Site icon Vistara News

CM Siddaramaiah : ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

CM Siddaramaiah says people will not trust BJP

ಮೈಸೂರು: ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ (Number one in development) ಸ್ಥಾನಕ್ಕೆ ಕರೆದೊಯ್ಯಿರಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟಾರ್ಗೆಟ್ ನೀಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಔತಣ ಕೂಟದಲ್ಲಿ ದಸರಾ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಮೈಸೂರು ನಂಬರ್ ಒನ್ ಆಗಬೇಕು. ಇದು ನಿಮ್ಮಿಂದ ಸಾಧ್ಯವಿದೆ. ಸಾಧಿಸಿ ತೋರಿಸೋಣ ಎಂದು ಎಲ್ಲರ ಸಹಕಾರ ಕೋರಿದರು.

ಇದನ್ನೂ ಓದಿ: BY Vijayendra : ಕಾರ್ಯಕರ್ತರ ನಡುವೆ ಶಾಸಕ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ; ಲೋಕಸಭಾ ಚುನಾವಣೆಗಾಗಿ ರಾಜ್ಯ ಪ್ರವಾಸ ಸಂಕಲ್ಪ

ದಸರೆ ಕಾರ್ಯವೈಖರಿಗೆ ಮೆಚ್ಚುಗೆ

ಒಗ್ಗಟ್ಟಿನ ಶ್ರಮ ಮತ್ತು ಕೆಲಸಗಳ ಹಂಚಿಕೆ ಮೂಲಕ ಸಾರ್ವಜನಿಕರಿಂದ ಆಕ್ಷೇಪಣೆ ಇಲ್ಲದಂತೆ ದಸರಾ ಯಶಸ್ವಿಗೊಳಿಸಿದ್ದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಕ್ಷಮತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಪರಿಣಾಮಕಾರಿ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಜನರ ನಡುವೆ ಇದ್ದರೆ ಅಧಿಕಾರಿಗಳ ಜನಪ್ರಿಯತೆಯೂ ಹೆಚ್ಚುತ್ತದೆ. ಜನರ ಸಮಸ್ಯೆಗಳೂ ಅರ್ಥ ಆಗುತ್ತವೆ. ಸಮಸ್ಯೆ ಅರ್ಥವಾದಷ್ಟೂ ಪರಿಣಾಮಕಾರಿ ಪರಿಹಾರ ಒದಗಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಮುಂದಿನ ಬಾರಿ ಜನರ ಜತೆ ಸಭೆ ನಡೆಸಿ

ದಸರಾ ಜನರ ಹಬ್ಬ. ಆದ್ದರಿಂದ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ. ಇದು ಈ ಬಾರಿಯೂ ಯಶಸ್ವಿಯಾಗಿದೆ. ಮುಂದಿನ ಬಾರಿ ಜನರ ಜತೆ ಪೂರ್ವಭಾವಿ ಸಭೆಗಳನ್ನು ನಡೆಸಿ ದಸರಾವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅಧಿಕಾರಿಗಳಿಗೆ ಜನಪರವಾದ ಮನಸ್ಸು, ಕಾಳಜಿ, ಹೃದಯ ಇದ್ದರೆ ಮಾತ್ರ ಜನಪರ ಅಭಿವೃದ್ಧಿ ಸಾಧ್ಯ. ಕಳೆದ ಐದು ವರ್ಷಗಳಲ್ಲಿ ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ ಇಡೀ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ನಾಲ್ವಡಿ ಅರಸರು ಮಾದರಿ

ಗತಕಾಲದ ಅಭಿವೃದ್ಧಿಯ ವೈಭವ ಮೈಸೂರಿನಲ್ಲಿ ಮರುಕಳಿಸಬೇಕು. ನಾಲ್ವಡಿ ಅರಸರು ಮಾಡಿದ ನೀರಾವರಿ, ಕೃಷಿ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಮಗೆ ಮಾದರಿಯಾಗಲಿ. ಅವರ ಕಾಲದ ಅಭಿವೃದ್ಧಿಯ ವೈಭವ ಜಿಲ್ಲೆಯಲ್ಲಿ ಮರುಕಳಿಸಬೇಕು ಎಂದರು.

ಇದನ್ನೂ ಓದಿ: CM Siddaramaiah : ಈಶ್ವರಪ್ಪ ಒಂದು ಸವಕಲು ನಾಣ್ಯ, ಅವರ ಮಾತಿಗೆ ಬೆಲೆ ಕೊಡಬೇಡಿ ಎಂದ ಸಿಎಂ ಸಿದ್ದರಾಮಯ್ಯ

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಅಧಿಕಾರಿಗಳಿಗೂ ಅಭಿನಂದಿಸಿ , ದಸರಾದಲ್ಲಿ ಕಾಣಿಸಿದ ಒಗ್ಗಟ್ಟು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲೂ ಕಾಣಬೇಕು ಎಂದು ಸೂಚಿಸಿದರು.

Exit mobile version