Site icon Vistara News

ಮಲ್ಲಿಕಾರ್ಜುನ ಖರ್ಗೆ | ಕ್ರೂರ ರಜಾಕಾರರಿಂದ ಪ್ರಾಣ ಉಳಿಸಿಕೊಂಡಿದ್ದ ಮಗು ಈಗ ಕಾಂಗ್ರೆಸ್‌ ಅಧ್ಯಕ್ಷ

mallikarjun kharge 2

ಬೆಂಗಳೂರು: ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಹೌದೇ ಅಲ್ಲವೇ ಎಂದು ಅನೇಕರು ಪ್ರಶ್ನಿಸುವುದುಂಟು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಪ್ರಮುಖ ಹುದ್ದೆ, ಸ್ಥಾನಗಳಲ್ಲಿ ಕೂರುವಂತಾದರೆ ಅಷ್ಟರ ಮಟ್ಟಿಗಾದರೂ ಅದನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳಬಹುದು. ಭಾರತದಲ್ಲಿ ಒಂದು ಚಲನಶೀಲ ವ್ಯವಸ್ಥೆ ಜೀವಂತವಾಗುವುದಕ್ಕೆ ಮತ್ತೆಒಂದು ಉದಾಹರಣೆಯಾಗಿ ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮುಂದಿದ್ದಾರೆ.

ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿಂತಾಶ ಹೊರ ಬಿದ್ದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಸೋಲು ಕಂಡಿದ್ದಾರೆ. ಈ ಮೊಲಕ ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದಂತಾಗಿದೆ. ಹಾಗೆಯೇ, ಈ ಸ್ಥಾನವನ್ನು ವಹಿಸಿಕೊಳ್ಳುತ್ತಿರುವ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ. ತರೂರ್ ಅವರಿಗೆ 1072 ಮತಗಳು ಲಭಿಸಿಸಿದ್ದರೆ, ಖರ್ಗೆ ಅವರು 7897 ಮತಗಳನ್ನು ಪಡೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು 11 ಚುನಾವಣೆಗಳಲ್ಲಿ ಜಯಿಸಿ ನಿರಂತರ ಅಧಿಕಾರವನ್ನು ಅನುಭವಿಸಿದವರಾದರೂ ಅವರ ಪ್ರಾರಂಭದ ದಿನಗಳು ಈಗಿನಂತೆ ಇರಲಿಲ್ಲ. ಇಡೀ ದೇಶ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದರೂ ಕರ್ನಾಟಕದ ಒಂದು ಭಾಗವೂ ಸೇರಿ ಅನೇಕ ಪ್ರದೇಶಗಳು ಸ್ವಾತಂತ್ರ್ಯದ ಸಿಹಿಯನ್ನು ಅನುಭವಿಸಲಿಲ್ಲ. ಈಗ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿರುವ, ಹೈದರಾಬಾದ್‌ ಕರ್ನಾಟಕ ಭಾಗವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಹೈದರಾಬಾದ್‌ ನಿಜಾಮ, ಭಾರತಕ್ಕೆ ಸೇರಬೇಕೊ ಬೇಡವೋ ಎಂಬ ನಿರ್ಧಾರವನ್ನೇ ತೆಗೆದುಕೊಂಡಿರಲಿಲ್ಲ. ನಂತರದಲ್ಲಿ, ಯಾವುದೇ ಕಾರಣಕ್ಕೆ ಭಾರತದೊಂದಿಗೆ ವಿಲೀನ ಆಗುವುದಿಲ್ಲ ಎಂದು ಹೈದರಾಬಾದ್ ನಿಜಾಮ ಮೀರ್‌ ಉಸ್ಮಾನ್ ಅಲಿ ಖಾನ್ ತಕರಾರು ತೆಗೆದ.

ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಸೋನಿಯಾ ಗಾಂಧಿ.

ತೆಲಂಗಾಣದ ಎಂಟು ಜಿಲ್ಲೆಗಳು, ಮರಾಠವಾಡದ ಐದು ಜಿಲ್ಲೆಗಳು, ಕರ್ನಾಟಕದ ಮೂರು ಜಿಲ್ಲೆಗಳು ಮತ್ತು ಬೀದರ್ ಜಿಲ್ಲೆಯ ಕೆಲ ಪ್ರದೇಶಗಳು ಈ ಸಂಸ್ಥಾನಕ್ಕೆ ಸೇರುತ್ತಿದ್ದವು. ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ್ದ ಪ್ರದೇಶದ ಜನರು ಹೈದರಾಬಾದ್‌ ನಿಜಾಮನ ವಿರುದ್ಧ ಸಿಡಿದೆದ್ದರು. ಸ್ವಾಮಿ ರಮಾನಂದ ತೀರ್ಥರ‌ ನೇತೃತ್ವದಲ್ಲಿ ಕರ್ನಾಟಕ ಭಾಗದ ಜನರು ಹೋರಾಟಕ್ಕೆ ಇಳಿದರೆ ಅತ್ತ ನಿಜಾಮನಬಳಿಯಿದ್ದ ರಜಾಕಾರರು ಎಂಬ ಕ್ರೂರ ಪಡೆ ಜನರ ಮೇಲೆ ದಾಳಿಗೆ ಮುಂದಾಯಿತು.

ಕಂಡಕಂಡಲ್ಲಿ ಜನರನ್ನು ಹತ್ಯೆ ಮಾಡುತ್ತ ಮುಂದೆ ಸಾಗಿದ ರಜಾಕಾರರ ಪಡೆ ಹುಮ್ನಾಬಾದ್ ತಾಲೂಕಿನ ವರವಟ್ಟಿ ಎಂಬ ಗ್ರಾಮಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿತು. ಕಣ್ಣಿಗೆ ಕಂಡ ಗುಡಿಸಲಿಗೆ ಬೆಂಕಿ ಇಟ್ಟ ರಜಾಕಾರರ ಕೃತ್ಯದಿಂದಾಗಿ ಅಲ್ಲಿದ್ದ ತಾಯಿ, ಮಕ್ಕಳು ಸುಟ್ಟುಹೋದರು. ಈ ಸಮಯದಲ್ಲಿ ಹೊರಹೋಗಿದ್ದ ಗುಡಿಸಲಿನ ಯಜಮಾನ ವಾಪಸಾಗಿ ಬಂದು ನೋಡಿದರೆ ಎಲ್ಲವೂ ಮುಗಿದುಹೋಗಿತ್ತು. ಆಕಾಶವೇ ಕಳಚಿ ಬಿದ್ದಂತೆ ರೋದಿಸುತ್ತಿದ್ದವನಿಗೆ ದೂರದ ಮರದಲ್ಲಿದ್ದ ಜೋಲಿ ಕಾಣಿಸಿತು. ಹತ್ತಿ ಹೋಗಿ ನೋಡಿದಾಗ ಅದರಲ್ಲಿದ್ದದ್ದು ತನ್ನ ಮಗು ಎಂಬುದು ತಿಳಿದು, ತಾನು ಜೀವಿಸುವುದಕ್ಕೆ ಇನ್ನೂ ಕಾರಣ ಉಳಿದಿದೆ ಎಂದುಕೊಂಡು ಅಲ್ಲಿಂದ ಹೊರಟ. ಅವರ ಹೆಸರು ಮಾಪಣ್ಣ.

ಒಂದೆಡೆ ಸರ್ದಾರ್‌ ವಲ್ಲಭಬಾಯಿ ಪಟೇಲರು ನಿಜಾಮನ ಸಾಮ್ರಾಜ್ಯಕ್ಕೆ ಭಾರತೀಯ ಸೈನ್ಯವನ್ನು ನುಗ್ಗಿಸಿ ಹೈದರಾಬಾದ್‌ ಕರ್ನಾಟಕ ವಿಮೋಚನೆ ಮಾಡಿದರೆ ಇತ್ತ ಮಾಪಣ್ಣ ತನ್ನ ಮಗುವಿನೊಂದಿಗೆ ಗುಲ್ಬರ್ಗ (ಈಗಿನ ಕಲಬುರಗಿ) ನಗರಕ್ಕೆ ಬಂದು ಅಲ್ಲಿ ಮಿಲ್‌ನಲ್ಲಿ ಕಾರ್ಮಿಕನಾಗಿ ಸೇರಿಕೊಳ್ಳುತ್ತಾರೆ. ಅದೇ ಕಾರ್ಮಿಕನ ಪುತ್ರ ಕಾರ್ಮಿಕ ಮುಖಂಡನಾಗಿ, ಶಾಸಕನಾಗಿ, ಸಚಿವನಾಗಿ, ಕೇಂದ್ರ ರೈಲ್ವೆ ಸಚಿವರೂ ಆಗಿ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ರಾಜ್ಯಸಭೆ ಪ್ರತಿಪಕ್ಷ ನಾಯಕನಾಗಿ ಇದೀಗ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿ ಎಂಬ ಶತಮಾನ ಮೀರಿದ ರಾಜಕೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ.

ಮಾಪಣ್ಣ ಮಲ್ಲಿಕಾರ್ಜುನ್ ಖರ್ಗೆ ಜನಿಸಿದ್ದು 1942ರ ಜುಲೈ 21ರಂದು. ಗುಲ್ಬರ್ಗಾದ ನೂತನ ವಿದ್ಯಾಲಯದಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸರ್ಕಾರಿ ಡಿಗ್ರಿ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ ಪಡೆದು ಶೇಠ್ ಶಂಕರ್‌ಲಾಲ್‌ ಲಾಹೋಟಿ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಕಚೇರಿಯಲ್ಲಿ ಜೂನಿಯರ್ ಆಗಿ ವಕೀಲಿಕೆ ಆರಂಭಿಸಿ, ಕಾರ್ಮಿಕ ಸಂಘಗಳ ಪರವಾಗಿ ಹೋರಾಡಿದರು.

ವಿದ್ಯಾರ್ಥಿ ಜೀವನದಲ್ಲಿದ್ದಾಗ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದರು. 1969ರಲ್ಲಿ, ತಮ್ಮ ತಂದೆ ಕೆಲಸ ಮಾಡುತ್ತಿದ್ದ ಎಂಎಸ್‌ಕೆ ಮಿಲ್‌ ಎಂಪ್ಲಾಯೀಸ್ ಯೂನಿಯನ್‌ನ ಕಾನೂನು ಸಲಹೆಗಾರರಾದರು.

ಸಂಯುಕ್ತ ಮಜ್ದೂರ್ ಸಂಘದ ಪ್ರಭಾವಶಾಲಿ ಕಾರ್ಮಿಕ ಸಂಘದ ನಾಯಕರಾಗಿ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಅನೇಕ ಆಂದೋಲನಗಳನ್ನು ನಡೆಸಿದರು. 1969ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿ ಗುಲ್ಬರ್ಗಾ ಸಿಟಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. 1972, 1979, 1983, 1985, 1989, 1994, 1999, 2004, 2008ರಲ್ಲಿ 9 ಬಾರಿ ವಿಧಾನಸಭೆಗೆ ನಿರಂತರ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡವರು. 2009ರ ಲೋಕಸಭೆ ಚುನಾವಣೆ, 2014ರ ಲೋಕಸಭೆ ಚುನಾವಣೆಯಲ್ಲೂ ಜಯಗಳಿಸಿದರು. ಈ ಮೂಲಕ ಒಟ್ಟು 11ಕ್ಕೆ 11ಬಾರಿ ಜಯಗಳಿಸಿದ್ದ ಖರ್ಗೆ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದ್ದು ಅವರ ಶಿಷ್ಯನೇ ಆಗಿದ್ದ ಉಮೇಶ್‌ ಜಾಧವ್‌.

ಖರ್ಗೆ ಕುಟುಂಬದವರು ಯಾರನ್ನೂ ಬೆಳೆಯಲು ಬಿಡುತ್ತಿಲ್ಲ ಎಂದು ಉಮೇಶ್‌ ಜಾಧವ್‌, ಬಾಬುರಾವ್‌ ಚಿಂಚನಸೂರ್‌, ಮಾಲೀಕಯ್ಯ ಗುತ್ತೇದಾರ್‌ ಸೇರಿ ಅನೇಕರು ಒಟ್ಟಾಗಿ, ಬಿಜೆಪಿ ನಾಯಕತ್ವದ ಬೆಂಬಲವನ್ನೂ ಪಡೆದು ಖರ್ಗೆಅವರನ್ನು ಸೋಲಿಸಿತು. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಅವರಿಟ್ಟಿದ್ದ ನಿಷ್ಠೆಗಾಗಿ ೨೦೨೦ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಇಲ್ಲಿವರೆಗೆ ಕಾರ್ಯನಿರ್ವಹಿಸುತ್ತಿದ್ದರು.

ಮುಖ್ಯಮಂತ್ರಿ ಆಗಲೇ ಇಲ್ಲ
ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ ಕರ್ನಾಟಕದ ಮುಖ್ಯಮಂತ್ರಿಯಾಗಲು ಖರ್ಗೆ ಅವರಿಗೆ ಸಾಧ್ಯವಾಗಲೇ ಇಲ್ಲ. 1999, 2004 ಹಾಗೂ 2013ರಲ್ಲೂ ಖರ್ಗೆ ಹೆಸರು ಕೇಳಿಬಂದಿತ್ತಾದರೂ. ಯಾವುದೇ ಹುದ್ದೆಗೆ ಬಡಿದಾಡದ ಹಾಗೂ ರಾಜ್ಯಾದ್ಯಂತ ಪಕ್ಷದಲ್ಲಿ ತನ್ನ ಪರವಾಗಿರುವವರನ್ನು ರೂಪಿಸಿಕೊಳ್ಳದ ಕಾರಣಕ್ಕೆ ಸಿಎಂ ಸ್ಥಾನ ಕೈತಪ್ಪುತ್ತಲೇ ಹೋಯಿತು. ಕರ್ನಾಟಕಕ್ಕೆ ಮೊದಲ ದಲಿತ ಮುಖ್ಯಮಂತ್ರಿ ಸಿಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗುತ್ತಲೇ ಹೋಯಿತು. ಜನತಾ ಪರಿವಾರದಿಂದ ಬಂದ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಸಿಕ್ಕರೂ ಖರ್ಗೆ ಮಾತ್ರ ಅವಕಾಶ ದಕ್ಕಿಸಿಕೊಳ್ಳದೇ ಸುಮ್ಮನಿದ್ದರು. ಈಗಲೂ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದವರಲ್ಲ ಖರ್ಗೆ. ಗಾಂಧಿ ಕುಟುಂಬದ ನಿಷ್ಠನಾಗಿ, ಅತ್ಯಂತ ನೆಚ್ಚಿನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಖರ್ಗೆ ಅವರ ಮೊದಲ ಪುತ್ರ ಪ್ರಿಯಾಂಕ್‌ ಖರ್ಗೆ ಮಾಜಿ ಸಚಿವ, ಈಗ ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ. ಬೌದ್ಧ ಧರ್ಮದ ಅನುಯಾಯಿ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಕಲಬುರಗಿಯಲ್ಲಿ ಬುದ್ಧ ವಿಹಾರವನ್ನು ರೂಪಿಸುವುದರಲ್ಲಿ ಇವರ ಪಾತ್ರ ಮಹತ್ವದ್ದು. ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಕಲಬುರ್ಗಿಯಲ್ಲಿ ಬೃಹತ್‌ ಪ್ರಮಾಣದ ಇಎಸ್‌ಐ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ.

ಇದನ್ನೂ ಓದಿ | Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

Exit mobile version