ಉಡುಪಿ: ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್(Love Jihad) ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ಕರೆದೊಯ್ದಿರುವ ಘಟನೆ ಉಡುಪಿ(Udupi)ಯ ಕಾರ್ಕಳದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಇಡೀ ಕಾರ್ಕಳ(Karkala)ದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಕಾರಿನಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಕಾರಿನಲ್ಲಿ ಕರೆದೊಯ್ದಿದಿದ್ದ ಎನ್ನಲಾಗಿದೆ. ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.
ಏನಿದು ಘಟನೆ?
ಕಾರ್ಕಳದ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಲ್ತಾಫ್ ಎಂಬಾತ ಕಾರಿನಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಹೋಗಿದ್ದ. ಸಂಜೆಯಾಗುತ್ತಲೇ ಯುವತಿಯನ್ನ ವಾಪಸ್ ಕರೆ ತಂದಿದ್ದ, ವಿಷಯ ತಿಳಿಯುತ್ತಿದ್ದಂತೆ ಕಾರು ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇನ್ನು ಕಾರಿನಲ್ಲಿದ್ದ ಯುವತಿ ನಶೆಯಲ್ಲಿದ್ದುದ್ದನ್ನು ಕಂಡ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಇನ್ನು ಯುವತಿ ಕಾರ್ಕಳದಲ್ಲಿ ಉದ್ಯೋಗವೊಂದರಲ್ಲಿ ಇದ್ದು, ಅಲ್ತಾಫ್ ಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದಾಗಿ ಆರೋಪ ಕೇಳಿಬಂದಿದೆ. ಕಾರ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಹುಬ್ಬಳ್ಳಿಯ ಗಬ್ಬೂರನಲ್ಲಿ ಅನ್ಯಕೋಮಿನ ಯುವಕನ ಜತೆ ಬಾಲಕಿ ಇದ್ದಳು. ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಾಲಕಿಯನ್ನು ಯುವಕ ಕರೆತಂದಿದ್ದ. ಗಬ್ಬೂರ ಹೋಟೆಲ್‌ನಲ್ಲಿ ಇದ್ದವನನ್ನು ಗಮನಿಸಿ ಸ್ಥಳೀಯರು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡರು, ಯುವಕನಿಗೆ ಥಳಿಸಿ, ಹುಬ್ಬಳ್ಳಿಯ ಬೇಂಡಿಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಕುರಿತು ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ
ಇನ್ನು ಇದಕ್ಕೂ ಮುನ್ನ ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೇ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಸ್ತೆಯ ಪಕ್ಕ ಸ್ಕೂಟಿ ನಿಲ್ಲಿಸಿ ಯುವತಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು, ʼʼಕುಡಿದ ನಶೆಯಲ್ಲಿ ರೋಡ್ ಶೋ ಮಾಡುತ್ತೀಯಾ?ʼʼ ಎಂದು ಬೈದಿದ್ದಾರೆ. ಯುವಕರ ಅವಾಚ್ಯ ನಿಂದನೆಯಿಂದ ಒಂದು ಕ್ಷಣ ಗಾಬರಿಗೊಳಗಾದ ಯುವತಿ ಬಳಿಕ ಅವರನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಪುಂಡರು ಅಶ್ಲೀಲ ಪದಗಳಿಂದ ಯುವತಿಯನ್ನು ಹಿಂದಿಯಲ್ಲಿ ನಿಂದಿಸಿದ್ದಾರೆ. ಹೀಗೆ ಯುವಕರು ಕೆಲಕಾಲ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.