ಮಂಗಳೂರು: ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಬುಧವಾರ ನಡೆದ ವಿಚಾರಣೆ ವೇಳೆ ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದೆ. ಈ ಪ್ರಕರಣದ ವಿಚಾರಣೆ ನಡೆಸಲು ಸಿವಿಲ್ ಕೋರ್ಟ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಆದರೆ, ಈಗ ಈ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಹೀಗಾಗಿ ಮುಂದಿನ ವಿಚಾರಣೆ ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲೇ ನಡೆಯಲಿದೆ.
ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸಲು ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು.
ಈ ಮಧ್ಯೆ, ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅಡಿಯಲ್ಲಿ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿತ್ತು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.
ಮೂಲ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ಜೂನ್ 13ರಂದು ಮಧ್ಯಂತರ ಆದೇಶ ಮಾಡಿತ್ತು. ಎರಡೂ ಕಡೆಯ ವಾದಗಳನ್ನು ಆಲಿಸಿದ್ದ ಸಿವಿಲ್ ನ್ಯಾಯಾಲಯ ಆಗಸ್ಟ್ 27ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಅದನ್ನೂ ಮುಂದೂಡಿ ನವೆಂಬರ್ ೯ರ ದಿನವನ್ನು ನಿಗದಿಪಡಿಸಿತ್ತು.
ಇದೀಗ ಬುಧವಾರ ಮಹತ್ವದ ತೀರ್ಪನ್ನು ಪ್ರಕಟಿಸಿರುವ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ೨೦೨೩ರ ಜನವರಿ ೮ಕ್ಕೆ ಮುಂದೂಡಿದೆ. ವಿಶ್ವ ಹಿಂದು ಪರಿಷತ್‌ನ ಅರ್ಜಿಯನ್ನು ಅದು ವಿಚಾರಣೆಗೆ ಎತ್ತಿಕೊಂಡಿದೆ.
ಜ್ಞಾನವಾಪಿ ಮಾದರಿಯಲ್ಲೇ ನಡೆಯುತ್ತಾ ವಿಚಾರಣೆ?
ಮಳಲಿ ಮಸೀದಿಯ ಮೂಲ ಒಂದು ದೇವಸ್ಥಾನವಾಗಿತ್ತೇ ಎನ್ನುವ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಮಹತ್ವದ ವಿಚಾರಣೆ ಮುಂದಿನ ಹಂತಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಇದಕ್ಕೂ ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಚಾರಣೆಗೂ ಸಣ್ಣ ಮಟ್ಟಿನ ಸಾಮ್ಯತೆ ಇದೆ.
ಇದು ದೇವಸ್ಥಾನವೇ ಮಸೀದಿಯೇ ಎನ್ನುವುದನ್ನು ಪ್ರಮುಖವಾಗಿ ಕೋರ್ಟ್ ತೀರ್ಮಾನಿಸಬೇಕಾದ ಅನಿವಾರ್ಯತೆ ಮುಂದೆ ಎದುರಾಗಲಿದೆ. ಅದರ ಮೊದಲ ಹಂತ ಈಗ ಆರಂಭವಾಗಲಿದೆ.
ಇದನ್ನು ಓದಿ | ಆರ್‌ಟಿಸಿಯಲ್ಲಿ ಮಳಲಿ ಮಸೀದಿ ಹೆಸರು; ತಹಸೀಲ್ದಾರ್ ಆದೇಶಕ್ಕೆ ಮಂಗಳೂರು ಎಸಿ ಕೋರ್ಟ್ ತಡೆಯಾಜ್ಞೆ