Site icon Vistara News

ಮುನಿಸಿಕೊಂಡು ತವರಿಗೆ ಹೋದ ಪತ್ನಿಯನ್ನು ಬರ್ತೀಯೋ ಇಲ್ವೋ ಎಂದು ಬೆದರಿಸಲು ಗುಂಡು ಹಾರಿಸಿದ ಗಂಡ!

ಶಿವಾನಂದ ಕಾಗಿಲೇ

ಚಿಕ್ಕೋಡಿ: ಹೆಂಡತಿ ಮುನಿಸಿಕೊಂಡು ತವರಿಗೆ ಹೋದರೆ ಸಮಾಧಾನ ಮಾಡಿ ಕರೆತರುವವರನ್ನು ನೋಡಿದ್ದೇವೆ, ಇನ್ನೊಮ್ಮೆ ಹೀಗೆ ಮಾಡಲ್ಲ ಅಂತ ಗೋಗರೆಯೋರನ್ನು ನೋಡಿದ್ದೇವೆ. ಕೆಲವರು ಸ್ವಲ್ಪ ಜಗಳ ಮಾಡಿಯೂ ಕರೆದು ತರಬಹುದು. ಆದರೆ, ಇಲ್ಲೊಬ್ಬ ಭೂಪ ಮುನಿಸಿಕೊಂಡು ತಾಯಿ ಮನೆಗೆ ಹೋದ ಹೆಂಡತಿಯನ್ನು ಮನೆಗೆ ಬರ್ತೀಯೋ ಇಲ್ವೋ ಎಂದು ಬೆದರಿಸಲು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ!

ಅಷ್ಟಕ್ಕೂ ಅವಳು ಮನೆ ಬಿಟ್ಟು ಹೋಗಿದ್ಯಾಕೆ ಗೊತ್ತಾ? ಈ ಮಹಾಶಯನ ಅನೈತಿಕ ಸಂಬಂಧಗಳಿಂದ ಬೇಸತ್ತು!

ಶಿವಾನಂದ ಕಾಗಲೇ(೪೦) ಎಂಬಾತನಿಗೆ ನಾಲ್ಕು ವರ್ಷಗಳ ಹಿಂದೆ ಪ್ರೀತಿ ಎಂಬವರ ಜತೆ ಮದುವೆಯಾಗಿದೆ. ಈ ಮಧ್ಯೆ ಶಿವಾನಂದನಿಗೆ ಪರಸ್ತ್ರೀ ಸಂಗ ಹುಟ್ಟಿಕೊಂಡಿತು. ಈ ವಿಚಾರದಲ್ಲಿ ಮನೆಯಲ್ಲಿ ಪ್ರತಿ ದಿನವೂ ಜಗಳ ಆಗುತ್ತಿತ್ತು. ಶಿವಾನಂದ ಒಮ್ಮೆ ಎಲ್ಲವನ್ನೂ ಬಿಡುತ್ತೇನೆ ಎಂದರೂ ಮತ್ತೆ ಮತ್ತೆ ಆ ಕಡೆಗೇ ಜಾರುತ್ತಿದ್ದ. ಇದರಿಂದ ಜಗಳ ಮತ್ತಷ್ಟು ಹೆಚ್ಚಾಗಿತ್ತು. ಈ ನಡುವೆ, ಸಿಟ್ಟು ಮಾಡಿಕೊಂಡ ಪ್ರೀತಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿರುವ ತನ್ನ ತಾಯಿ ಮನೆಗೆ ಬಂದು ವಾಸವಿದ್ದರು.

ಇದು ಶಿವಾನಂದ ಸ್ವಾಭಿಮಾನವನ್ನು ಕೆಣಕಿತ್ತು. ಹಲವು ಬಾರಿ ಆತ ಮನೆಗೆ ಮರಳುವಂತೆ ಕೇಳಿಕೊಂಡಿದ್ದ. ಆದರೆ, ಆಕೆ ಕೇಳಲೇ ಇಲ್ಲ. ʻನೀನು ಬೇರೆಯವರನ್ನೇ ಕಟ್ಟಿಕೊಂಡೇ ಖುಷಿಯಾಗಿರುʼ ಎಂದು ಆಕೆಯೂ ಹೆದರಿಸಿದ್ದಳು.‌
ಈ ಮಧ್ಯೆ, ಮನೆಗೆ ಕರೆಸಿಕೊಳ್ಳುವ ಎಲ್ಲ ತಂತ್ರಗಳು ವಿಫಲವಾದಾಗ ಅಂತಿಮವಾಗಿ ಆತ ಒಂದು ತೀರ್ಮಾನಕ್ಕೆ ಬಂದೇ ಬಿಟ್ಟ: ಅದುವೇ ನೀನಾ? ನಾನಾ?

ಆವತ್ತು ಅಥಣಿಯ ಮನೆಗೆ ಬಂದ ಆತ ಖಾಲಿ ಕೈಯಲ್ಲಿ ಬರಲಿಲ್ಲ. ಕೈಯಲ್ಲೊಂದು ಲೈಸನ್ಸ್‌ಡ್‌ ರಿವಾಲ್ವರ್‌ ಹಿಡಿದುಕೊಂಡೇ ಬಂದಿದ್ದ. ಅದರಲ್ಲಿ ನಾಲ್ಕು ಗುಂಡು ಇಟ್ಟುಕೊಂಡಿದ್ದ. ಇವತ್ತು ಬಾರದೆ ಇದ್ದರೆ ಗುಂಡು ಹಾರಿಸ್ತೇನೆ ಎಂದು ಬೆದರಿಸಿದ್ದ. ಆದರೆ, ಆತನ ಆ ಬೆದರಿಕೆಗೂ ಆಕೆ ಜಗ್ಗಲೇ ಇಲ್ಲ. ಸಿಟ್ಟುಗೊಂಡ ಆತ ಕೈ ಎತ್ತಿ ಗುಂಡು ಹಾರಿಸಿಯೇ ಬಿಟ್ಟ!

ಲೈಸನ್ಸ್‌ಡ್‌ ರಿವಾಲ್ವರ್

ಆದರೆ, ಅದೃಷ್ಟವಶಾತ್‌ ಗುಂಡು ಪ್ರೀತಿಗೆ ತಾಗದೆ ಆಕೆ ಬಚಾವಾದಳು. ಆ ಕೂಡಲೇ ಆತನನ್ನು ಅಲ್ಲಿದ್ದವರು ಯಾರೋ ಹಿಡಿದುಕೊಂಡರು.

ಹೆಂಡತಿಯನ್ನು ಮನೆಗೆ ಬರುವಂತೆ ಆತ ಕೊನೆಯ ಕ್ಷಣದಲ್ಲಿ ಎಷ್ಟೊಂದು ಗೋಗರೆದಿದ್ದನೆಂದರೆ, ಇದರಲ್ಲಿ ನಾಲ್ಕು ಗುಂಡಿದೆ. ನೀನು ಬಾರದೆ ಹೋದರೆ ಎರಡು ಗುಂಡು ನಿಂಗೆ ಹಾರಿಸ್ತೇನೆ. ಆಮೇಲೆ ಎರಡು ಗುಂಡು ನಾನು ಹಾರಿಸ್ಕೊಳ್ತೇನೆ. ಇಬ್ಬರೂ ಒಟ್ಟಿಗೇ ಬಾಳೋಣ, ಇಲ್ಲವಾದರೆ ಇಬ್ಬರೂ ಒಟ್ಟಿಗೇ ಸಾಯೋಣ ಎಂದೆಲ್ಲ ಹೇಳಿಕೊಂಡಿದ್ದ. ಆದರೆ ಆತನ ಮಾತಿಗೆ ಪ್ರೀತಿ ಜಗ್ಗಲಿಲ್ಲ. ಕೊನೆಗೆ ಗುಂಡು ಹಾರಿಸಿಯೇ ಬಿಟ್ಟ!

ಅಂತಿಮವಾಗಿ ಈಗ ಶಿವಾನಂದನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಈಗ ಉಳಿದಿರುವ ಪ್ರಶ್ನೆ ಎಂದರೆ ಇಷ್ಟಾದ ಮೇಲೆ ಪ್ರೀತಿ ಅವನ ಜತೆ ಹೋಗ್ತಾಳಾ?

ಇದನ್ನೂ ಓದಿ | ಹಿರಿಯ ಅಧಿಕಾರಿಯಿಂದ ಅವಮಾನ; ಠಾಣೆಯಲ್ಲೇ ಗುಂಡು ಹೊಡೆದುಕೊಂಡು ಮೃತಪಟ್ಟ ಎಎಸ್​ಐ

Exit mobile version