Site icon Vistara News

Murder by wife | ಫಾರ್ಮ್‌ ಕಾರ್ಮಿಕನ ಕೊಂದು ರಸ್ತೆಯಲ್ಲಿ ಎಸೆದರು: ಪತ್ನಿ ಮತ್ತು ಗೆಳೆಯನೇ ಹಂತಕರು?

ದಾಸೇ ಗೌಡ ಕೊಲೆ

ನೆಲಮಂಗಲ/ ರಾಮನಗರ: ಇತ್ತೀಚೆಗೆ ಸಂಭವಿಸುತ್ತಿರುವ ಹೆಚ್ಚಿನ ಪುರುಷರ ಕೊಲೆಗಳ ಹಿಂದೆ ಪತ್ನಿಯ ಕೈವಾಡವೇ ಹೆಚ್ಚಾಗಿರುತ್ತದೆ (Murder by wife) ಎಂಬ ಸಂಶಯಕ್ಕೆ ಪೂರಕವಾದ ಘಟನೆಯೊಂದು ಸೋಲದೇವನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ದಾಸೇಗೌಡ ಎಂಬವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಎರಡು ದಿನಗಳ ಬಳಿಕ ಅವರ ಪತ್ನಿ ನಾಪತ್ತೆ ಕೇಸು ದಾಖಲಿಸಿದರು. ಅದಾದ ಬಳಿಕ ಅವರ ಶವ ಸಿಕ್ಕಿದೆ. ಈಗ ಅವರ ಹೆಂಡತಿ ಮತ್ತು ದಾಸೇಗೌಡರ ಒಬ್ಬ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ!

ದಾಸೇ ಗೌಡ ಅವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ರಾಮನರಸಿಂಹರಾಜಪುರ‌ ಗ್ರಾಮದವರು. ವಯಸ್ಸು (48). ೧೬ ವರ್ಷದ ಹಿಂದೆ ಅವರು ಜಯಲಕ್ಷ್ಮಿ ಎಂಬವರನ್ನು ಮದುವೆಯಾಗಿದ್ದರು. ಈಗ ಅವರಿಗೆ ಒಬ್ಬ ಮಗಳಿದ್ದಾಳೆ. ದಾಸೇಗೌಡ ಅವರು ಕಳೆದ ೧೬ ವರ್ಷಗಳಿಂದ ಬೆಂಗಳೂರಿನ ಚಿಕ್ಕಬಾಣವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ಫಾರ್ಮ್‌ ಹೌಸ್‌ನ ಮೇಲ್ವಿಚಾರಣೆ ಅವರದೆ. ಪತ್ನಿ ಜಯಲಕ್ಷ್ಮಿ ಗಾರ್ಮೆಂಟ್‌ ಕೆಲಸಕ್ಕೆ ಹೋಗುತ್ತಿದ್ದರು.

ಕಳೆದ ಶನಿವಾರ ರಾತ್ರಿ ದಾಸೇಗೌಡರು ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮೈ ಕೈ ತುಂಬಾ ನೋಯ್ತಾ ಇದೆ. ಬಿಸಿ ನೀರು ಸ್ನಾನ ಮಾಡಿಕೊಂಡು ಬರುತ್ತೇನೆ ಎಂದು ಗೆಳೆಯರಲ್ಲಿ ಹೇಳಿದ್ದರಂತೆ. ಆದರೆ, ಆ ರಾತ್ರಿ ಅವರು ಅಲ್ಲಿಗೆ ಹೋಗಿಲ್ಲ. ಮರುದಿನ ಮನೆಯಲ್ಲಿ ಕೇಳಿದರೆ ಅವರು ಊರಿಗೆ ಹೋಗಿದ್ದಾರೆ ಎಂಬ ಮಾಹಿತಿ ಬಂದಿದೆ. ಅಲ್ಲಿಂದ ದಾಸೇಗೌಡರು ಕಣ್ಮರೆಯಾಗಿದ್ದರು.

ದಾಸೇಗೌಡ ಮತ್ತು ಜಯಲಕ್ಷ್ಮಿ ದಂಪತಿ

ಈ ನಡುವೆ, ನವೆಂಬರ್‌ ೨೭ರಂದು ದಾಸೇಗೌಡರ ಪತ್ನಿ ಜಯಲಕ್ಷ್ಮಿ ತಮ್ಮ ಗಂಡ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲಿಂದ ಪೊಲೀಸರು ದಾಸೇಗೌಡರಿಗಾಗಿ ಹುಡುಕಾಟ ಶುರು ಮಾಡಿದ್ದರು. ಈ ನಡುವೆ, ನಾಪತ್ತೆಯಾಗಿರುವ ದಾಸೇಗೌಡರ ಶವ ನವೆಂಬರ್‌ ೩೦ರಂದು ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಪತ್ತೆಯಾಗಿದೆ.

ತಲೆಗೆ ಕಲ್ಲು ಹೊತ್ತುಹಾಕಿ ಕೊಲೆ ಮಾಡಿದ ಸ್ಥಿತಿಯಲ್ಲಿದ್ದ ಮೃತದೇಹ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಯ ಚರಂಡಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ನೋಡಿದರೆ ಇದು ನಾಲ್ಕು ದಿನಗಳ ಹಿಂದೆ ಕೊಂದು ಎಸೆದ ಸ್ಥಿತಿಯಲ್ಲಿ ಕಂಡುಬಂದಿದೆ. ಅಂದರೆ ನವೆಂಬರ್‌ ೨೬ರ ಶನಿವಾರ ರಾತ್ರಿ ಈ ಕೃತ್ಯ ನಡೆದಂತೆ ಕಾಣುತ್ತಿದೆ.

ಈ ಶವ ಪತ್ತೆಯಾಗುವವರೆಗೆ ಇದು ಒಂದು ನಾಪತ್ತೆ ಪ್ರಕರಣ, ಎಲ್ಲೋ ಹೋದವರು ಮರಳಿ ಬಂದಾರು ಎನ್ನುವ ನಿರೀಕ್ಷೆಯಲ್ಲಿದ್ದ ಸೋಲದೇವನ ಹಳ್ಳಿ ಪೊಲೀಸರು ಇದು ಕೊಲೆ ಎಂದು ತಿಳಿಯುತ್ತಿದ್ದಂತೆಯೇ ಮೊದಲು ಕಣ್ಣಿಟ್ಟಿದ್ದು ದಾಸೇಗೌಡನ ಹೆಂಡತಿ ಜಯಲಕ್ಷ್ಮಿ ಮೇಲೆ. ಆಕೆಯನ್ನು ವಿಚಾರಿಸಿದಾಗ ಬೆಳಕಿಗೆ ಬಂದ ಮತ್ತೊಂದು ಹೆಸರು ರಾಜೇಶ್‌. ಈ ರಾಜೇಶ್‌ ಬೇರೆ ಯಾರೂ ಅಲ್ಲ ದಾಸೇಗೌಡನ ಸ್ನೇಹಿತ.

ಈ ಫಾರ್ಮ್‌ನ ಮೇಲ್ವಿಚಾರಣೆ ದಾಸೇಗೌಡರದ್ದಾಗಿತ್ತು.

ಹಾಗಿದ್ದರೆ ಜಯಲಕ್ಷ್ಮಿ ಮತ್ತು ರಾಜೇಶ್‌ ಸೇರಿ ಈ ಕೊಲೆಯನ್ನು ಮಾಡಿದರೇ? ಜಯಲಕ್ಷ್ಮಿಗೂ ರಾಜೇಶ್‌ ಗೂ ಇರುವ ಸಂಬಂಧವೇನು? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆವತ್ತು ಕೊಲೆ ಮಾಡಿ ಹೇಗೆ ಮೈಸೂರು ಹೆದ್ದಾರಿವರೆಗೆ ಸಾಗಿಸಿದರು. ಅವರಿಗೆ ಬೇರೆಯವರ ನೆರವು ಇತ್ತಾ ಎನ್ನುವುದು ತನಿಖೆಯಲ್ಲಿ ಹೊರಬರಬೇಕಾಗಿದೆ.

ಅಷ್ಟಕ್ಕೂ ಊರಿನವರ ಪ್ರಕಾರ ದಾಸೇಗೌಡ ಭಾರಿ ಒಳ್ಳೆಯ ಮನುಷ್ಯ. ಹೊರಗಿನಿಂದ ಬಂದು ನೆಲೆ ನಿಂತರೂ ಊರಿನವನೇ ಆಗಿ ಹೋಗಿದ್ದ. ಇಡೀ ಫಾರ್ಮ್‌ ಹೌಸನ್ನು ಒಬ್ಬನೇ ನಿಭಾಯಿಸುತ್ತಿದ್ದ. ಇಡೀ ಫಾರ್ಮ್‌ ಹೌಸ್‌ನಲ್ಲಿ ಏನೇ ನಡೆದರೂ ಅವನಿಗೆ ಗೊತ್ತಾಗುವಷ್ಟು ಚಾಣಾಕ್ಷಮತಿ ಅವನಾಗಿದ್ದ. ಆದರೆ, ತನ್ನ ಮನೆಯಲ್ಲೇ ತನ್ನ ಕೊಲೆಗೊಂದು ಷಡ್ಯಂತ್ರ ನಡೆಯುತ್ತಿದೆ ಎನ್ನುವುದು ಮಾತ್ರ ಅವನಿಗೆ ಗೊತ್ತಿರಲಿಲ್ಲವೇ? ಅದರೂ ಆಪ್ತ ಗೆಳೆಯ ಮತ್ತು ಹೆಂಡತಿಯೇ ಈ ಕಥಾನಕದ ಪಾತ್ರಧಾರಿಗಳಾಗುತ್ತಾರೆ ಎನ್ನುವುದನ್ನು ಆತ ಕಲ್ಪಿಸಿಕೊಳ್ಳಲಿಲ್ಲವೇ? ಇಷ್ಟರ ನಡುವೆ ದಾಸೇಗೌಡ ಕೌಟುಂಬಿಕವಾಗಿ ಹೇಗಿದ್ದ ಎನ್ನುವ ವಿವರಗಳೂ ತನಿಖೆಯ ವೇಳೆ ಹೊರಬರಬೇಕಾಗಿದೆ.

ಇದನ್ನೂ ಓದಿ | Suspicious husband | ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ನೇಣು ಹಾಕಿಕೊಂಡ ದುಷ್ಟ ಗಂಡ

Exit mobile version