ಬಾದಾಮಿ: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಭಾರತೀಯ ಸೇನೆಯಲ್ಲಿ ಯೋಧನಾಗಿರುವ ತನ್ನ ಸೋದರಿಯ ಗಂಡನನ್ನೇ ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಯೋಧ ಕರಿಸಿದ್ದಪ್ಪ ಕಳಸದ (೨೫) ಕೊಲೆಯಾಗಿದ್ದಾರೆ. ಅವರ ಬಾಮೈದ ಧರಿ ಗೌಡ ದೂಳಪ್ಪ ಕೊಲೆ ಮಾಡಿದವನು.
ನೀರಲಕೇರಿ ಗ್ರಾಮದ ಕರಿಸಿದ್ದಪ್ಪ ಕಳಸದ ಅವರು ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ದಿನದ ಹಿಂದೆ ರಜೆಯಲ್ಲಿ ಬಂದಿದ್ದರು. ಕರಿಸಿದ್ದಪ್ಪ ಅವರಿ ಎರಡು ವರ್ಷದ ಹಿಂದೆ ವಿದ್ಯಾ ಎಂಬವರ ಜತೆ ಮದುವೆಯಾಗಿತ್ತು. ಅವರದು ಪ್ರೇಮ ವಿವಾಹ.
ಶುಕ್ರವಾರ ರಾತ್ರಿ ಊಟ ನೀಡುವ ವೇಳೆ ಕರಿಸಿದ್ದಪ್ಪ ಮತ್ತು ವಿದ್ಯಾ ಅವರ ಮಧ್ಯೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ನಡುವೆ ಸಿಟ್ಟಿಗೆದ್ದ ವಿದ್ಯಾ ಅವರು ತಮ್ಮ ಸೋದರ ಧರಿ ಗೌಡ ದೂಳಪ್ಪನಿಗೆ ಕರೆ ಮಾಡಿದ್ದಾರೆ. ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ಕೂಡಲೇ ಅವರಿದ್ದ ಮನೆಗೆ ಬಂದ ಧರಿ ಗೌಡ ದೂಳಪ್ಪ ನನ್ನ ಸಹೋದರಿಗೆ ಕಿರುಕುಳ ಕೊಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ. ಮಾತಿಗೆ ಮಾತು ಬೆಳೆದು ದೂಳಪ್ಪ ತನ್ನ ಸೋದರಿಯ ಗಂಡನಿಗೆ ಚೂರಿಯಿಂದ ಇರಿದಿದ್ದಾನೆ. ಕರಿಸಿದ್ದಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಫಲ ನೀಡಲಿಲ್ಲ. ದೇಹದ ಹಲವು ಕಡೆಗಳಿಗೆ ಚಾಕುವಿನಿಂದ ಇರಿದು ಅಮಾನುಷವಾಗಿ ವರ್ತಿಸಿದ್ದರಿಂದ ರಕ್ತ ಸೋರಿಕೆಯಾಗಿ ಪ್ರಾಣವೇ ಹೋಗಿದೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | ಗಂಡ-ಹೆಂಡತಿ ಜಗಳ ಬಿಡಿಸಲು ಬಂದವನೇ ಕೊಲೆಯಾಗಿ ಹೋದ