ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಕುಣೆಕೆಲ್ಲೂರು ಗ್ರಾಮದಲ್ಲಿ ಹರೆಯದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಘನಾ (18), ಮುತ್ತಣ್ಣ ನಾಯ್ಕ್ (18) ಸಾವಿಗೆ ಶರಣಾದವರು. ಇದರಲ್ಲಿ ಮೇಘನಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಮುತ್ತಣ್ಣ ಹೊಲದಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಇವರಿಬ್ಬರೂ ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಮನೆಯಲ್ಲಿ ಇವರಿಬ್ಬರ ಪ್ರೀತಿ ವಿಚಾರ ತಿಳಿದಿತ್ತು. ಈ ವಿಚಾರಲ್ಲಿ ಮನೆಯಲ್ಲಿ ಏನು ಚರ್ಚೆ ಆಗಿತ್ತು ಎನ್ನುವುದರ ಸ್ಪಷ್ಟತೆ ಇಲ್ಲ. ಆದರೆ, ಇದರ ಬೆನ್ನಲ್ಲೇ ಬುಧವಾರ ತಡರಾತ್ರಿ ಮೇಘನಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಪ್ರಿಯಕರ ಮುತ್ತಣ್ಣ ಕೂಡಾ ಸಾವಿಗೆ ಶರಣಾಗಿದ್ದಾನೆ.
ಮನೆಯಲ್ಲಿ ಆರಾಮವಾಗಿಯೇ ಇದ್ದ ಮೇಘನಾ ಬಾವಿಯಲ್ಲಿರುವ ಮೀನಿಗೆ ಆಹಾರ ಹಾಕುವ ನೆಪ ಹೇಳಿ ಹೋಗಿದ್ದಾಳೆ. ಆಗಲೇ ಆಕೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಮನೆಯವರು ಈ ಬಗ್ಗೆ ತಿಳಿದು ಬಾವಿಯಿಂದ ಮೇಲೆತ್ತಲು ಪ್ರಯತ್ನಿಸಿದರು. ಅಷ್ಟು ಹೊತ್ತಿಗೆ ವಿಷಯ ಮುತ್ತಣ್ಣನಿಗೆ ತಿಳಿಯಿತು. ಆತ ಕೂಡಲೇ ಹೊಲಕ್ಕೆ ಹೋಗಿ ನೇಣು ಬಿಗಿದುಕೊಂಡಿದ್ದಾನೆ.
ಮುತ್ತಣ್ಣ ಮೂಲತಃ ಹುನಗುಂದ ತಾಲೂಕಿನ ನಿವಾಸಿಯಾಗಿದ್ದಾನೆ. ಕುಣೆಕೆಲ್ಲೂರುನಲ್ಲಿ ಅತ್ತೆ ಮನೆಯಲ್ಲಿ ವಾಸವಿದ್ದ. ಅಲ್ಲೇ ಸಮೀಪವಿದ್ದ ಮೇಘನಾ ಜತೆ ಪ್ರೀತಿ ಅರಳಿತ್ತು. ಅದೀಗ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case | ಶಿವಮೊಗ್ಗದಲ್ಲಿ ನವವಿವಾಹಿತೆ ನೇಣಿಗೆ ಶರಣು; ಕೌಟುಂಬಿಕ ಕಲಹ ಕಾರಣವೇ?