ಮಂಡ್ಯ: “ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿದವನಿಗೆ ಗಲ್ಲು ಶಿಕ್ಷೆಯಾಗಬೇಕು. ಸರ್ಕಾರ ಅವನಿಗೆ ಊಟ, ತಿಂಡಿ ಕೊಟ್ಟು ಪೋಷಣೆ ಮಾಡುವುದು ಬೇಡ, ಅವನನ್ನು ನೇಣಿಗೆ ಹಾಕಬೇಕು. ಇದೊಂದು ಮಾಡಿಕೊಡಿ ಸಾಕು” ಎಂದು ಮಳವಳ್ಳಿ ಪಟ್ಟಣದಲ್ಲಿ ಟ್ಯೂಶನ್ ಹೇಳಿಕೊಡುತ್ತಿದ್ದ ಶಿಕ್ಷಕನಿಂದಲೇ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಕೊಲೆಯಾದ ಬಾಲಕಿಯ ಪೋಷಕರು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬಳಿ ತೋಡಿಕೊಂಡ ಅಳಲು.
ಟ್ಯೂಶನ್ ಶಿಕ್ಷಕನೇ ಅತ್ಯಾಚಾರ ಎಸಗಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಅಲ್ಲದೆ, ಕೆಲವು ಕಡೆ ಪ್ರತಿಭಟನೆಗಳೂ ನಡೆದಿದ್ದು, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹಗಳು ವ್ಯಕ್ತವಾಗಿವೆ.
ನಿಖಿಲ್ ಎದುರು ಕಣ್ಣೀರು
ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಮಳವಳ್ಳಿಯ ಬಾಲಕಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಬಾಲಕಿ ಕುಟುಂಬಸ್ಥರು, “ತಪ್ಪಿತಸ್ಥ ಶಿಕ್ಷಕನಿಗೆ ಊಟ, ತಿಂಡಿ ಏನನ್ನೂ ಕೊಡದೇ ಗಲ್ಲಿಗೆ ಏರಿಸಬೇಕು” ಎಂದು ಮನವಿ ಮಾಡಿದರು.
ದೇಶವೇ ತಲೆತಗ್ಗಿಸುವ ವಿಚಾರ- ನಿಖಿಲ್
ಮೃತ ಬಾಲಕಿ ಕುಟುಂಬ ಸದಸ್ಯರ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಸಾಂತ್ವನ ಹೇಳಿದರು. ಬಳಿಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಇದು ಇಡೀ ದೇಶವೇ ತಲೆತಗ್ಗಿಸುವ ವಿಚಾರವಾಗಿದೆ. ಈ ಕೃತ್ಯ ಮಾಡಿದವನನ್ನು ಗಲ್ಲಿಗೆ ಏರಿಸಬೇಕು. ಈ ಕುಟುಂಬದ ಪರ ನಾವು ನಿಲ್ಲುತ್ತೇವೆ. ಇದು ಪಕ್ಷಾತೀತ ಹೋರಾಟವಾಗಬೇಕು. ಇಲ್ಲಿ ರಾಜಕೀಯ ಬೇಡ ಎಂದು ಕಿಡಿಕಾರಿದರು.
ಇದನ್ನೂ ಓದಿ | Fan Fight | ರೋಹಿತ್ ಅಭಿಮಾನಿಯನ್ನು ಕೊಂದ ಕೊಹ್ಲಿ ಅಭಿಮಾನಿ, ಫ್ಯಾನ್ ಫೈಟ್ ಕೊಲೆಯಲ್ಲಿ ಅಂತ್ಯ
ಇಂದು ಆರೋಪಿ ಜೈಲಿಗೆ ಹೋಗುತ್ತಾನೆ. ಐದಾರು ವರ್ಷಗಳ ಕಾಲ ಇರುತ್ತಾನೆ. ಅಲ್ಲಿ ಒಳ್ಳೇ ಊಟ, ತಿಂಡಿ ಹಾಕುತ್ತಾರೆ. ಮತ್ತೆ ಬರುತ್ತಾನೆ. ಆದರೆ, ಹೀಗೆ ಆಗಬಾರದು. ಆತನಿಗೆ ಶಿಕ್ಷೆ ಆಗಬೇಕು. ಜನಪ್ರತಿನಿಧಿಗಳಿಗೆ ಜವಾಬ್ದಾರಿಯಿಂದ ವರ್ತಿಸಬೇಕು. ಕೇವಲ ಅಧಿಕಾರಕ್ಕಾಗಿ ಇರಬಾರದು. ನೊಂದವರ ಜತೆಗೆ ನಾವು ನಿಲ್ಲಬೇಕಿದ್ದು, ಅದೇ ಧರ್ಮ ಎಂದು ಹೇಳಿದರು.
ಜಿಲ್ಲಾಡಳಿತ ಕ್ರಮವಹಿಸದೇ ಕುಂಭಮೇಳ ಮಾಡುತ್ತಿದೆ- ಶಾಸಕ ಅನ್ನದಾನಿ
ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಧಿಕಾರಿ ಬಂದು ಸಾಂತ್ವನ ಹೇಳಿಲ್ಲ. ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಕುಂಭ ಮೇಳ ಮಾಡುತ್ತಿದೆ. ಇವತ್ತು ನಿಖಿಲ್ ಕುಮಾರಸ್ವಾಮಿ ಬಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಬಾಲಕಿ ಮೇಲೆ ದೌರ್ಜನ್ಯ ಮಾಡಿದವರನ್ನು ಗಲ್ಲಿಗೆ ಏರಿಸಬೇಕು ಎಂದು ಶಾಸಕ ಅನ್ನದಾನಿ ಹೇಳಿದರು.
ಶಿಕ್ಷಕಿಯರ ಭೇಟಿ, ಸಾಂತ್ವನ
ಮೃತ ಬಾಲಕಿ ಮನೆಗೆ ವಿದ್ಯಾವಿಕಾಸ್ ಶಾಲಾ ಶಿಕ್ಷಕಿಯರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಶಿಕ್ಷಕನ ಈ ಕೃತ್ಯವನ್ನು ಕಟುವಾಗಿ ಖಂಡಿಸಿದ್ದಾರೆ. ಆತನ ಕೃತ್ಯದಿಂದ ಇಡಿ ಶಿಕ್ಷಕ ವೃತ್ತಿಗೆ ಅಪಮಾನವಾದಂತಾಗಿದೆ. ಬಾಲಕಿಯು ಶಾಲೆಯಲ್ಲಿ ಎಲ್ಲರ ಜತೆಗೆ ಚೆನ್ನಾಗಿ ಬೆರೆಯುತ್ತಿದ್ದಳು. ಬಹಳ ಉತ್ತಮವಾಗಿ ಓದುತ್ತಿದ್ದಳು. ಅವಳ ಯಾವುದೇ ದೂರು ಇರಲಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತ ಬಾಲಕಿಯ ಶಾಲಾ ಶಿಕ್ಷಕಿ ಶಶಿರೇಖಾ ಹೇಳಿದ್ದಾರೆ.
ಸಚಿವರಾದ ಗೋಪಲಯ್ಯ, ಅಶ್ವತ್ಥನಾರಾಯಣ ಭೇಟಿ
ಮೃತ ಬಾಲಕಿಯ ನಿವಾಸಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಅಶ್ವತ್ಥನಾರಾಯಣ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಆರೋಪಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಮುಸ್ಲಿಂ ಮುಖಂಡರಿಂದ ಸಾಂತ್ವನ
ಮಳವಳ್ಳಿ ಮುಸ್ಲಿಂ ಸಮುದಾಯದ ಮುಖಂಡರು ಮೃತ ಬಾಲಕಿ ಮನೆಗೆ ಭೇಟಿ ನೀಡಿದ್ದು, ಆಕೆಯ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ನಾವೆಲ್ಲರೂ ಭಾರತೀಯರು, ಈ ನೆಲದಲ್ಲಿ ಭೇದಭಾವವಿಲ್ಲ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನಮ್ಮ ನೆಲದ ಕಾನೂನಿನ ಮೇಲೆ ನಮಗೆ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ನಮ್ಮ ಅಗತ್ಯ ಬಿದ್ದಾಗ ಕುಟುಂಬದ ಜತೆ ಇದ್ದೇ ಇರುತ್ತೇವೆ. ಆರೋಪಿಗೆ ಗಲ್ಲು ಶಿಕ್ಷೆಯಾಗಲಿದೆ ಎಂದು ನಂಬಿದ್ದೇವೆ ಎಂದು ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ | ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಕೊಲೆ ಬೆದರಿಕೆ: ದೂರು ದಾಖಲು
ದಾವಣಗೆರೆ ಪ್ರತಿಭಟನೆ
ಮಂಡ್ಯದ ಮಳವಳ್ಳಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದಾವಣಗೆರೆಯಲ್ಲಿ ಹಿಂದು ಜನ ಜಾಗೃತಿ ಸೇನಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅತ್ಯಾಚಾರ ಮಾಡಿದ ಕಾಮುಕ ಶಿಕ್ಷಕನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ, ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ
ಮಳವಳ್ಳಿಯಲ್ಲಿ ಟ್ಯೂಶನ್‌ಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಟ್ಯೂಶನ್ ಹೇಳಿಕೊಡುತ್ತಿದ್ದ ಶಿಕ್ಷಕನೇ ಕೃತ್ಯ ಎಸಗಿರುವುದು ಮರಣೋತ್ತರ ಪರೀಕ್ಷೆ ವೇಳೆ ಬಯಲಾಗಿತ್ತು. ಶಿಕ್ಷಕ ಕಾಂತರಾಜ್‌ನೇ ಅತ್ಯಾಚಾರವೆಸಗಿ ಕೊಲೆಗೈದಿದ್ದಾನೆಂಬುದು ತಿಳಿದುಬಂದಿತ್ತು. ಅಲ್ಲದೆ, ಬಾಲಕಿಯನ್ನು ಟ್ಯೂಶನ್‌ಗೆಂದು ಈತನೇ ಫೋನ್ ಮಾಡಿ ಕರೆಸಿಕೊಂಡಿದ್ದು, ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಬಾಲಕಿ ಪೋಷಕರಿಗೆ ವಿಷಯ ತಿಳಿದರೆ ಎಂದು ಭಯಗೊಂಡು ಕೊಲೆ ಮಾಡಿದ್ದ ಎಂದು ಮಂಡ್ಯ ಎಸ್‌ಪಿ ಯತೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಶಿಕ್ಷಕ ಕಾಂತರಾಜ್ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಮೊದಲು ಆಕೆ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಪ್ರಜ್ಞೆ ತಪ್ಪಿಸಿದ್ದಾನೆ. ಕೊನೆಗೆ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಮನೆಯ ಪಕ್ಕದಲ್ಲಿದ್ದ ನೀರಿನ ಸಂಪ್‌ನೊಳಕ್ಕೆ ಆಕೆಯ ಶವವನ್ನು ಎಳೆದೊಯ್ದು ಹಾಕಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಮೇಲೆ ಐಪಿಸಿ 302 ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಪೋಕ್ಸೊ ಕಾಯ್ದೆ ದಾಖಲಿಸಲಾಗಿದೆ.
ಇದನ್ನೂ ಓದಿ | ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿ ಕೊಂದ ಕಾಮಪಿಪಾಸು ಶಿಕ್ಷಕ