Site icon Vistara News

ಮಧುವಿನಿಂದಲೇ ಬದುಕು ಕಟ್ಟುವ ಮಧುಕೇಶ್ವರ್‌ ಹೆಗಡೆ: ಮೋದಿ ಹೇಳಿದ ಈ ಸಾಹಸಿ ʻಜೇನುʼಗಾರ ಯಾರು?

Madhukeshwar

ಬೆಂಗಳೂರು/ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್‌ ಕಿ ಬಾತ್‌ನಲ್ಲಿ ಕರ್ನಾಟಕದ ಒಬ್ಬ ಅಪ್ರತಿಮ ಜೇನುಗಾರನನ್ನು ರಾಷ್ಟ್ರಕ್ಕೆ ಪರಿಚಯಿಸಿದರು. ಅವರೇ ʻಮಧುʼವಿನಿಂದಲೇ ಬದುಕು ಕಟ್ಟಿಕೊಳ್ಳುತ್ತಿರುವ ಶಿರಸಿಯ ʻಮಧುʼಕೇಶ್ವರ್‌ ಹೆಗಡೆ!

ಮನ್‌ ಕಿ ಬಾತ್‌ನಲ್ಲಿ ದೇಶದ ಕೆಲವು ಸಾಹಸಿ ರೈತರ ಕಥೆ ಹೇಳುತ್ತಾ ಹೋದ ಮೋದಿ ಅವರು ಮೊದಲು ಉಲ್ಲೇಖಿಸಿದ್ದು ಹರಿಯಾಣದ ಯಮುನಾ ನಗರ್‌ನ ಜೇನು ಸಾಕಣೆಗಾರ ಸುಭಾಷ್‌ ಕಾಂಭೋಜ್‌ ಅವರನ್ನು. ಅವರು ಎರಡು ಸಾವಿರ ಜೇನುಗೂಡುಗಳನ್ನು ಇಟ್ಟುಕೊಂಡಿದ್ದಾರಂತೆ. ಎರಡನೆಯವರು ಜಮ್ಮುವಿನ ಪಳ್ಳಿ ಗ್ರಾಮದ ವಿನೋದ್‌ ಕುಮಾರ್‌. ಇವರು ರಾಣಿ ಜೇನನ್ನು ಪಾಲಿಸುವುದರಲ್ಲಿ ಪ್ರವೀಣ. ವರ್ಷಕ್ಕೆ ಇರುವ ಸಂಪಾದಿಸುವ ಮೊತ್ತ ೧೫ರಿಂದ ೨೦ ಲಕ್ಷ ರೂ.

ಮಧುಕೇಶ್ವರ್‌ ಹೆಗಡೆ

ಮೂರನೇಯದಾಗಿ ಪರಿಚಯಿಸಿದ್ದು ಶಿರಸಿಯ ಮಧುಕೇಶ್ವರ್‌ ಹೆಗಡೆ ಅವರನ್ನು. ಸರಕಾರದಿಂದ ಸಬ್ಸಿಡಿ ಪಡೆದು ೫೦ ಜೇನುಗೂಡುಗಳನ್ನು ತಂದಿಟ್ಟುಕೊಂಡ ಅವರು ಈಗ ೮೦೦ ಜೇನು ಕುಟುಂಬಗಳನ್ನು ಸಾಕುತ್ತಿದ್ದಾರೆ. ಟನ್‌ಗಟ್ಟಲೆ ಜೇನನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು. ಜೇನಿಗೆ ಈಗ ಅಗಾಧ ಬೇಡಿಕೆ ಇದ್ದು, ಆಯುರ್ವೇದದಲ್ಲಿ ಯಥೇಚ್ಛವಾಗಿ ಬಳಕೆ ಆಗುತ್ತಿದೆ. ಯುವಕರು ಇದನ್ನು ಒಂದು ಸ್ವಯಂ ಉದ್ಯೋಗವಾಗಿ ಕೈಗೆತ್ತಿಕೊಳ್ಳಬಹುದು ಎಂದರು.

ಹಾಗಿದ್ದರೆ, ಈ ಮಧುಕೇಶ್ವರ್‌ ಯಾರು?
ಕೇವಲ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡಿದ ಶಿರಸಿಯ ಮಧುಕೇಶ್ವರ್‌ ೩೫ ವರ್ಷಗಳಿಂದ ಜೇನು ಸಾಕಣೆಯಲ್ಲಿ ತೊಡಗಿದ್ದಾರೆ. ಕೈಯಲ್ಲಿ ಹಣವಿಲ್ಲದೆ ಯಾವುದೇ ಸ್ವಯಂ ಉದ್ಯೋಗ ಮಾಡಲು ಹಿಂದೇಟು ಹಾಕುತ್ತಿದ್ದ ಅವರ ಕೈ ಹಿಡಿದದ್ದು ಜೇನು ಕೃಷಿ. ಸರಕಾರಿ ನೌಕರರು ಮತ್ತು ಸ್ನೇಹಿತರ ಬಳಿ ೫೦೦ ರೂ.ನಂತೆ ೨೦,೦೦೦ ರೂ ಬಂಡವಾಳ ತೊಡಗಿಸಿ ಶುರು ಮಾಡಿದ ಜೇನು ಕೃಷಿ ಇವತ್ತು ಬೃಹತ್‌ ಸಾಮ್ರಾಜ್ಯವಾಗಿ ಬೆಳೆದಿದೆ. ಜೇನು ಮತ್ತು ಜೇನು ಉತ್ಪನ್ನಗಳ ಜೊತೆಗೆ ಹುತ್ತ ಜೇನು, ತುಡುವೆ, ಮಿಸೆರಿ, ಕೊಲ್ಜೇನು ಸಾಕಾಣಿಕೆ ಮಾಡಿ ವಾರ್ಷಿಕವಾಗಿ 8 ರಿಂದ 9 ಕೋಟಿ ಆದಾಯ ಗಳಿಸಿ ಯಶಸ್ವಿ ಜೇನು ಕೃಷಿಕರಾಗಿದ್ದಾರೆ.

ಮಧುಕೇಶ್ವರ ಒಟ್ಟು 40 ಎಕರೆಯಲ್ಲಿ ಜೇನುಕೃಷಿ ಮಾಡುವ ಇವರು ಜೇನು ತುಪ್ಪ ಮಾರಾಟ, ಉಪ ಉತ್ಪನ್ನಗಳ ಮಾರಾಟದ ಜೊತೆಗೆ ಜೇನು ಹುಳು ಮಾರಾಟ, ಗೂಡು, ಜೇನು ಸಾಕುವ ಪಟ್ಟಿಗೆ, ಪರಾಗ ಇತ್ಯಾದಿ ಮಾರಾಟ ಮಾಡಿ ಆದಾಯ ಪಡೆಯುತ್ತಾರೆ. ಇವರು ತಯಾರಿಸುವ ಜೇನು ಜಾಮ್‌ ಇಂಗ್ಲೆಂಡ್‌ಗೂ ಹೋಗುತ್ತದೆ!

ಮಧುಕೇಶ್ವರ್‌ ಫುಲ್‌ ಖುಷ್‌

ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ತಮ್ಮ ಪ್ರಸ್ತಾಪ ಮಾಡಿದ್ದರಿಂದ ಖುಷಿಯಾಗಿದ್ದಾರೆ ಹೆಗಡೆ ಅವರು. ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಜೇನುಕೃಷಿಕ ಮಧುಕೇಶ್ವರ ಹೆಗಡೆ, ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ತನ್ನ ಸಣ್ಣ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವುದು ಸಂತಸದ ವಿಷಯ. ಇದು ನನ್ನ ಸುಯೋಗ ಮತ್ತು ಜೀವನದ ಮಹತ್ವ ಘಟನೆ ಎಂದಿದ್ದಾರೆ.

ಪ್ರಧಾನಿ ಮೋದಿ ಪ್ರಧಾನಿಯಾದ ಮೇಲೆ ಜೇನು ಕೃಷಿಗೂ ಸಹ ಸವಲತ್ತು ನೀಡಿದ್ದಾರೆ. ಕಳೆದ 35 ವರ್ಷಗಳಿಂದ ಜೇನು ಕೃಷಿ ಮಾಡುತ್ತಾ ಬಂದಿದ್ದು, ಜೇನು ಸಂಶೋಧನೆ, ಬೀ ಕ್ಯಾಲೆಂಡರ್, ಜೇನಿನಿಂದ ಬೈ ಪ್ರೊಡಕ್ಟ್ ಸಹ ತಯಾರಿಸಿದ್ದೇನೆ. ವಾರ್ಷಿಕವಾಗಿ 2 ಕೋಟಿಗೂ ವ್ಯವಹಾರ ಮಾಡುತ್ತಿದ್ದು, 1,500 ಜೇನು ಕುಟುಂಬ ಇರುವ ಪೆಟ್ಟಿಗೆಯನ್ನು ನಿರ್ವಹಿಸುತ್ತಿದ್ದೇನೆ. ಕೇವಲ 20,000 ರೂ. ಬಂಡವಾಳದಿಂದ ಇಂದು 18 ಕೋಟಿ ಆಸ್ತಿ ಮಾಡಲು ಸಾಧ್ಯವಾಗಿದ್ದು ಕೇವಲ ಜೇನುಕೃಷಿಯ ಕಾರಣದಿಂದ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Modi Mann ki Baat| ಆಗಸ್ಟ್‌ 2ರಿಂದ 15ರವರೆಗೆ ತಿರಂಗಾ ನಿಮ್ಮ ಪ್ರೊಫೈಲ್‌ ಪಿಕ್ಚರ್‌ ಆಗಿರಲಿ

Exit mobile version