ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ (Murugha Seer) ವಿರುದ್ಧ ದೂರು ಕೊಡುವಂತೆ ವ್ಯಕ್ತಿಯೊಬ್ಬ ಮಠದ ಹಾಸ್ಟೆಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಶ್ರೀಗಳ ವಿರುದ್ಧ ಸುಳ್ಳು ದೂರು ಕೊಡುವಂತೆ ಮಾತನಾಡಿದ್ದ ಆಡಿಯೊವೊಂದು ಈಗ ವೈರಲ್ ಆಗಿದೆ. ಈ ಸಂಬಂಧ ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀಗಳು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಆ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚಲು ಆಗ್ರಹಿಸಿದ್ದಾರೆ.
೧೪ ನಿಮಿಷದ ಆಡಿಯೊದಲ್ಲೇನಿದೆ?
ಈಗ ಮುರುಘಾ ಶರಣರ ವಿರುದ್ಧ ಸುಳ್ಳು ದೂರು ನೀಡುವಂತೆ ವ್ಯಕ್ತಿಯೊಬ್ಬರು ಕರೆ ಮಾಡಿರುವ ಆಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಭಾಷಣೆ 14 ನಿಮಿಷ 15 ಸೆಕೆಂಡ್ ಕಾಲ ಇದ್ದು, ಕರೆ ಮಾಡಿದ ವ್ಯಕ್ತಿ ಬಾಲಕಿಗೆ ಸುಳ್ಳು ದೂರು ನೀಡುವಂತೆ ಪ್ರಚೋದನೆ ಮಾಡಿದ್ದಲ್ಲದೆ, ಸಹಾಯ ಮಾಡುವುದಾಗಿ ಆಮಿಷವನ್ನೂ ಒಡ್ಡಿದ್ದಾನೆ.
ಮೊಬೈಲ್ ಮೂಲಕ ಕರೆ ಮಾಡಿದ ವ್ಯಕ್ತಿಯು ಬಾಲಕಿ ಬಳಿ ನೇರವಾಗಿ ಮುರುಘಾಶ್ರೀ ವಿಷಯವನ್ನು ಪ್ರಸ್ತಾಪಿಸಿದ್ದಾನೆ. “ನೀನೀಗ ಮುರುಘಾ ಶ್ರೀಗಳ ಮೇಲೆ ದೂರು ದಾಖಲಿಸಬೇಕು. ನಿನ್ನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡು” ಎಂದು ಹೇಳಿದ್ದಾನೆ. ಅದಕ್ಕೆ ಆ ಬಾಲಕಿ, “ಇಲ್ಲಾ.. ನಾನು ಹೇಗೆ ಆ ರೀತಿಯಾಗಿ ದೂರು ನೀಡಲಿ? ನನಗೆ ಆ ರೀತಿಯಾಗಿ ಶ್ರೀಗಳು ಮಾಡಿಲ್ಲ..” ಎಂದು ಹೇಳಿದ್ದಾಳೆ. ಅದಕ್ಕೆ ಆ ವ್ಯಕ್ತಿಯು, “ನೀನು ನಿನ್ನ ಮೇಲೆ ಅತ್ಯಾಚಾರ ಆಗಿದೆ ಎಂದೇನೂ ದೂರು ಕೊಡುವುದು ಬೇಡ. ಹಾಗೇ ಆಗಾಗ ಮೈಮುಟ್ಟುತ್ತಿದ್ದರು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು ಎಂದು ದೂರು ಕೊಟ್ಟರೆ ಸಾಕು.. ಅಷ್ಟು ಹೇಳಲು ನಿನಗೇನು?” ಎಂದು ಕೇಳಿದ್ದಾನೆ. ಅದಕ್ಕೆ ಆ ಬಾಲಕಿಯು ಸುಳ್ಳು ಹೇಳಲು ನಿರಾಕರಿಸಿದ್ದಾಳೆ. ಹೀಗೆ ೧೪ ನಿಮಿಷಗಳ ಕಾಲ ಆಡಿಯೊ ಸಾಗುತ್ತದೆ. ಈ ಮಧ್ಯೆ ಆ ವ್ಯಕ್ತಿಯು ಸುಳ್ಳು ದೂರು ನೀಡಿದರೆ ನಿನ್ನ ಜೀವನ ಉದ್ದಾರ ಆಗುತ್ತದೆ. ಸಹಾಯ ಮಾಡುತ್ತೇವೆ ಎಂದೂ ಹೇಳಿದ್ದಾನೆ. ಈ ಎಲ್ಲ ಸಂಗತಿಗಳುಳ್ಳ ಆಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ | Murugha seer case | ಮುರುಘಾ ಮಠಕ್ಕೆ ಆಡಳಿತಾಧಿಕಾರಿ ಬಗ್ಗೆ ವರದಿ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ
ಯಾರು ಆ ವ್ಯಕ್ತಿ?
ಆಡಿಯೊದಲ್ಲಿ ಮಾತನಾಡಿರುವ ವ್ಯಕ್ತಿ ಯಾರು? ಆತ ಯಾಕೆ ಮುರುಘಾ ಶರಣರ ಮೇಲೆ ಸುಳ್ಳು ದೂರು ನೀಡಲು ಪ್ರಚೋದನೆ ನೀಡಿದ್ದಾನೆ? ಇದು ಈ ಪ್ರಕರಣಕ್ಕೆ ಮಾತ್ರ ಸೀಮಿತವೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಎಲ್ಲದರ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು. ಜತೆಗೆ ಆ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವಂತೆ ದೂರು ನೀಡಲಾಗಿದೆ.
ತನಿಖೆಗೆ ಆಗ್ರಹ
ಮುರುಘಾಶ್ರೀ ವಿರುದ್ಧದ ಕೇಸ್ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ. ಆಡಿಯೊ ಕೇಳಿದರೆ ದೊಡ್ಡ ಪಿತೂರಿಯೆಂಬುದು ಅರ್ಥ ಆಗುತ್ತದೆ. ಮಕ್ಕಳಿಗೆ ಆಮಿಷ ತೋರಿಸಲಾಗಿದೆ. ಸುಳ್ಳು ಹೇಳು ಹೇಳಿದ್ದಾರೆ. ಸುಳ್ಳು ಹೇಳಿದರೆ ಜೀವನ ಉದ್ಧಾರ ಆಗುತ್ತದೆ. ಸಹಾಯ ಮಾಡುತ್ತೇವೆ ಎಂದು ಪ್ರಚೋದನೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಆಡಿಯೊದಲ್ಲಿ ಸಂಭಾಷಣೆ ಮಾಡಿರುವ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಬಸವಪ್ರಭು ಶ್ರೀ ದೂರಿನಲ್ಲಿ ತಿಳಿಸಿದ್ದಾರೆ. ಅಥಣಿ ಮಠದ ಶಿವಬಸವ ಶ್ರೀ, ಮುಖಂಡ ಎಚ್. ಆನಂದಪ್ಪ ಜತೆಗಿದ್ದರು.
ಏನಿದು ಪ್ರಕರಣ?
ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯರ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಮಲು ಬರುವ ಔಷಧ ಕೊಟ್ಟು ಅತ್ಯಾಚಾರ ಎಸಗಿದ್ದಾರೆ ಎಂಬ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುರುಘಾಶರಣರನ್ನು ಸೆ. ೧ರಂದು ಬಂಧಿಸಲಾಗಿತ್ತು. ಆ ತರುವಾಯ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಬಳಿಕ ನ್ಯಾಯಾಂಗ ಬಂಧನ ನೀಡಲಾಗಿತ್ತು. ಅ. ೧೩ರಂದು ಮೈಸೂರಿನಲ್ಲಿ ಮತ್ತೊಂದು ದೂರು ದಾಖಲಾಗಿತ್ತು. ಅಡುಗೆ ಸಹಾಯಕಿಯೊಬ್ಬರು ತನ್ನಿಬ್ಬರು ಮಕ್ಕಳ ಸಹಿತ ಮತ್ತಿಬ್ಬರು ಮಕ್ಕಳ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ | Murugha seer | ಮುರುಘಾಶ್ರೀಗಳ ದೌರ್ಜನ್ಯ ಅಕ್ಷಮ್ಯ, ತಕ್ಕ ಶಿಕ್ಷೆಯಾಗಲಿ: ಬಿ.ಎಸ್. ಯಡಿಯೂರಪ್ಪ ಆಕ್ರೋಶ