ಬೆಂಗಳೂರು: ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಟರ್‌ನೆಟ್‌ನಲ್ಲಿ ರಾಜಭವನ ನಂಬರ್ ಸರ್ಚ್ ಮಾಡಿ ಬೆದರಿಕೆ ಕರೆ ಮಾಡಿದ್ದ ಆರೋಪಿಯು, ಆಂಧ್ರದ ಚಿತ್ತೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕೋಲಾರ ಮೂಲದ ಬಾಸ್ಕರ್ ಬಂಧಿತ ಆರೋಪಿ. ವೃತ್ತಿಯಲ್ಲಿ ರೈತನಾಗಿರುವ ಭಾಸ್ಕರ್ ಸೋಮವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ. ನಂತರ ವಾಪಸ್ಸು ಕೋಲಾರಕ್ಕೆ ತೆರಳುವ ವೇಳೆ ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಮಾಡಿದ್ದ. ಘಟನೆ ಸಂಬಂಧ ವಿಧಾನ ಸೌಧ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗೂಗಲ್ ಮುಖಾಂತರ ರಾಜಭವನ ನಂಬರ್ ತೆಗೆದುಕೊಂಡಿದ್ದ ಭಾಸ್ಕರ್, ನಂತರ ಕರೆ ಮಾಡಿ ಮೆಜೆಸ್ಟಿಕ್ ತಲುಪಿದ್ದ. ಅಲ್ಲಿಂದ ಆಂಧ್ರದ ಕಾಣಿಪಾಕಂ ದೇವಾಲಯ ತಲುಪಿದ್ದ. ಲೊಕೇಶನ್ ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆಂಧ್ರದ ಚಿತ್ತೂರಿನಲ್ಲಿ ಆತನನ್ನು ಬಂಧಿಸಿದ್ದಾರೆ.
ಬೆದರಿಕೆ ಕರೆ ಮಾಡಿದ ನಂತರ ಅಲರ್ಟ್ ಆಗಿದ್ದ ವಿಧಾನ ಸೌಧ ಪೊಲೀಸರು ಒಂದು ತಂಡ ರಚಿಸಿ ಆರೋಪಿಯ ಬೆನ್ನು ಬಿದ್ದಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಕೆಡಿಸಿಕೊಂಡಿದ್ದ ಕೇಂದ್ರ ಸೆಕ್ಯೂರಿಟಿ ಏಜನ್ಸಿಗಳು, ವಿಧಾನ ಸೌಧ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದವು. ಕೊನೆಗೂ ಆರೋಪಿಯನ್ನು ಬಂಧಿಸಿ ಕೇಂದ್ರದ ತನಿಖಾ ಸಂಸ್ಥೆಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Assault Case: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್; 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ತನಿಖೆಯಲ್ಲಿ ಮನಸ್ಸಿಗೆ ತೋಚಿದಕ್ಕೆ ಕರೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಬಿ.ಕಾಂ ವ್ಯಾಸಂಗ ಮಾಡಿ ರೈತನಾಗಿದ್ದ ಭಾಸ್ಕರ್, ಸೋಮವಾರ ಹೊಸ ಸಿಮ್ ಖರೀದಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಬೆದರಿಕೆ ಕರೆ ಮಾಡಲೆಂದೇ ಹೊಸ ಸಿಮ್ ಖರೀದಿ ಮಾಡಿದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ಬೆಂಗಳೂರು: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಕಳವಳಕಾರಿ. ಹೀಗಾಗಿ ಪ್ರಕರಣದ ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಇನ್ನು ಮಾಧ್ಯಮಗಳಲ್ಲಿ ಸಂತ್ರಸ್ತೆಯ ಫೋಟೊ, ಸಂದರ್ಶನ ಬಿತ್ತರಿಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ. ಕೆಲ ಮಾಧ್ಯಮಗಳಲ್ಲಿ ಸಂತ್ರಸ್ತೆಯ ಫೋಟೊ, ವಿಡಿಯೋ ಬಿತ್ತರಿಸಿದ ಹಿನ್ನೆಲೆಯಲ್ಲಿ ಸಂತ್ತಸ್ತೆಯ ಘನತೆಗೆ ಧಕ್ಕೆಯಾಗುತ್ತದೆ ಎಂದು ಫೋಟೊ, ವಿಡಿಯೋ ಬಿತ್ತರಿಸಬಾರದು ಎಂದು ಸೂಚಿಸಿದೆ. ಆದರೆ, ಘಟನೆಯ ಸುದ್ದಿ ಪ್ರಸಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ ಆದೇಶ ನೀಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ