ಮೈಸೂರು: ನಂಜನಗೂಡಿನಲ್ಲಿ ʼಮಹಿಷಾಸುರ ಸಂಹಾರʼದ (Mahisha Samhara) ವಿವಾದ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ದಲಿತ ಸಂಘರ್ಷ ಸಮಿತಿ (Dalit sangharsha Samiti) ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳದಲ್ಲಿ ಉಂಟಾಗಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ.
ಪ್ರತಿವರ್ಷದಂತೆ ಧನುರ್ಮಾಸದ ಅಂಗವಾಗಿ ನಡೆಯುತ್ತಿದ್ದ ರಾಕ್ಷಸ ಸಂಹಾರದ ಆಚರಣೆಗೆ ಈ ಬಾರಿ ದಲಿತ ಸಂಘರ್ಷ ಸಮಿತಿ ಸದಸ್ಯರು ಅಡ್ಡಿಪಡಿಸಿದ ಪರಿಣಾಮ ಹಾಗೂ ಸ್ಥಳೀಯರು ಇದಕ್ಕೆ ವಿರೋಧಿಸಿದ್ದರಿಂದ ಚಕಮಕಿ ಉಂಟಾಯಿತು. ಗಲಭೆ ತೀವ್ರಗೊಳ್ಳದಂತೆ ಪೊಲೀಸರು ಲಾಠಿ ಬೀಸಿದ ಘಟನೆ ನಡೆದಿದೆ.
ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಸಮೀಪದಲ್ಲಿರುವ ರಾಕ್ಷಸ ಮಂಟಪದ ಮುಂದೆ ಪ್ರತಿವರ್ಷ ನಡೆಯುತ್ತಿದ್ದ ಆಚರಣೆಯಂತೆ ಈ ವರ್ಷವೂ ಭಕ್ತಾದಿಗಳು ʼಅಂಧಕಾಸುರ ಸಂಹಾರʼ ಆಚರಣೆಗೆ ಮುಂದಾಗಿದ್ದರು.
ರಾಕ್ಷಸನ ರೂಪಕ್ಕೆ ಪ್ರತಿವರ್ಷದಂತೆ ಮಹಿಷಾಸುರನ ಚಿತ್ರವನ್ನು ಬಿಡಿಸಿದ್ದರು.
ಇದನ್ನು ದಲಿತ ಸಂಘರ್ಷ ಸಮಿತಿ ಸದಸ್ಯರು ವಿರೋಧಿಸಿದರು. ʼಮಹಿಷಾಸುರ ತಳವರ್ಗದ ಪರಂಪರೆಯ ಪ್ರತಿನಿಧಿ, ಇದರಿಂದ ನಮ್ಮ ಭಾವನೆಗೆ ಧಕ್ಕೆಯಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಹಾಗೂ ದಸಂಸ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಯಿತು.
ದಸಂಸ ಸದಸ್ಯರನ್ನು ಸ್ಥಳದಿಂದ ನಿರ್ಗಮಿಸುವಂತೆ ಪೊಲೀಸರು ಸೂಚನೆ ನೀಡಿದರು. ಆದರೂ ಪರಿಸ್ಥಿತಿ ಶಾಂತಗೊಳ್ಳದಿದ್ದಾಗ ಲಘುವಾಗಿ ಲಾಠಿ ಬೀಸಿದರು. ಅಸುರ ಸಂಹಾರ ಕಾರ್ಯಕ್ರಮ ಏರ್ಪಡಿಸಿದವರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ದಸಂಸ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಅಂಧಕಾಸುರ ಸಂಹಾರಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸಿದ್ದಾರೆ ಎಂದು ನಂಜನಗೂಡು ನಿವಾಸಿಗಳು ಆರೋಪಿಸಿದ್ದಾರೆ. ಪಾರಂಪರಿಕವಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದು, ಶ್ರೀಕಂಠೇಶ್ವರ ಉತ್ಸವ ಮೂರ್ತಿ ಮೇಲೆಯೂ ನೀರು ಎರಚಿದ್ದಾರೆ. ಅವರನ್ನು ತಡೆಯುವ ಬದಲು ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಭಕ್ತಾದಿಗಳು ಆರೋಪಿಸಿದ್ದಾರೆ.
ಕಳೆದ ಬಾರಿ ನವರಾತ್ರಿಯ ಸಂದರ್ಭದಲ್ಲಿ ನಾಡಹಬ್ಬ ಹಾಗೂ ಚಾಮುಂಡಿ ದೇವಿಯ ಪೂಜೆಗೆ ಪರ್ಯಾಯವಾಗಿ ಹಲವು ಎಡಪಂಥೀಯ ಚಿಂತಕರು, ದಲಿತ ಸಂಘರ್ಷ ಸಮಿತಿ ಸದಸ್ಯರು ಸೇರಿಕೊಂಡು ʼಮಹಿಷ ಉತ್ಸವʼ ಆಚರಣೆಗೆ ಮುಂದಾಗಿದ್ದರು. ಈ ʼಮಹಿಷ ಚಳವಳಿʼ ಇದೀಗ ಹೀಗೆ ಮುಂದುವರಿದಿದೆ.
ಇದನ್ನೂ ಓದಿ: Mahisha Dasara: ಮಹಿಷ ದಸರಾ ರ‍್ಯಾಲಿ ನಿರಾತಂಕ; ಚಾಮುಂಡಿ ಬೆಟ್ಟಕ್ಕೆ ಮಾತ್ರ ಸರ್ಪಕಾವಲು!