ಚಿಕ್ಕೋಡಿ: ಆ ವೃದ್ಧ ಮಹಿಳೆ ಅವನಿಗೆ ಕಷ್ಟ ಕಾಲದಲ್ಲಿ ಸಾಲ ಕೊಟ್ಟಿದ್ದರು. ಆತ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದನ್ನು ಬಿಟ್ಟು ಅಜ್ಜಿಯನ್ನು ಯಾಮಾರಿಸುವುದು ಹೇಗೆ ಎಂದು ಯೋಚನೆ ಮಾಡುತ್ತಿದ್ದ. ಅಷ್ಟೇ ಮಾಡಿದ್ದರೆ ಪಾಪ ಆ ಅಮಾಯಕ ಅಜ್ಜಿಯ ದುಡ್ಡು ಕಳೆದುಕೊಳ್ಳುತ್ತಿದ್ದರು. ಆದರೆ, ಪ್ರಾಣವಾದರೂ ಉಳಿಯುತ್ತಿತ್ತೋ ಏನೋ. ಆದರೆ, ಈ ಕಿರಾತಕ ಹಣ ಕೊಡುವುದನ್ನು ತಪ್ಪಿಸಿಕೊಳ್ಳಲು ಅಜ್ಜಿಯ ಪ್ರಾಣವನ್ನೇ ತೆಗೆದ.
ಇಂಥಹುದೊಂದು ದುಷ್ಕೃತ್ಯ ನಡೆದಿರುವುದು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ. ಅಕ್ಟೋಬರ್ ೬ರಂದು ನಡೆದಿದ್ದ ಈ ಕೊಲೆಯ ಹಿಂದಿನ ರಹಸ್ಯ ಈಗ ಬಯಲಾಗಿದೆ. ಮಲ್ಲವ್ವ ಜೀವಪ್ಪ ಕಮತೆ(೭೫) ಕೊಲೆಯಾದ ವೃದ್ಧೆ. ಕೊಲೆ ಮಾಡಿದವನು ಶಂಕರ್ ರಾಮಪ್ಪ ಪಾಟೀಲ್. ಅವನಿಗೆ ಸಹಾಯ ಮಾಡಿದ್ದು ಗೆಳೆಯ ಮಹೇಶ ಸದಾಶಿವ ಕಬಾಡಗೆ.
ಏನಿದು ಪ್ರಕರಣ?
ಶಂಕರ ಪಾಟೀಲ್ ಕಷ್ಟ ಕಾಲದಲ್ಲಿ ವೃದ್ಧೆ ಮಲ್ಲವ್ವ ಅವರ ಕೈಕಾಲು ಹಿಡಿದು ೫೦,೦೦೦ ರೂ. ಸಾಲ ಪಡದಿದ್ದ. ಆದರೆ, ಅದನ್ನು ಹಿಂದಿರುಗಿಸಲೇ ಇಲ್ಲ. ವೃದ್ಧೆ ಆಗಾಗ ಕೇಳಲು ಶುರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹಣ ಹೊಂದಿಸುವ ಬದಲು ಅಜ್ಜಿಯನ್ನೇ ಮುಗಿಸಲು ಸಂಚು ಹೂಡಿದ.
ತನ್ನ ಗೆಳೆಯನಾಗಿರುವ ಮಹೇಶ ಸದಾಶಿವ ಕಬಾಡಗೆಯನ್ನು ಸೇರಿಸಿಕೊಂಡು ಅಜ್ಜಿಯ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ. ಇಷ್ಟಕ್ಕೇ ತೃಪ್ತರಾಗದ ಈ ದುಷ್ಟರು ಮಲ್ಲವ್ವ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಕೂಡಾ ದೋಚಿದ್ದರು. ಸುಮಾರು ೧ ಲಕ್ಷ ಮೌಲ್ಯದ ಬಂಗಾರದ ಸರವನ್ನು ಅವರು ಕಿತ್ತುಕೊಂಡಿದ್ದರು.
ಆವತ್ತು ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಪೊಲೀಸರನ್ನು ಬಹುವಾಗಿ ಕಾಡಿತ್ತು. ಅಂತಿಮವಾಗಿ ಈ ಇಬ್ಬರ ಬಂಧನದೊಂದಿಗೆ ನಿಜ ಸಂಗತಿ ಹೊರಬಿದ್ದಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಅಜ್ಜಿಯನ್ನೇ ಮುಗಿಸಿದ ಶಂಕರ್ ಪಾಟೀಲ್ ಮತ್ತು ಮಹೇಶ ಕಬಾಡಗೆ ವಿರುದ್ಧ ಜನ ತೀವ್ರ ಆಕ್ರೋಶಿತರಾಗಿದ್ದಾರೆ.
ಇದನ್ನೂ ಓದಿ | Murder | ಜಾಗದ ವಿವಾದ: ಬಬಲೇಶ್ವರ ಬಳಿ ಮೂವರು ಸೇರಿ ವ್ಯಕ್ತಿಯ ಬರ್ಬರ ಹತ್ಯೆ