Site icon Vistara News

Mahisha Dasara: ಮಹಿಷ ದಸರಾ ರ‍್ಯಾಲಿ ನಿರಾತಂಕ; ಚಾಮುಂಡಿ ಬೆಟ್ಟಕ್ಕೆ ಮಾತ್ರ ಸರ್ಪಕಾವಲು!

mahisha dasara

ಮೈಸೂರು: ಇಂದು ಮೈಸೂರಿನಲ್ಲಿ (mysore news) ಪರ- ವಿರೋಧವಾಗಿ ಹಮ್ಮಿಕೊಳ್ಳಲಾಗಿದ್ದ ಮಹಿಷ ದಸರಾ (Mahisha Dasara)- ಚಾಮುಂಡಿ ಚಲೋ (Chamundi challo) ಎರಡು ಕಾರ್ಯಕ್ರಮಗಳಲ್ಲಿ ಒಂದಕ್ಕೆ ಅವಕಾಶ ನೀಡಲಾಗಿದ್ದು, ಇನ್ನೊಂದನ್ನು ನಿರಾಕರಿಸಲಾಗಿದೆ. ಎರಡೂ ಕಾರ್ಯಕ್ರಮಗಳಲ್ಲಿ ರ‍್ಯಾಲಿ ನಡೆಯುವಂತಿಲ್ಲ ಎಂದು ಪೊಲೀಸರು ಆದೇಶಿಸಿದ್ದರೂ, ಮಹಿಷ ದಸರಾ ರ‍್ಯಾಲಿ ಮಾತ್ರ ನಡೆದಿದೆ. ಆದರೆ ಚಾಮುಂಡಿ ಬೆಟ್ಟದಲ್ಲಿ ಸರ್ಪಗಾವಲು ಹಾಕಿದ್ದು, ಪ್ರತಿದಿನದಂತೆ ವಾಕಿಂಗ್‌ ಮಾಡುವವರಿಗೂ ಅವಕಾಶ ನೀಡಲಾಗಿಲ್ಲ!

ಮಹಿಷ ದಸರಾ ನಡೆಸಲು ಮುಂದಾಗಿರುವ ಸಂಘಟನೆಗಳು ನಿಷೇಧಾಜ್ಞೆ ನಡುವೆಯೂ ನಗರದಾದ್ಯಂತ ರಾಜಾರೋಷವಾಗಿ ಬೈಕ್ ರ‍್ಯಾಲಿ ನಡೆಸಿದರು. ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದರೂ ಲೆಕ್ಕಿಸಲಿಲ್ಲ. ಅಶೋಕ ಪುರಂ ಅಂಬೇಡ್ಕರ್ ಪಾರ್ಕ್‌ನಿಂದ ಟೌನ್ ಹಾಲ್ಲ್‌ವರೆಗು ಬೈಕ್ ರ‍್ಯಾಲಿ ನಡೆಯಿತು. ನೂರಾರು ಬೈಕ್‌ಗಳ ಮೂಲಕ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮಾಡಿದರು. ಪೊಲೀಸರು ಬೈಕ್ ರ‍್ಯಾಲಿ ಕಂಡೂ ಕಾಣದಂತಿದ್ದರು.

ಆದರೆ ಚಾಮುಂಡಿ ಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಬಿಜೆಪಿಯ ʼಚಾಮುಂಡಿ ಚಲೋʼಗೆ ಅವಕಾಶ ನೀಡಲಾಗಿಲ್ಲ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೆಟ್ಟಲುಗಳ ಮೂಲಕ ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟ ಚಲೋಗೆ ಬಿಜೆಪಿ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಾಮುಂಡಿ ಬೆಟ್ಟದ ಸುತ್ತ ಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಮಂಡ್ಯದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕಿ ಮಹಿಷ ದಸರಾಗೆ ಚಾಲನೆ.

ಬೆಟ್ಟದ ಮೆಟ್ಟಿಲು ಸಮೀಪ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದ್ದು, ಬೆಟ್ಟಪಾದ ಬಳಿ ಬೀಡುಬಿಟ್ಟಿರುವ ನೂರಾರು ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮುಂಜಾನೆ ಪ್ರತಿದಿನದಂತೆ ವಾಕಿಂಗ್‌ಗೆ ಬಂದ ಸ್ಥಳೀಯರನ್ನೂ ಪೊಲೀಸರು ಜೋರು ಮಾಡಿ ಆಚೆಗಟ್ಟಿದ್ದಾರೆ. ದೂರದೂರುಗಳಿಂದ ಬಂದ ಪ್ರವಾಸಿಗರು ಚಾಮುಂಡಿ ಬೆಟ್ಟ ನೋಡಲಾಗದೆ ನಿರಾಶೆಯಿಂದ ಮರಳಿದರು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಈ ಮುನ್ನ ನೀಡಿದ ಹೇಳಿಕೆ ಹೀಗಿತ್ತು: ʼʼಮೈಸೂರಿನ ಆರ್ಥಿಕತೆ ದಸರಾ ಮೇಲೆ ಅವಲಂಬಿತವಾಗಿದೆ. ದಸರಾ ಹೊಸ್ತಿಲಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದು. ಹೀಗಾಗಿ ಇಂದು ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಮೆರವಣಿಗೆ, ರ‍್ಯಾಲಿಗಳಿಗೆ ಅವಕಾಶ ಇಲ್ಲ. ಸಂಜೆ 6 ಗಂಟೆಯ ವರೆಗೆ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪುರಭವನ ಬಳಿ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆʼʼ ಎಂದಿದ್ದರು.

ʼʼಪುಷ್ಪಾರ್ಚನೆಗೂ ಅವಕಾಶವಿಲ್ಲ, ಚಾಮುಂಡಿ ಚಲೋ ಎರಡಕ್ಕೂ ಅವಕಾಶ ಇಲ್ಲ. ಆಯೋಜಕರಿಗೆ ಎಲ್ಲಾ ನಿರ್ಬಂಧಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಸುಮಾರು 6-7 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಹಳೆಯ ವಿಡಿಯೋ ಪೋಸ್ಟ್ ಮಾಡುವುದು, ಸುಳ್ಳು ಸುದ್ದಿ ಹರಡುವುದು ಆಗಬಾರದು. ಯಾರೂ ಅಂಥವುಗಳನ್ನು ನಂಬಬಾರದುʼʼ ಎಂದಿದ್ದರು.

ನಂಜನಗೂಡಿನಲ್ಲಿ ಮಹಿಷ ದಸರಾಗೆ ಚಾಲನೆ.

ಮಂಡ್ಯ, ಚಾಮರಾಜನಗರದಿಂದ ರ‍್ಯಾಲಿ

ಮಂಡ್ಯ: ಮಂಡ್ಯ ಹಾಗೂ ಚಾಮರಾಜನಗರದಿಂದ ಮೈಸೂರಿನತ್ತ ಮಹಿಷ ದಸರಾ ರ‍್ಯಾಲಿಗಳು ಹೊರಟಿವೆ. ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಬೆಂಬಲಿಸಿ ಮಂಡ್ಯದಿಂದ ಮೈಸೂರುವರೆಗೆ ಸಮಾನ ಮನಸ್ಕರ ವೇದಿಕೆಯಿಂದ ಬೈಕ್ ರ‍್ಯಾಲಿ ಹೊರಟಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದ ರ‍್ಯಾಲಿ ಆರಂಭವಾಗಿದ್ದು, ʼಮಹಿಷ ದಸರಾ ಯಶಸ್ವಿ ಆಗಲಿʼ ಎಂದು ಘೋಷಿಸಿದರು.

ಚಾಮರಾಜನಗರದಿಂದ ಎರಡು ಖಾಸಗಿ ಬಸ್‌ಗಳಲ್ಲಿ 80ಕ್ಕೂ ಹೆಚ್ಚು ಜನ ಮಹಿಷ ದಸರಾಕ್ಕೆ ಸಾಥ್ ನೀಡಲು ಮೈಸೂರಿಗೆ ತೆರಳಿದ್ದಾರೆ. ದಲಿತ ಮುಖಂಡರು, ಪ್ರಗತಿಪರರು ಇದರಲ್ಲಿದ್ದು, ಜಿಲ್ಲಾಡಳಿತ ಭವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೈಸೂರಿನತ್ತ ಪಯಣ ಬೆಳೆಸಿದ್ದಾರೆ. ʼʼಅಂಬೇಡ್ಕರ್ ಅವರಿಗೆ ಜಯವಾಗಲಿʼʼ ಎಂದು ಬಸ್ ಏರಿದರು.

ಇದನ್ನೂ ಓದಿ: Mahisha Dasara : ಮಹಿಷ ದಸರಾಕ್ಕೆ ಷರತ್ತುಬದ್ಧ ಅನುಮತಿ, ಸಭಾ ಕಾರ್ಯಕ್ರಮ ಓಕೆ, ಸೆಕ್ಷನ್‌ 144 ಜಾರಿ

Exit mobile version