Site icon Vistara News

ನಾಮಫಲಕ ವಿಚಾರದಲ್ಲಿ ಕರ್ನಾಟಕಕ್ಕೆ ಬುದ್ಧಿ ಹೇಳುವ ಮಹಾರಾಷ್ಟ್ರದಲ್ಲಿ ಯಾವ ನಿಯಮ ಇದೆ ನೋಡಿ!

Maharashtra has marathi signboard act but it Opposing Kannada Signboard Policy

ಮುಂಬೈ/ಬೆಂಗಳೂರು: ಕನ್ನಡದ ವಿಚಾರದಲ್ಲಿ ರಾಜ್ಯದೊಂದಿಗೆ ಮಹಾರಾಷ್ಟ್ರ ಸರ್ಕಾರ (Maharashtra Government) ಹೊಸದೊಂದು ತಗಾದೆ ತೆಗೆಯುತ್ತಿದೆ. ರಾಜ್ಯದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ (Kannada in signboards mandatory) ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ (Karnataka Government) ನಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಪ್ರಶ್ನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ವಿಧಾನ ಪರಿಷತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ಅನ್ನು ಅಂಗೀಕರಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ಸರ್ಕಾರವು ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಆದರೆ, ಅದೇ ಮಹಾರಾಷ್ಟ್ರ ಸರ್ಕಾರವು, ತನ್ನ ರಾಜ್ಯದಲ್ಲಿ ನಾಮಫಲಕದಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈನಲ್ಲಿ ಮರಾಠಿ ಬೋರ್ಡ್‌ ಅಳವಡಿಸಲು ಅಭಿಯಾನವನ್ನೇ ಕೈಗೊಂಡಿತ್ತು. ಕೊನೆಗೆ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಕೂಡ ಮರಾಠಿ ನಾಮಫಲಕ್ಕೆ ಓಕೆ ಎಂದಿತ್ತು. ಹಾಗಾಗಿ, ಈ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರವು ಅಕ್ಷರಶಃ ರಾಜಕೀಯವನ್ನು ಮಾಡುತ್ತಿದೆ ಎಂದು ಹೇಳಬಹುದು(Kannada Signboard).

ತನ್ನ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಮರಾಠಿ ನಾಮಫಲಕಗಳನ್ನು ಪ್ರದರ್ಶಿಸದವರ ವಿರುದ್ಧ ಕಾನೂನು ಕ್ರಮ ಜರಿಗಿಸುವುದುಕ್ಕೆ 2023 ನವೆಂಬರ್ 26ರಂದು ಬೃಹನ್ ಮುಂಬೈ ಪಾಲಿಕೆಯು ಮುಂದಾಗಿತ್ತು. ಮಹಾರಾಷ್ಟ್ರ ಅಂಗಡಿಗಳು ಮತ್ತು ಸಂಸ್ಥೆಗಳು (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯಿದೆ, 2017 ರ ಪ್ರಕಾರ ಮರಾಠಿ (ದೇವನಾಗರಿ) ಲಿಪಿಯಲ್ಲಿ ಸೈನ್‌ಬೋರ್ಡ್‌ಗಳನ್ನು ಪ್ರದರ್ಶಿಸದ ಅಂಗಡಿಗಳು ಮತ್ತು ಸಂಸ್ಥೆಗಳನ್ನು ಕಾನೂನು ಕ್ರಮ ಜರುಗಿಸಲಾಗುವುದು ಹೇಳಿತ್ತು. ಕಾನೂನು ಉಲ್ಲಂಘಿಸಿದ ಪ್ರತಿ ಅಂಗಡಿಯಲ್ಲಿನ ಪ್ರತಿ ಸಿಬ್ಬಂದಿಗೆ 2000 ರೂಪಾಯಿ ದಂಡ ವಿಧಿಸಲು ಮುಂದಾಗಿತ್ತು. ಈ ವಿಷವಯನ್ನು ಮಹಾರಾಷ್ಟ್ರ ಸರ್ಕಾರವು ಈಗ ಮರೆತಿರುವಂತೆ ಕಾಣುತ್ತಿದೆ.

ಮರಾಠಿ ಕಡ್ಡಾಯ ನಾಮಫಲಕವನ್ನು ವಿರೋಧಿಸಿ ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಕೂಟ(FRTWA)ವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ವಾಸ್ತವದಲ್ಲಿ ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಸರ್ಕಾರದ ಪರವಾಗಿಯೇ ತನ್ನ ಅಭಿಪ್ರಯಾವನ್ನು ವ್ಯಕ್ತಪಡಿಸಿತ್ತು. ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಬೃಹನ್ ಮುಂಬೈ ಮಹಾನಗರ ಪಾಲಿಕೆ, ಮರಾಠಿ ನಾಮಫಲಕ ಕಡ್ಡಾಯ ಅಭಿಯಾನವನ್ನು ಆರಂಭಿಸಿತ್ತು.

”ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಅನುಸರಿಸಲಾಗುತ್ತಿದೆ. ನಿಯಮವನ್ನು ಉಲ್ಲಂಘಿಸಿದರೆ ಶಿಕ್ಷಾರ್ಹ ಕ್ರಮದ ಜೊತೆಗೆ, ನಾಗರಿಕ ಸಂಸ್ಥೆಯು ಉಲ್ಲಂಘಿಸುವವರ ವಿರುದ್ಧ ಅಪರಾಧವನ್ನು ಸಹ ದಾಖಲಿಸಲಾಗುತ್ತದೆ ಮತ್ತು ಅವರ ಉಲ್ಲಂಘನೆಗಳನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು” ಎಂಬ ಬಿಎಂಸಿ ಉಪ ಮುನ್ಸಿಪಲ್ ಕಮಿಷನರ್ (ವಿಶೇಷ) ಸಂಜೋಗ್ ಕಬರೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಕಳೆದ ವರ್ಷ ವರದಿ ಮಾಡಿತ್ತು.

ಆಗ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಚಿಲ್ಲರೆ ವ್ಯಾಪಾರಿಗಳ ಅರ್ಜಿ ವಿಚಾರಣೆಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್, ಮಹಾರಾಷ್ಟ್ರ ಸರ್ಕಾರದ ನಿಯಮ ಅನುಸಾರ ಮರಾಠಿ ನಾಮಫಲಕಗಳ ಅಳವಡಿಕೆಗೆ ಸೆಪ್ಟೆಂಬರ್‌ನಿಂದ ಎರಡು ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿತ್ತು. 2023ರ ಸೆಪ್ಟೆಂಬರ್ 25ರಂದು ನಡೆದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ(ಇವರ ಕನ್ನಡಿಗರು) ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು, “ದೀಪಾವಳಿ ಮತ್ತು ದಸರಾಕ್ಕೆ ಮುಂಚಿತವಾಗಿ ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದುವ ಸಮಯ ಬಂದಿದೆ. ನೀವು ಮಹಾರಾಷ್ಟ್ರದಲ್ಲಿದ್ದೀರಿ. ಮರಾಠಿ ಸೂಚನಾ ಫಲಕಗಳನ್ನು ಹೊಂದುವುದರಿಂದ ಏನು ಪ್ರಯೋಜನ ಎಂದು ನಿಮಗೆ ತಿಳಿದಿಲ್ಲವೇ?” ಎಂದು ಅರ್ಜಿದಾರರಿಗೆ ಪ್ರಶ್ನಿಸಿದ್ದರು.

2018ರಲ್ಲಿ ಕಡ್ಡಾಯ ಮಾಡಿದ್ದ ಮಹಾರಾಷ್ಟ್ರ

2018 ರಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ದೇವನಾಗರಿ ಲಿಪಿಯಲ್ಲಿ ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು. ಆದಾಗ್ಯೂ, 10 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕೆಲವು ಸಂಸ್ಥೆಗಳು ಈ ನಿಯಮವನ್ನು ತಪ್ಪಿಸಲು ಪ್ರಯತ್ನಿಸಿದವು. ಈ ಹಿನ್ನೆಲೆಯಲ್ಲಿ 2022ರ ಮಾರ್ಚ್ ತಿಂಗಳಲ್ಲಿ ಸರ್ಕಾರವು, 2027ರ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ, ಅಂಗಡಿಗಳು ಮತ್ತು ಸಂಸ್ಥೆಗಳು ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತು. ಮರಾಠಿ ಮತ್ತು ಇಂಗ್ಲಿಷ್ ಎರಡೂ ಸಮಾನವಾದ ಗಾತ್ರದಲ್ಲಿರುವುದನ್ನು ಕಡ್ಡಾಯಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ತಗಾದೆ ತೆಗೆದ ಮಹಾರಾಷ್ಟ್ರ, ಕೇಸ್‌ ಹಾಕಲು ಚಿಂತನೆ

Exit mobile version