Site icon Vistara News

Traffic Fine: ಬರೋಬ್ಬರಿ 100 ಬಾರಿ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ ಸವಾರನಿಗೆ ಬಿತ್ತು ಭಾರಿ ದಂಡ!

bike Rider

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡಲು ಸಂಚಾರ ಪೊಲೀಸ್‌ ವಿಭಾಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇನ್ನು ಒಂದೆರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟುವವರನ್ನು ಎಲ್ಲೆಡೆ ಕಾಣುತ್ತೇವೆ. ಆದರೆ, ಇಲ್ಲೊಬ್ಬ ಮಹಾಶಯ ಬರೋಬ್ಬರಿ 100 ಬಾರಿ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿರುವುದು ಕಂಡುಬಂದಿದ್ದು, ಆತನ ಮೇಲೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಹೌದು, ಬೆಂಗಳೂರು ನಗರ ವಿವಿಧೆಡೆ ಬರೋಬ್ಬರಿ 99 ಸಂಚಾರ ನಿಯಮಗಳನ್ನು ಉಲ್ಲಂಘಿಸಿ, 100ನೇ ಸಂಚಾರ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಅದಕ್ಕಾಗಿ ಬರೋಬ್ಬರಿ ರೂ. 56 ಸಾವಿರ ದಂಡ ವಿಧಿಸಲಾಗಿದೆ. ಜತೆಗೆ ಅಪಾಯಕಾರಿ ವಾಹನ ಚಾಲನೆಗಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದ್ದು, ಚಾಲನಾ ಪರವಾನಗಿ ರದ್ದುಗೊಳಿಸಿ, ಸ್ಕೂಟರ್‌ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ | Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಸವಾರ ಸಿಕ್ಕಿಬಿದ್ದದ್ದು ಹೇಗೆ?

ಕಳೆದ ಮೂರು ವರ್ಷಗಳಿಂದ KA 05 EM 1946 ನೋಂದಣಿ ಸಂಖ್ಯೆಯ ಸ್ಕೂಟರ್ ಮಾಲೀಕ, ಸುಮಾರು 99 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವುದು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ರಸ್ತೆಯಲ್ಲಿ ಪೊಲೀಸರನ್ನು ಕಂಡರೆ ಸಾಕು ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುತ್ತಿದ್ದ. ಹೀಗಿದ್ದರೂ ರಾಜಾರೋಷವಾಗಿ ಓಡಾಡಿಕೊಂಡಿದ್ದ ಸ್ಕೂಟರ್ ಮಾಲೀಕನಿಗೆ ಇತ್ತೀಚೆಗೆ ಬಿಟಿಎಂ ಲೇಔಟ್‌ನಲ್ಲಿರುವ ವೆಗಾ ಸಿಟಿ ಜಂಕ್ಷನ್ ಬಳಿ ಒನ್ ವೇ ಯಲ್ಲಿ ನುಗ್ಗಿದ್ದಾನೆ. ಈ ದೃಶ್ಯವನ್ನು ಕಾರ್ ಡ್ಯಾಶ್ ಬೋರ್ಡ್ ಕ್ಯಾಮೆರಾ ಮೂಲಕ ಸೆರೆಹಿಡಿದ ಟ್ವಿಟರ್ ಬಳಕೆದಾರರೊಬ್ಬರು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಟ್ವಿಟರ್ ಬಳಕೆದಾರ ನೀಡಿದ ಮಾಹಿತಿ ಆಧರಿಸಿ ಟ್ರಾಫಿಕ್ ಪೊಲೀಸರು ಕೇವಲ 2 ದಿನಗಳಲ್ಲಿ ಸ್ಕೂಟರ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಮತ್ತು ತಂಡ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸಂಚಾರಿ ನಿಯಮ ಉಲ್ಲಂಘಿಸಿದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು, ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಕೋರಿದ್ದಾರೆ.

ಮೊಬೈಲ್ ಕದ್ದು ಓಡುತ್ತಿದ್ದವನ ಬೆನ್ನತ್ತಿ ಹಿಡಿದ ಯುವತಿ; ಕಳ್ಳನಿಗೆ ಬಿತ್ತು ಧರ್ಮದೇಟು

ಹಾವೇರಿ: ಕರ್ನಾಟಕ ಬಂದ್ ಹಿನ್ನೆಲೆ ಊರಿಗೆ ತೆರುಳಲು ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿರುವ ಘಟನೆ ನಗರದಲ್ಲಿ (Haveri News) ನಡೆದಿದೆ. ಮೊಬೈಲ್ ಕದ್ದು ಓಡುತ್ತಿದ್ದವನನ್ನು ಯುವತಿ ಬೆನ್ನತ್ತಿ ಹಿಡಿದಿದ್ದು, ಈ ವೇಳೆ ಸಾರ್ವಜನಿಕರು ಧಾವಿಸಿ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ರಾಜು ಎಂಬಾತ ಮೊಬೈಲ್‌ ಕಳವು ಆರೋಪಿಯಾಗಿದ್ದಾನೆ. ಬಂದ್‌ ಹಿನ್ನೆಲೆ ಊರಿಗೆ ತೆರಳಲು ಯುವತಿ ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಕಳ್ಳನೊಬ್ಬ ಆಕೆಯ ಮೊಬೈಲ್ ಕದ್ದು ಓಡುತ್ತಿದ್ದ. ಹೀಗಾಗಿ ಕಳ್ಳನನ್ನು ಬೆನ್ನತ್ತಿ ಯುವತಿ ಹಿಡಿದುಕೊಂಡಿದ್ದಾಳೆ. ಅಲ್ಲಿದ್ದ ಸಾರಿಗೆ ನೌಕರರು ಹಾಗೂ ಪ್ರಯಾಣಿಕರು ಯುವತಿಯ ನೆರವಿಗೆ ಧಾವಿಸಿ, ಕಳ್ಳನನ್ನು ಹಿಡಿದು ಥಳಿಸಿದ್ದಾರೆ. ನಂತರ ಖದೀಮನ ಕತ್ತುಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ | Tumkur Blast : ಆಕಸ್ಮಿಕ ಸ್ಫೋಟ; ಮನೆ ಗೋಡೆ ಕುಸಿದು 6 ಮಂದಿ ಗಂಭೀರ

ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಹಿಡಿದ ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರ ಪೋಲಿಸರು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version