Site icon Vistara News

Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು

Man killed in tiger attack in Mysuru after boy dies in leopard attack

ಮೈಸೂರು: ಶನಿವಾರ (ಜ. ೨೧) ರಾತ್ರಿಯಷ್ಟೇ ಚಿರತೆ ದಾಳಿಗೆ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕನೊಬ್ಬ ಬಲಿಯಾಗಿದ್ದ. ಇದರ ಬೆನ್ನಲ್ಲೇ ಹುಲಿ ದಾಳಿಗೆ (Tiger Attack) ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ (Nagarahole National Park) ಬಳ್ಳೆ ಹಾಡಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾಡು ಪ್ರಾಣಿ ದಾಳಿಗೆ ಒಂದೇ ದಿನದ ಅಂತರದಲ್ಲಿ ಮತ್ತೊಂದು ಜೀವ ಬಲಿಯಾದಂತೆ ಆಗಿದೆ. ಮಂಜು ಅಲಿಯಾಸ್ ಬೆಟ್ಟದ ಹುಲಿ (18) ಮೃತ ದುರ್ದೈವಿ. ಇವರು ಸೌಧೆ ತರಲು ಹೋಗಿದ್ದಾಗ ಹುಲಿಯೊಂದು ದಾಳಿ ಮಾಡಿದ್ದು, ಮೃತಪಟ್ಟಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ಅವಘಡ ಸಂಭವಿಸಿದ್ದು, ಸೌಧೆ ಸಂಗ್ರಹಿಸಲು ಒಂದು ಗುಂಪು ಕಾಡಿನತ್ತ ಹೊರಟಿತ್ತು. ಈ ವೇಳೆ ಹುಲಿಯೊಂದು ಏಕಾಏಕಿ ದಾಳಿ ಮಾಡಿದೆ. ಇದರಿಂದ ಎಲ್ಲರೂ ಗಾಬರಿಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಹುಲಿಯು ಮಂಜುವಿನ ಮೇಲೆ ಎಗರಿದೆ. ನೇರವಾಗಿ ತನ್ನ ಪಂಜಿನ ಮೂಲಕ ಮಂಜುವಿನ ತಲೆಗೆ ಹೊಡೆದಿದ್ದು, ಅವರ ತಲೆ ಸೀಳಿಬಂದಿದೆ. ಇತರರು ಅಲ್ಲಿಂದ ಓಡಿ ಪಾರಾಗಿದ್ದಾರೆ.

ಇದನ್ನೂ ಓದಿ: Kantara Movie: ಹಿಂದಿಯಲ್ಲಿ ನೂರು ದಿನಗಳನ್ನು ಪೂರೈಸಿದ ʻಕಾಂತಾರʼ

ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮಂಜು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಚಿರತೆ ದಾಳಿಗೆ ಬಾಲಕ ಸಾವು

ಚಿರತೆ ದಾಳಿಗೆ ಬಲಿಯಾಗಿರುವ ೧೧ ವರ್ಷದ ಜಯಂತ್

ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದ್ದು, ೧೧ ವರ್ಷದ ಜಯಂತ್‌ನನ್ನು ಎಳೆದುಕೊಂಡು ಹೋಗಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್‌ ಮೃತದೇಹ ಪತ್ತೆಯಾಗಿದೆ. ಬಾಲಕನ ರುಂಡವನ್ನು ಚಿರತೆ ಹೊತ್ತೊಯ್ದಿತ್ತು. ಇದು ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: leopard attack: ಚಿರತೆ ದಾಳಿಯಿಂದ ಇನ್ನು ಒಂದೇ ಸಾವಾದರೂ ನಿನ್ನನ್ನು ಕೊಲ್ಲುವೆ; ಅರಣ್ಯ ಸಂರಕ್ಷಣಾಧಿಕಾರಿಗೆ ಮೃತ ಬಾಲಕನ ಅಜ್ಜನಿಂದ ವಾರ್ನಿಂಗ್‌

ತಿ.ನರಸೀಪುರ ತಾಲೂಕಲ್ಲಿ ನವೆಂಬರ್‌ನಿಂದ ನಡೆದಿರುವ ದಾಳಿ

ತಿ.ನರಸೀಪುರ ತಾಲೂಕಿನ ಕಳೆದ ನವೆಂಬರ್‌ನಿಂದ ನಿರಂತರವಾಗಿ ಚಿರತೆ ದಾಳಿ ನಡೆದಿದ್ದು, ನಾಲ್ವರು ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ. ಮೃತಪಟ್ಟವರ ವಿವರ ಇಂತಿದೆ. ೨೦೨೨ ನವೆಂಬರ್‌ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್‌ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಒಂಟಿ ಓಡಾಟ ಬೇಡ: ಅರಣ್ಯ ಇಲಾಖೆ ಪ್ರಕಟಣೆ

ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ನಾಲ್ಕನೇ ಬಲಿಯಾಗಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಒಂಟಿಯಾಗಿ ಓಡಾಡಬಾರದು. ಸಂಜೆ 6 ಗಂಟೆಯೊಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆಯ ಚಲನವಲನ ಕಂಡರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಗ್ರಾಮಸ್ಥರಿಂದ ಪ್ರತಿಭಟನೆ

ಹೊರಳಹಳ್ಳಿಯ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ದಾಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ದಾಳಿ ಹೆಚ್ಚಾಗುತ್ತಿದ್ದು, ಮನುಷ್ಯರು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಲೇ ಇವೆ. ನಮಗೆ ಮನೆಯಿಂದ ಹೊರಗೆ ಕಾಲಿಡಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: SSLC Workshop | ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ?: ವಿಸ್ತಾರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ ಎಂದೂ ಜನರು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚಿರತೆ ಸೆರೆ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕಿದೆ. ಇಲ್ಲದಿದ್ದರೆ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಎಚ್ಚರಿಸಿದ್ದಾರೆ.

Exit mobile version