ಬೆಂಗಳೂರು: ಚಾಲಕನನ್ನು ವರ್ಗಾವಣೆ ಮಾಡಿದ್ದಕ್ಕೆ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಕರೆ ಮಾಡಿದ ಗೋವಿಂದರಾಜು ಎಂಬ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಹಾಲಿ ಸರ್ವೇ ಸೆಟ್ಲ್‌ಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತಾತ್ಮಕ ದೃಷ್ಟಿಯಿಂದ ಇತ್ತಿಚೆಗೆ ಮುನೀಶ್ ತಮ್ಮ ಚಾಲಕರಾದ ಆನಂದ್ ಎಂಬುವವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಮಾಡಿದ ಮಧ್ಯರಾತ್ರಿ ಮುನೀಶ್ ಅವರಿಗೆ ಎರಡು ಅಪರಿಚಿತ ನಂಬರ್‌ಗಳಿಂದ (9740105969, 7975229904) ಬೆದರಿಕೆ ಕರೆ ಬಂದಿದೆ.
ಅಬಕಾರಿ ಸಚಿವ ಗೋಪಾಲಯ್ಯ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಮುನಿಷ್ ಮೌದ್ಗಲ್‌ಗೆ ಕರೆ ಮಾಡಿದ್ದಾನೆ. ಆನಂದ್ ಅವರನ್ನು ಯಾಕೆ ವರ್ಗಾವಣೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಆರೋಪಿ ವರ್ಗಾವಣೆಯನ್ನು ಕೂಡಲೆ ಕ್ಯಾನ್ಸಲ್ ಮಾಡುವಂತೆ ಬೆದರಿಸಿದ್ದಾನೆ.
ನಂಬರ್ ಟ್ರೇಸ್ ಆ್ಯಪ್ ಮೂಲಕ ನಂಬರ್ ಯಾರದ್ದು ಎಂದು ಪತ್ತೆ ಹಚ್ಚಿದಾಗ ಗೋವಿಂದರಾಜ ಟಿ. ಎಂಬ ವ್ಯಕ್ತಿಗೆ ಸೇರಿದ್ದಾಗಿ ತಿಳಿದಬಂದಿದೆ. ನಂತರ ಸಚಿವ ಗೋಪಾಲಯ್ಯ ಅವರ ಪಿ.ಎ. ರಾಮೇಗೌಡರಿಗೆ ಮಾಹಿತಿ ತಿಳಿಸಲಾಯಿತು. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನೀಶ್ ಮೌದ್ಗಲ್ ದೂರು ದಾಖಲಿಸಿದ್ದರು.
ದೂರು ದಾಖಲಿಸಿ ತನಿಖೆ ಆರಂಭಿಸಿದ ಸಂಪಿಗೆಹಳ್ಳಿ ಪೊಲೀಸರು ಗೋವಿಂದರಾಜು ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ಚಾಲಕ ಆನಂದ್ ಅವರ ಸಂಬಂಧಿ ಎಂದು ಸದ್ಯದ ತನಿಖೆಯಲ್ಲಿ ತಿಳಿದುಬಂದಿದ್ದು, ಸ್ಪಷ್ಟ ಚಿತ್ರಣಕ್ಕಾಗಿ ಇನ್ನೂ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಐಪಿಎಸ್-ಐಎಎಸ್ ಬಂಧನ; ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದ ಐಜಿಪಿ ಡಿ. ರೂಪ ಮೌದ್ಗಿಲ್