ಮಾರುತಿ ಪಾವಗಡ, ಬೆಂಗಳೂರು
ಎಸ್. ನಿಜಲಿಂಗಪ್ಪ, ಪಿ.ವಿ ನರಸಿಂಹ ರಾವ್ ಬಳಿಕ ದಕ್ಷಿಣ ಭಾರತದ ಮತ್ತೊಬ್ಬ ನಾಯಕನಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿದ್ಯಾರ್ಥಿ ನಾಯಕನಿಂದ ಹಿಡಿದು ಎಐಸಿಸಿ ಅಧ್ಯಕ್ಷ ಸ್ಥಾನದವರೆಗೂ ಬೆಳೆದು ಬಂದ ರಾಜಕೀಯ ದಾರಿ ಕುತೂಹಲಕರ. ಬಹಳ ವರ್ಷಗಳಿಂದ ಗಾಂಧಿ ಕುಟುಂಬದ ಕೈಯಲ್ಲಿದ್ದ ಎಐಸಿಸಿ ಅಧ್ಯಕ್ಷ ಪಟ್ಟ ಈ ಬಾರಿ ಕಾರ್ಯಕರ್ತರ ಕೈ ಸೇರಲಿರುವುದು ವಿಶೇಷ ಮತ್ತು ಕಾಂಗ್ರೆಸ್‌ನಲ್ಲಿ ಮಹತ್ವದ ಪಲ್ಲಟ. ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡ್, ಈ ಬಾರಿ ಆಂತರಿಕ ಚುನಾವಣೆ ಮಾಡಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು. ಮೊದಲು ನಾಮಪತ್ರ ಸಲ್ಲಿಕೆಗೆ ಹಲವರು ಮನಸ್ಸು ಮಾಡಿದ್ದರೂ, ಕೊನೆಯ ದಿನ ನಾಮಪತ್ರ ಸಲ್ಲಿಕೆ ಮಾಡಿದ್ದು ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಮತ್ತು ಕೆ.ಎನ್ ತ್ರಿಪಾಠಿ. ಇವರಲ್ಲಿ ಮುಂಚೂಣಿಯಲ್ಲಿರುವವರು ಖರ್ಗೆ ಮತ್ತು ತರೂರ್.
ವಿವಾದ ವರ್ಸಸ್ ನಿಷ್ಠೆ
ಸದಾ ವಿವಾದಾತ್ಮಕ ನಾಯಕನಾಗಿ ತರೂರ್ ಗುರುತಿಸಿಕೊಂಡಿದ್ದರೆ, ಖರ್ಗೆ ಪಕ್ಷ ಮತ್ತು ಹೈಕಮಾಂಡ್‌ಗೆ ಸದಾ ನಿಷ್ಠರಾಗಿರುವವರು. ಈ ಮಟ್ಟದವರೆಗೆ ಬೆಳೆಯಲು ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಬಹಳ ದೊಡ್ಡದಿದೆ. 1942ರಲ್ಲಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿಯ ದಲಿತ ಕುಟುಂಬದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಅವರ ಬದುಕಿನ ಆರಂಭದ ದಿನಗಳು ಕಡುಕಷ್ಟಕರ. ಚಿಕ್ಕ ವಯಸ್ಸಿನಲ್ಲಿಯೇ ಮಹಾ ದುರಂತವನ್ನು ಕಾಣಬೇಕಾಯಿತು. ತಂದೆ ಹೊರಗೆ ಕೆಲಸಕ್ಕೆ ಹೋಗಿದ್ದಾಗ ಗ್ರಾಮದ ಮೇಲೆ ರಜಾಕರು ದಾಳಿ ಮಾಡಿದರು. ಇಡೀ ಗ್ರಾಮಕ್ಕೆ ಬೆಂಕಿ ಹಚ್ಚಿದರು. ಇವರ ಕುಟುಂಬದವರು ಬೆಂಕಿಗೆ ಆಹುತಿಯಾದರು. ಕೆಲಸದಿಂದ ವಾಪಸ್ ಬಂದಾಗ ಮಗು ಕಣ್ಣೀರು ಹಾಕುತ್ತಿರುವುದನ್ನು ಕಂಡು ತಂದೆ ಕಂಗೆಡುತ್ತಾರೆ. ಜೀವ ಉಳಿಸಿಕೊಳ್ಳಲು ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ರಾತ್ರೋರಾತ್ರಿ ವರವಟ್ಟಿ ಖಾಲಿ ಮಾಡಿ ಗುಲ್ಬರ್ಗ ತಲುಪುತ್ತಾರೆ. ಬಳಿಕ ಅಲ್ಲಿ ಒಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಮಗನಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಾರೆ.
ವಿದ್ಯಾರ್ಥಿ ಸಂಘಟನೆ ನಾಯಕ…
ಗುಲ್ಬರ್ಗ ಕಾಲೇಜಿನಲ್ಲಿ ಖರ್ಗೆ ಕಾನೂನು ಶಿಕ್ಷಣ ಮುಗಿಸುತ್ತಾರೆ. ಮೊದಲಿಂದಲೂ ಕಾರ್ಮಿಕರ ಪರ ಇದ್ದ ಇವರು ಕಾರ್ಮಿಕರ ಕೇಸ್‌ಗಳನ್ನು ವಾದಿಸಲು ಶುರು ಮಾಡುತ್ತಾರೆ. ಅಲ್ಲಿಂದ ಜಿಲ್ಲಾ ಕಾಂಗ್ರೆಸ್‌ಗೆ ಎಂಟ್ರಿ ಕೊಡುತ್ತಾರೆ. 1970ರಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಖರ್ಗೆಯವರು ಆ ಬಳಿಕ ರಾಜಕೀಯದಲ್ಲಿ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂಬ ಬಿರುದು ಪಡೆದರು.
ಸತತ ಗೆಲುವು ಸಾಧಿಸಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಂಗಾರಪ್ಪ ಸಂಪುಟದಲ್ಲಿ ಕಾರ್ಮಿಕ ಸಚಿವ ಖಾತೆ ಸಿಕ್ಕಿತು. ವೀರಪ್ಪ ಮೊಯ್ಲಿ ಕಾಲದಲ್ಲಿ ಜಲ ಸಂಪನ್ಮೂಲ, ಸಮಾಜ ಕಲ್ಯಾಣ ಖಾತೆ ಸಿಕ್ಕಿತು. ಬಳಿಕ 1994ರಲ್ಲಿ ಪಕ್ಷ ಸೋತಾಗ ವಿಪಕ್ಷ ನಾಯಕನ ಹೊಣೆ ಹೊತ್ತರು. 1999ರಲ್ಲಿ ಕಾಂಗ್ರೆಸ್ ಮತ್ತೆ ಗೆದ್ದಾಗ ಎಸ್ಎಂ ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಕೆಲಸ ಮಾಡಿದರು.
ಇವರು ಗೃಹ ಸಚಿವರಾಗಿದ್ದಾಗ ವರನಟ ಡಾ. ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ 108 ದಿನಗಳ ಕಾಲ ಬಂದಿಯಾಗಿರಿಸಿಕೊಂಡಿದ್ದ. ಆ ಸಂದರ್ಭದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ಖರ್ಗೆ ಅವರು ನಿಭಾಯಿಸಿದ ರೀತಿಯ ಬಗ್ಗೆ ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ.
ತಪ್ಪಿತು ಮುಖ್ಯಮಂತ್ರಿ ಹುದ್ದೆ
2004ರಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಖರ್ಗೆಯವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ದೇವೇಗೌಡರ ಮನೆಗೂ ಇವರು ಹೋಗಿ ಮಾತುಕತೆ ನಡೆಸಿದ್ದರು. ಆದರೆ ರಾಜಕೀಯ ದೂರದೃಷ್ಟಿ ಇಟ್ಟುಕೊಂಡಿದ್ದ ದೇವೇಗೌಡರು, ದಲಿತ ನಾಯಕನಿಗೆ ಸಿಎಂ ಸ್ಥಾನ ಕೊಟ್ಟು ನಾಳೆ ಬೆಂಬಲ ವಾಪಸ್ ಪಡೆದರೆ ಆಗ ಜೆಡಿಎಸ್‌ಗೆ ನಷ್ಟವಾಗುತ್ತದೆ ಎಂದು ಲೆಕ್ಕಾಚಾರ ಹಾಕಿ ಧರ್ಮ ಸಿಂಗ್ ಅವರಿಗೆ ಸಿಎಂ ಹುದ್ದೆ ಸಿಗುವಂತೆ ಮಾಡಿದರು ಎಂಬ ಮಾತಿದೆ. ಬಳಿಕ 2018ರ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ದೇವೇಗೌಡರು ಖರ್ಗೆ ಅವರು ಸಿಎಂ ಆಗಲಿ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಚುನಾವಣೆ ಫಲಿತಾಂಶ ಸಂಪೂರ್ಣ ಬರುವ ಮೊದಲೇ ಬೇಷರತ್ತಾಗಿ ಸಿಎಂ ಹುದ್ದೆಯನ್ನು ಜೆಡಿಎಸ್‌ಗೆ ಒಪ್ಪಿಸಿತು!
2008ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಖರ್ಗೆ ವಿಪಕ್ಷ ನಾಯಕನ ಕೆಲಸ ನಿಭಾಯಿಸಿದರು. ಆದರೆ 2009ರಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕೇಂದ್ರ ನಾಯಕರು ಖರ್ಗೆ ಅವರನ್ನು ದೆಹಲಿ ಪಾಲಿಟಿಕ್ಸ್‌ಗೆ ಕರೆದುಕೊಂಡು ಹೋದರು. ಕೇಂದ್ರದಲ್ಲಿ ಕಾರ್ಮಿಕ, ರೈಲ್ವೆ ಸಚಿವರಾಗಿ ಮಹತ್ವದ ಇಲಾಖೆಗಳ ಕಾರ್ಯ ನಿಭಾಯಿಸಿದರು. 2014ರಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನಕ್ಕೆ ಸಿಮೀತವಾದಾಗ ಕಾಂಗ್ರೆಸ್ ಸಂಸದೀಯ ನಾಯಕನಾಗಿ ಹೊಣೆ ಹೊತ್ತರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಉಮೇಶ್ ಜಾಧವ್ ವಿರುದ್ಧ ಸೋತು ಹೋದರು. ಹತ್ತು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದ ಖರ್ಗೆಯವರಿಗೆ ಈ ಸೋಲು ಆಘಾತಕಾರಿಯಾಗಿತ್ತು.
ಇಷ್ಟು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ ಈವರೆಗೆ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಲೇ ಇಲ್ಲ. ಆದರೆ ಸಿಎಂ ಆಗಲೇ ಬೇಕು ಎಂಬ ಹಪಹಪಿ, ಮಹತ್ವಾಕಾಂಕ್ಷೆ ಖರ್ಗೆ ಅವರಿಗೆ ಎಂದೂ ಇರಲಿಲ್ಲ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ಮಲ್ಲಿಕಾರ್ಜುನ ಖರ್ಗೆ ಮೊದಲಿಂದಲೂ ಆಕಾಂಕ್ಷಿ ಆಗಿರಲಿಲ್ಲ. ಆದರೆ ದೇಶಾದ್ಯಂತ ಕಾಂಗ್ರೆಸ್‌ನಿಂದ ದೂರವಾಗುತ್ತಿರುವ ದಲಿತ ವೋಟ್ ಬ್ಯಾಂಕ್ ಸೆಳೆಯಲು ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪ್ರಧಾನಿ ಮೋದಿಯವರನ್ನು ಎದುರಿಸಲು ಖರ್ಗೆ ಸೂಕ್ತ, ಹೈಕಮಾಂಡ್‌ಗೂ ಖರ್ಗೆ ನಿಷ್ಠೆಯ ಬಗ್ಗೆ ಅಪಾರ ನಂಬಿಕೆ ಇದೆ. ಲಂಗುಲಗಾಮಿಲ್ಲದ ಕುದುರೆಗಳಂತೆ ಓಡುವ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಕಂಟ್ರೋಲ್ ಮಾಡಲು ಖರ್ಗೆ ಅತ್ಯಂತ ಸೂಕ್ತ ಅಭ್ಯರ್ಥಿ ಎನ್ನುವ ಲೆಕ್ಕಾಚಾರದಲ್ಲಿ ಖರ್ಗೆ ಅವರಿಂದ ಎಐಸಿಸಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಕೊಡಿಸಲಾಗಿದೆ. ಒಟ್ಟಾರೆ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಒಂದೇ ಕಲ್ಲಿನಿಂದ ಹಲವು ಹಣ್ಣುಗಳನ್ನು ಉದುರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಇದನ್ನೂ ಓದಿ | Cong Prez Poll | ರಾಜ್ಯಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ