ಹುಬ್ಬಳ್ಳಿ: ನಾಲ್ಕು ಜಿಲ್ಲೆಗಳಲ್ಲಿ ಓಡಾಡಿದ್ದೇನೆ. ಕಾಂಗ್ರೆಸ್ ಪರ ವಾತಾವರಣವಿದೆ. ಜನರು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಪಣ ತೊಟ್ಟಿದ್ದಾರೆ. ಈ ಬಾರಿ ಖಂಡಿತ ಕಾಂಗ್ರೆಸ್ ಅಧಿಕಾರಕ್ಕೆ (Karnataka Election) ಬರುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಲ್ಲಿಗೆ ಬಂದು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಲೋಕಸಭೆ ಎಲೆಕ್ಷನ್‌ಗಿಂದ ಜೋರಾದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳು ಆಗುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅದರ ಅರ್ಥ ಕರ್ನಾಟಕದ ಜನ ಅಷ್ಟು ಕೆಟ್ಟವರಿದ್ದಾರಾ? ಪ್ರಚೋದನಕಾರಿ ಮಾತುಗಳನ್ನು ಅಮಿತ್ ಶಾ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದು ಮೋದಿ ಹೇಳುತ್ತಾರೆ. ಆದರೆ 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಾರೆ. ಲಂಚವನ್ನು ಪಡೆದುಕೊಂಡು ಕೆಲಸ ಮಾಡುವ ಮಾತು ಜನರ ಬಾಯಲ್ಲಿ ಬರುತ್ತಿದೆ. ಸತ್ಯ ಹರಿಶ್ಚಂದ್ರರ ರೀತಿಯಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಸರ್ಕಾರದಲ್ಲಿಯೇ 2.58 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾಕೆ ನೇಮಕಾತಿ ಮಾಡುತ್ತಿಲ್ಲ? ಭ್ರಷ್ಟಾಚಾರ, ನಿರುದ್ಯೋಗ, ಹಣದುಬ್ಬರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ
ಈ ಸರ್ಕಾರವನ್ನು ಕಿತ್ತೊಗೆಯಲು ಜನ ನಿರ್ಧರಿಸಿದ್ದಾರೆ. ಅಧಿಕಾರ ಮಾಡುವ ಅರ್ಹತೆ ಬಿಜೆಪಿಗೆ ಇಲ್ಲ. ನನ್ನ ಮುಖ ನೋಡಿ ಮತ ಹಾಕಿ ಅಂತ ಮೋದಿ ಹೇಳುತ್ತಾರೆ. ಎಷ್ಟು ಬಾರಿ ಇವರ ಮುಖ ನೋಡಬೇಕು? ಮೋದಿ ಕರ್ನಾಟಕದ ಸಿಎಂ ಆಗುತ್ತಾರಾ? ಅಮಿತ್ ಶಾ ರಾಜ್ಯದ ಗೃಹ ಸಚಿವರಾಗುತ್ತಾರಾ? ಮೋದಿ, ಶಾ ನೋಡಿ ವೋಟ್ ಕೊಡಿ ಎಂದು ಸಿಎಂ ಸಹ ಹೇಳುತ್ತಾರೆ. ಹಾಗಿದ್ದರೆ ಇವರು ಏನು ಕೆಲಸ ಮಾಡಿಲ್ಲ ಎಂದರ್ಥ. ನೀವು ಮಾಡಿದ ಕೆಲಸ ಹೇಳಿ ಮತ ಕೇಳಿ ಕುಟುಕಿದರು.
ಬಿಜೆಪಿಯವರು ಪ್ರತಿಯೊಬ್ಬರನ್ನೂ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಲ್ಲಿ ಬರೀ ಗದ್ದಲಗಳಾಗುತ್ತಿದ್ದವೇ? ಇವರು ಪ್ರಚೋದನೆ ನೀಡುತ್ತಿದ್ದಾರೆ, ಶಾ ವಿರುದ್ಧ ಕೇಸ್ ಹಾಕುವ ಬಗ್ಗೆ ಚರ್ಚೆಯಾಗುತ್ತಿದೆ. ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದರು. ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಅವರ ಲೋಕಸಭೆ ಸದಸ್ಯತ್ವ ಅನರ್ಹತೆ ಮಾಡಿದರು. ಕಾನೂನನ್ನು ಮೋದಿ ಮತ್ತು ಶಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಆಗಿ ಬಳಸೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನ ರಕ್ಷಣೆಗಾಗಿ ನಾವು ಹೋರಾಡುತ್ತಿದ್ದೇವೆ. ಈ ಚುನಾವಣೆಯಲ್ಲಿ ಬದಲಾವಣೆಯಾದರೆ ದೇಶಾದ್ಯಂತ ಜನರಿಗೆ ವಿಶ್ವಾಸ ಬರುತ್ತದೆ. ಖಜಾನೆ ಬಿಜೆಪಿ ಅವರ ಬಳಿಯೆ ಇದೆ. ಪೆಗಾಸಸ್ ಇಟ್ಟುಕೊಂಡು ನೀವು ಎಲ್ಲರ ಮೇಲೆ ಕಣ್ಗಾವಲು ಇಟ್ಟಿದ್ದಾರೆ ಎಂದು ಆರೋಪಿಸಿದರು.
ಖರ್ಗೆ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಸೋತೆ, ಹಾಗಂತ ಯಾರನ್ನೂ ಹೊಣೆ ಮಾಡಲ್ಲ. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಬೇಕಿತ್ತು. ವಿರೋಧ ಪಕ್ಷದ ನಾಯಕನಾಗಿದ್ದೆ,
ಕರ್ನಾಟಕದ ಪ್ರತಿನಿಧಿಯಾಗಿ ಕೆಲಸ ಮಾಡಿದೆ ಎಂದರು. ಇದೇ ವೇಳೆ ಖರ್ಗೆ ರೀತಿಯಲ್ಲಿ ಶೆಟ್ಟರ್ ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಹೀಗಾಗಿ ಟಾರ್ಗೆಟ್ ಮಾಡುವುದು ಸಹಜ. ನಾವು ಸಹ ಅವರಷ್ಟೇ ಸಾಮರ್ಥ್ಯ ಬಳಸಿ ಗೆದ್ದು ಬರಲು ಯತ್ನಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರಾಗ್ತಾರೆ ಸಿಎಂ; ಏನಂದ್ರು ಪ್ರಿಯಾಂಕಾ ಗಾಂಧಿ?
ಅಮಿತ್ ಶಾ, ಮೋದಿ ಬಂದ್ರೆ ಯಾಕೆ ಆತಂಕ ಎಂಬ ಪ್ರಶ್ನೆಗೆ ಉತ್ತರಿಸಿ, ನಡ್ಡಾ ಬಂದ್ರೆ ನಾನೇನೂ ಪ್ರಶ್ನಿಸಲ್ಲ. ಆದರೆ ಅಧಿಕಾರದಲ್ಲಿದ್ದವರು ಬರುತ್ತಿದ್ದಾರೆ. ಸರ್ಕಾರದ ಸೌಲಭ್ಯ ಬಳಸಿಕೊಂಡು ಪಕ್ಷಕ್ಕೆ ಮತ ಹಾಕಿ ಎನ್ನುವವರ ಬಗ್ಗೆ ಆಕ್ಷೇಪವಿದೆ. ಪ್ರಧಾನಮಂತ್ರಿ ಏನೇ ಮಾಡಿದರೂ ಕ್ಷಮಿಸುತ್ತಾರಾ? ಸರ್ಕಾರಿ ಹಣದಲ್ಲಿ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ. ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಕಿಡಿಕಾರಿದರು.