ಹುಬ್ಬಳ್ಳಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷ ತೊರೆದಿದ್ದಾರೆ. ಇದರ ಬೆನ್ನಲ್ಲೇ ಈ ಕ್ಷೇತ್ರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರಿಗೆ ಪಕ್ಷದಿಂದ ಟಿಕೆಟ್ ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಈ ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ನಿವಾಸದಲ್ಲಿ ಭಾನುವಾರ (ಏ.16) ರಹಸ್ಯ ಸಭೆ ನಡೆಸಲಾಗಿದ್ದು, ಈ ಚರ್ಚೆಯಲ್ಲಿ ಮಹೇಶ್ ಟೆಂಗಿನಕಾಯಿ ಸಹ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಮಹೇಶ್ ಟೆಂಗಿನಕಾಯಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಆಪ್ತರೂ ಆಗಿದ್ದಾರೆ. ಅಲ್ಲದೆ, ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಇದೀಗ ಶೆಟ್ಟರ್ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಟೆಂಗಿನಕಾಯಿ ಹಾದಿ ಸುಗಮವಾದಂತೆ ಆಗಿದೆ.
ಭಾನುವಾರ ಮತ್ತೊಂದು ಸಭೆ
ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ನಿವಾಸದಲ್ಲಿ ಭಾನುವಾರ ಸಭೆ ನಡೆಸಲಾಗುತ್ತಿದ್ದು, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಗೋವಿಂದ ಕಾರಜೋಳ ಹಾಗೂ ಮಹೇಶ್ ಟೆಂಗಿನಕಾಯಿ ರಹಸ್ಯ ಸಭೆಯಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ.
ಬಣಜಿಗ ಸಮುದಾಯದ ದಾಳ
ಮಹೇಶ್ ಟೆಂಗಿನಕಾಯಿ ಸಹ ಜಗದೀಶ್ ಶೆಟ್ಟರ್ ಅವರ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಇಬ್ಬರೂ ಲಿಂಗಾಯತ ಬಣಜಿಗ ಸಮಾಜದವರಾಗಿದ್ದರಿಂದ ಈಗ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಅಪಖ್ಯಾತಿಯಿಂದ ಹೊರಬರಲು ಸೂಕ್ತವಾದ ದಾರಿ ಇದುವೇ ಎಂಬ ತೀರ್ಮಾನಕ್ಕೆ ಬಿಜೆಪಿ ಪ್ರಮುಖರು ಬಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ಮತ್ತೊಬ್ಬ ಬಣಜಿಗ ನಾಯಕನಿಗೆ ಟಿಕೆಟ್ ಕೊಟ್ಟರೆ ಸಾರ್ವಜನಿಕವಾಗಿ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಲು ತಂತ್ರವನ್ನು ಹೂಡಲಾಗುತ್ತಿದೆ ಎಂದು ಹೇಳಲಾಗಿದೆ.
ಬಣಜಿಗ ಲಿಂಗಾಯತ ಸಮುದಾಯದವರಾಗಿರುವ ಶೆಟ್ಟರ್ ಪಕ್ಷೇತರ ಇಲ್ಲವೇ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೆ ಲಿಂಗಾಯತ ಸಮುದಾಯದವರಿಗೆ ತಪ್ಪು ಸಂದೇಶ ಹೋದಂತೆ ಆಗುತ್ತದೆ. ಈಗಾಗಲೇ ಲಿಂಗಾಯತ ಸಮುದಾಯದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಸಲಾಗಿದೆ. ಈಗ ಮತ್ತೊಬ್ಬ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿರುವುದು ರಾಜ್ಯದಲ್ಲಿ ಬೇರೆಯದೇ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ ಎಂಬ ಭಯ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಲಾಗುತ್ತಿದ್ದು, ಅದಕ್ಕೆ ಅಗತ್ಯ ತಂತ್ರಗಳನ್ನು ಹೆಣೆಯಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Election 2023: ಜಗದೀಶ್ ಶೆಟ್ಟರ್ ಅಂತಹ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬೇಡ: ಎಚ್.ಡಿ. ಕುಮಾರಸ್ವಾಮಿ
ಈ ಕಾರಣಕ್ಕಾಗಿಯೇ ಶೆಟ್ಟರ್ ಸಮುದಾಯದವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದರೆ ಹುಬ್ಬಳ್ಳಿ – ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಗಳು ಚದುರಿಹೋಗದಂತೆ ಏನು ಮಾಡಬಹುದು ಎಂಬ ನಿಟ್ಟಿನಲ್ಲೂ ಬಿಜೆಪಿ ಚಿಂತನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.