲೂ ದೊಡ್ಡದು. ಅದೆಲ್ಲದಕ್ಕಿಂತ ಯಾತನೆ ಮತ್ತು ಭಯ ಹುಟ್ಟಿಸುವ ಅಂಶವೆಂದರೆ, ಇದರಲ್ಲಿ ಸಿಕ್ಕಿಬಿದ್ದಿರುವುದು ಎಳೆಯ ವಯಸ್ಸಿನ ಮಕ್ಕಳು. ಬ್ಯಾಟರಾಯನಪುರ ಪೊಲೀಸರು ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸಿ ನ್ಯಾಯ ಕೊಡಿಸುವರೆಂಬ ಭರವಸೆ ಇದೆ.
ಇದನ್ನೂ ಓದಿ| ಸ್ವಾಮೀಜಿ ರೀತಿ ಪೋಸ್ ಕೊಟ್ಟು ವಂಚನೆ ಮಾಡಿ ಹಲ್ಲೆ ಆರೋಪ; ಖತರ್ನಾಕ್ ವಂಚಕನ ಬಂಧನ