ಬೆಂಗಳೂರು: ವಿವಿಧ ದೇಶಗಳಲ್ಲಿ ತಮ್ಮದೇ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಹಿಂದುಸ್ಥಾನದಲ್ಲಿ ಹಿಂದಿಯಲ್ಲಿ ಶಿಕ್ಷಣ ನೀಡಬೇಕು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇಂದೋರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾಣ್, ಮುಂದಿನ ಆಗಸ್ಟ್ 15ರವ ವೇಳೆಗೆ ರಾಜ್ಯದಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಎಲ್ಲ ಯುವಕರೂ ಸಿದ್ಧತೆ ಆರಂಭಿಸಿ ಎಂದು ಕರೆ ನೀಡಿದ್ದಾರೆ.
ನಂತರ ಭಾಷೆಯ ಕುರಿತು ಮಾತನಾಡುತ್ತ, ಕೆಲವರು ಇಂಗ್ಲಿಷ್ ಕಲಿತ ತಮ್ಮ ಮಕ್ಕಳಷ್ಟೆ ಇಂಜಿನಿಯರಿಂಗ್, ಮೆಡಿಕಲ್ ಓದಬೇಕು ಎಂದು ಬಯಸಿದ್ದರು. ಹಾಗಾಗಿ ಇಂಗ್ಲಿಷ್‌ನಲ್ಲಿ ಮಾತ್ರವೇ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡಲಾಗುತ್ತಿತ್ತು. ನಮ್ಮ ಮಾತೃಭಾಷೆ ಹಿಂದಿ. ನಮ್ಮ ರಾಷ್ಟ್ರಭಾಷೆ ಹಿಂದೆ. ಆದರೆ ಕೆಲವು ಕಪ್ಪು ಬ್ರಿಟಿಷರು ನಮ್ಮ ಮೇಲೆ ಇಂಗ್ಲಿಷ್ ಹೇರಿಕೆ ಮಾಡಿದರು. ಇಂತಹವರು ಶಿಕ್ಷಣದಿಂದ ವಂಚಿತರಾಗುತ್ತಿದ್ದದ್ದು ಗುಲಾಮಿ ಮಾನಸಿಕತೆ ಕಾರಣದಿಂದಾಗಿ ಹೀಗೆ ಮಾಡಿದ್ದರು ಎಂದು ತಿಳಿಸಿದರು.
ಜಪಾನ್‌ನಲ್ಲಿ ಜಪಾನಿ, ಜರ್ಮನ್‌ನಲ್ಲಿ ಜರ್ಮನಿ, ಫ್ರಾನ್ಸ್‌ನಲ್ಲಿ ಫ್ರೆಂಚ್, ರಷ್ಯಾದಲ್ಲಿ ರಷ್ಯನ್ ಭಾಷೆ ಬಳಕೆ ಮಾಡಲಾಗುತ್ತದೆ ಎಂದ ಶಿವರಾಜ್ ಸಿಂಗ್ ಚೌಹಾನ್, ಹಾಗಾದರೆ ಹಿಂದುಸ್ತಾನದಲ್ಲಿ ಯಾವ ಭಾಷೆ ಮಾತನಾಡಬೇಕು? ಎಂದು ನೆರೆದವರನ್ನು ಪ್ರಶ್ನಿಸಿದರು. ಅದಕ್ಕೆ ಎಲ್ಲರೂ ʼಹಿಂದಿʼ ಎಂದರು. ದನಿಗೂಡಿಸಿದ ಸಿಎಂ, ಹಿಂದುಸ್ತಾನದಲ್ಲಿ ಹಿಂದಿಯಲ್ಲಿ ಮಾತನಾಡಬೇಕು ಎಂದರು.
ಮಧ್ಯಪ್ರದೇಶದಲ್ಲಿ ಹಿಂದಿ ಪಠ್ಯಪುಸ್ತಕಗಳನ್ನು ಇತ್ತೀಚೆಗಷ್ಟೆ ರೂಪಿಸಿದ್ದ ಸರ್ಕಾರ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಂದ ಲೋಕಾರ್ಪಣೆ ಮಾಡಿತ್ತು.