ಮಂಡ್ಯ: ಮಂಡ್ಯದ ಸರ್ಕಾರಿ ಶಾಲೆಯೊಂದರಲ್ಲಿ ಅನ್ನದಾಸೋಹಕ್ಕೆಂದು ಬಳಸಬೇಕಿದ್ದ ತೊಗರಿಬೇಳೆಯನ್ನು ಶಿಕ್ಷಕನೋರ್ವ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಮಳವಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾಳರಾಜೇಗೌಡ ಇದೀಗ ಅಮಾನತಾಗಿರುವಾತ. ಈ ಶಾಲೆಯಲ್ಲಿ ಮಕ್ಕಳ ಭೋಜನಕ್ಕೆಂದು ತೊಗರಿ ಬೇಳೆಗಳನ್ನು ಸರ್ಕಾರದ ವತಿಯಿಂದ ನೀಡಲಾಗಿತ್ತು. ಆದರೆ, ಕಾಳರಾಜೇಗೌಡ 50ಕೆ.ಜಿ.ಯಷ್ಟು ತೊಗರಿಬೇಳೆ ಇರುವ ಎರಡು ಮೂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾನೆ. ಅಲ್ಲದೆ, ಕಾಳಸಂತೆಯಲ್ಲಿ ಇವುಗಳನ್ನು ಮಾರಾಟ ಮಾಡಿದ್ದಾನೆ.
ಗುರುವಾರ (ಜೂನ್ 29) ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ, ಕಾಳಸಂತೆಯಲ್ಲಿ ತೊಗರಿಬೇಳೆಯನ್ನು ಮಾರಾಟ ಮಾಡುತ್ತಿದ್ದ ವಿಡಿಯೊ ಲಭ್ಯವಾಗಿದೆ.
ತೊಗರಿ ಬೇಳೆಯನ್ನು ಇಲಾಖೆಯ ಗಮನಕ್ಕೆ ಬಾರದಂತೆ ಶಾಲೆಯಿಂದ ಹೊರಗೆ ಸಾಗಿಸಲಾಗುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಿಕ್ಷಕನನ್ನು ಅಮಾನತು ಮಾಡಲಾಗಿದ್ದು, ಕಾಳರಾಜೇಗೌಡನ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ