Site icon Vistara News

ಬಿಜೆಪಿಯ SCST ಮೀಸಲಾತಿ ಮಾಸ್ಟರ್‌ ಸ್ಟ್ರೋಕ್‌ಗೆ ಕಾಂಗ್ರೆಸ್‌ ಉತ್ತರ ಮಲ್ಲಿಕಾರ್ಜುನ ಖರ್ಗೆ?

Mallikarjun Kharge held a press conference in Mangaluru

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳ ಪ್ರತಿ ನಡೆಯೂ ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅನೇಕ ಸಂದೇಶಗಳನ್ನು ರಾಜ್ಯಕ್ಕೆ, ವಿಶೇಷವಾಗಿ ಪ್ರತಿಪಕ್ಷ ಬಿಜೆಪಿಗೆ ನೀಡಿದೆ.

ಸಾಂಪ್ರದಾಯಿಕವಾಗಿ ಎಸ್‌ಸಿಎಸ್‌ಟಿ ಸಮುದಾಯ ಕಾಂಗ್ರೆಸ್‌ ಬೆನ್ನಿಗೆ ನಿಂತಿದೆ. ಇದೇ ಕಾರಣಕ್ಕೆ ಅಹಿಂದ ಸಮಾವೇಶಗಳ ಮೂಲಕ ಕಾಂಗ್ರೆಸ್‌ ಸೇರ್ಪಡೆಯಾದ ಸಿದ್ದರಾಮಯ್ಯ ಅವರೇ, ರಾಜ್ಯದ ಮುಖ್ಯಮಂತ್ರಿಯೂ ಆದರು.

ಬಿಜೆಪಿಯ ಅನೇಕ ನಾಯಕರ ವೈಯಕ್ತಿಕ ವರ್ಚಸ್ಸಿನ ಆಧಾರದಲ್ಲಿ ಎಸ್‌ಸಿಎಸ್‌ಟಿ ಸಮುದಾಯ ಬಿಜೆಪಿಗೂ ಮತ ನೀಡಿದೆ. ಆದರೆ ಒಟ್ಟಾರೆ ಸಮುದಾಯಕ್ಕೆ ಸಮುದಾಯವೇ, ವೀರಶೈವ ಲಿಂಗಾಯತ ಸಮುದಾಯದ ರೀತಿಯಲ್ಲಿ ಮತ ನೀಡಿಲ್ಲ. ಈ ಕಾರಣಕ್ಕೆ ಎಸ್‌ಸಿಎಸ್‌ಟಿ ಸಮುದಾಯವನ್ನು ತನ್ನತ್ತ ಸೆಳೆಯಬೇಕು ಎಂದು ಬಿಜೆಪಿ ಅನೇಕ ಪ್ರಯತ್ನ ಮಾಡುತ್ತಿದೆ.

ಕೇಂದ್ರದ ನರೇಂದ್ರ ಮೋದಿ ಸಂಪುಟದಲ್ಲಿ ಅನೇಕ ಎಸ್‌ಸಿಎಸ್‌ಟಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ಸಂಘಟನಾ ಹೊಣೆಗಾರಿಕೆ ನೀಡುವಾಗಲೂ ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯಗಳಿಗೆ ಈ ಹಿಂದಿಗಿಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿಧಾನ ಪರಿಷತ್‌, ರಾಜ್ಯಸಭೆ ಸ್ಥಾನಕ್ಕೆ ಆಯ್ಕೆ ಮಾಡುವಾಗಲೂ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಇತ್ತೀಚೆಗಷ್ಟೇ ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಲು ಮುಂದಾಗಿದೆ. ಎಸ್‌ಸಿ ಸಮುದಾಯಕ್ಕೆ ಶೇ.15ರಿಂದ ಶೇ.೧೭ಕ್ಕೆ, ಎಸ್‌ಟಿ ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ. ಈ ವಿಚಾರವನ್ನು ಬಿಜೆಪಿ ಎಲ್ಲೆಡೆ ಪ್ರಚಾರ ಮಾಡುತ್ತಿದೆ. ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಿ ಒಪ್ಪಿಗೆಯನ್ನೂ ಪಡೆಯುವ ಚಿಂತನೆಯಲ್ಲಿದೆ.

ಇದೆಲ್ಲದರ ಹಿನ್ನೆಲೆಯಲ್ಲೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಅವರು ಎಸ್‌ಸಿ ಸಮುದಾಯಕ್ಕೆ ಸೇರಿದವರು. ಲಿಂಗಾಯತ ಸಮುದಾಯದ ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಕ ಮಾಡಿದ್ದನ್ನು ಪ್ರಚಾರ ಮಾಡುತ್ತಿರುವ ಬಿಜೆಪಿಗೆ ವಿರುದ್ಧವಾಗಿ, ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನೇ ಮಾಡಿದ್ದೇವೆ ಎಂಬ ಅಸ್ತ್ರ ಕಾಂಗ್ರೆಸ್‌ಗೆ ಸಿಕ್ಕಿದೆ.

ಬಿಜೆಪಿಗೆ, ಯಡಿಯೂರಪ್ಪ ಅವರ ಕಾರಣಕ್ಕಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವೀರಶೈವ ಲಿಂಗಾಯತರ ಸಂಪೂರ್ಣ ಬೆಂಬಲ ಇದೆ. ಈ ಭಾಗದಲ್ಲೇ ಎಸ್‌ಸಿಎಸ್‌ಟಿ ಸಮುದಾಯವೂ ಪ್ರಬಲವಾಗಿದೆ. ಇದು ಚುನಾವಣೆಯಲ್ಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಕರ್ನಾಟಕ ಅತಿ ಮುಖ್ಯ ರಾಜ್ಯ

ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಹೆಬ್ಬಾಗಿಲು. ಇದರ ನಂತರ ಇನ್ನೊಂದು ರಾಜ್ಯದಲ್ಲಿ (ಪುದುಚೆರಿ ಹೊರತುಪಡಿಸಿ) ಅಧಿಕಾರ ಹಿಡಿದಿಲ್ಲ. ಈ ರಾಜ್ಯವನ್ನು ಉಳಿಸಿಕೊಳ್ಳದಿದ್ದರೆ, ಬಿಜೆಪಿ ಕೇವಲ ಉತ್ತರ ಭಾರತದ ರಾಜ್ಯ ಎಂಬ ಹಣೆಪಟ್ಟಿಗೆ ಅಂಟಿಕೊಳ್ಳಬೇಕಾಗುತ್ತದೆ.

ಇತ್ತ ಕಾಂಗ್ರೆಸ್‌ಗೆ ಕರ್ನಾಟಕವೇ ಆಕ್ಸಿಜನ್‌. ಇಲ್ಲಿನ ಸ್ಥಳೀಯ ನಾಯಕರ ಕಾರಣಕ್ಕೆ ಹಾಗೂ ನೆಹರೂ ಕುಟುಂಬದ ಜತೆಗೆ ಐತಿಹಾಸಿಕ ಬಾಂಧವ್ಯದ ಕಾರಣಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ. ದೇಶದಲ್ಲೆಲ್ಲ ನೆಲಕಚ್ಚಿದರೂ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಯನ್ನು ಪಕ್ಷ ಹೊಂದಿದೆ.

ಕರ್ನಾಟಕದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಮಾಡಿದ್ದಾರೆ ಎನ್ನಲಾಗದು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ ಸಿಂಗ್‌ ಸ್ಪರ್ಧೆ ಮಾಡಿದ್ದರು. ಆದರೆ ಅವರನ್ನು ಕಣದಿಂದ ಹಿಂದಕ್ಕೆ ಸರಿಸಿ, ತಮ್ಮ ಕುಟುಂಬ ನಿಷ್ಠರನ್ನು ನೆಹರೂ ಕುಟುಂಬ ಕಣಕ್ಕಿಳಿಸಿದೆ ಎನ್ನುವುದು ಇದೀಗ ಬಹಿರಂಗ ಸತ್ಯ. ಎಂತಹದ್ದೇ ಸಂದರ್ಭದಲ್ಲೂ ಖರ್ಗೆ ಅವರು ನೆಹರೂ ಕುಟುಂಬದ ವಿರುದ್ಧ ಹೋಗುವುದಿಲ್ಲ ಎಂಬ ಅಚಲ ನಂಬಿಕೆ ಅವರದ್ದು. ಈ ಕಾರಣಕ್ಕೆ ಖರ್ಗೆ ಅವರನ್ನು ಕಾಂಗ್ರೆಸ್‌ನ ಮೊದಲ ಕುಟುಂಬ ಬೆಂಬಲಿಸಿದೆ.

ಆದರೆ ಖರ್ಗೆ ಅವರ ಆಯ್ಕೆ ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಅದರಲ್ಲೂ ಹೈದರಾಬಾದ್‌ ಕರ್ನಾಟಕದ ಸಂಘಟನೆಗೆ ಹೆಚ್ಚು ಪುಷ್ಠಿ ದೊರಕುತ್ತದೆ. ವಿಧಾನಸಭೆ ಚುನಾವಣೆ ಜತೆಗೆ, ಮುಂಬರುವ ಲೋಕಸಭೆ ಚುನಾವಣೆ ವೇಳೆಯಲ್ಲೂ ಖರ್ಗೆ ಅವರ ಪ್ರಭಾವ ಕೆಲಸ ಮಾಡುವ ಮುನ್ಸೂಚನೆ ಇದೆ. ಎಸ್‌ಸಿಎಸ್‌ಟಿ ಸಮುದಾಯದ ಮತಗಳನ್ನು ಸೆಳೆಯುವ ಬಿಜೆಪಿಯ ನಡೆಗೆ ಸವಾಲನ್ನಂತೂ ಒಡ್ಡುತ್ತದೆ. ಇದಕ್ಕೆ ಬಿಜೆಪಿ ಹೇಗೆ ಪ್ರತಿತಂತ್ರ ರೂಪಿಸುತ್ತದೆ ಎನ್ನುವುದು ಕಾದುನೋಡಬೇಕಿದೆ.

ಇದನ್ನೂ ಓದಿ | Kharge Congress President | ಬೆಲೆಯೇರಿಕೆ ವಿರುದ್ಧ ಹೋರಾಟ, ಅಧ್ಯಕ್ಷರಾದ ಬೆನ್ನಲ್ಲೇ ಕೇಂದ್ರಕ್ಕೆ ಖರ್ಗೆ ಎಚ್ಚರಿಕೆ

Exit mobile version