ಮೈಸೂರು: ಮೈಸೂರಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಮೈಸೂರು ದಸರಾ (Dasara 2023) ವರ್ಸಸ್ ಮಹಿಷ ದಸರಾ (Mahisha Dasara) ಕಿತ್ತಾಟ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನಲ್ಲಿ ಈ ಬಾರಿ ಮಹಿಷ ದಸರಾಕ್ಕೆ ಅನುಮತಿ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನಬದ್ಧವಾದ ಹಕ್ಕು. ಯಾರು ಯಾವ ಆಚರಣೆಯನ್ನು ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು? ಯಾವುದನ್ನು ಮಾಡಬಾರದು ಅಂತ ಸರ್ಕಾರ ತೀರ್ಮಾನಿಸಲು ಅವಕಾಶ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Anganawadi workers : ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಂಗನವಾಡಿ ಕಾರ್ಯಕರ್ತೆಯರು; ನಾಳೆ ರಾಜ್ಯಾದ್ಯಂತ ಪ್ರತಿಭಟನೆ
ಮಹಿಷ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಮೈಸೂರು ದಸರಾಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ.
ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಏಕೆ ಮಹಿಷ ದಸರಾಕ್ಕೆ ವಿರೋಧ
ತಾಯಿ ಚಾಮುಂಡೇಶ್ವರಿ ರಾಕ್ಷಸನಾದ ಮಹಿಷನನ್ನು ಸಂಹಾರ ಮಾಡಿದಳು ಎಂಬ ಕಾರಣಕ್ಕೆ ಹಿಂದಿನಿಂದ ಮೈಸೂರಿನಲ್ಲಿ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಲರೂ ದೈವೀಭಾವದಿಂದ ಇದನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದರ ಜತೆಗೆ ರಾಕ್ಷಸ ಗುಣವು ವಿಜೃಂಭಿಸಬಾರದು ಎಂಬ ಸಂದೇಶವನ್ನು ಇದು ನೀಡುತ್ತಿದೆ. ಆದರೆ, ಈ ನಡುವೆ ರಾಕ್ಷಸನಾದ ಮಹಿಷನು ಸದ್ಗುಣ ಎಂದು ಮಹಿಷ ದಸರಾ ಮಾಡುತ್ತಿರುವುದು ಸರಿಯಲ್ಲ ಎಂಬುದು ಸ್ಥಳೀಯ ಕೆಲವು ರಾಜಕೀಯ ನಾಯಕರು, ಹಿಂದುಪರ ಸಂಘಟನೆಗಳು ಹಾಗೂ ಭಕ್ತರ ವಾದವಾಗಿದೆ.
ಇದನ್ನೂ ಓದಿ: Jain Muni Murder : ಸರ್ಕಾರದಿಂದ ಪ್ರಮುಖ ಆರೋಪಿ ರಕ್ಷಣೆ; ಇಲ್ಲಿ ಕೊಲೆಯೂ ಫ್ರೀ ಎಂದ ಶಾಸಕ
ಈ ನಿಟ್ಟಿನಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿದೆ. ಒಂದು ಗುಂಪು ಮಹಿಷ ದಸರಾವನ್ನು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ಮುಂದೆ ಆಚರಿಸುವುದಾಗಿ ಪ್ರತಿ ಬಾರಿಯೂ ಸಿದ್ಧತೆಯನ್ನು ನಡೆಸಿಕೊಳ್ಳುತ್ತದೆ. ಆದರೆ, ಸರ್ಕಾರ ಈ ವರೆಗೂ ಅನುಮತಿ ನೀಡದ ಹಿನ್ನೆಲೆಯಲ್ಲಿ ಮೈಸೂರು ನಗರದ ಯಾವುದಾದರೂ ಒಂದು ಕಡೆ ಆಚರಿಸುತ್ತಾ ಬಂದಿದೆ. ಈ ಬಾರಿ ಮತ್ತೆ ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದು ಇನ್ನು ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.