ಮಂಡ್ಯ: ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಈಗ ಕೇಸರಿಮಯವಾಗಿದೆ.
ಮಂಡ್ಯದ ಹೆದ್ದಾರಿಯಲ್ಲಿ ಕೇಸರಿ ಬಣ್ಣದ ಬಾವುಟಗಳು, ಪ್ಲೆಕ್ಸ್‌ಗಳು, ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಡಾ. ವಿಶ್ವೇಶ್ವರಯ್ಯ ಮಹಾದ್ವಾರ ನಿರ್ಮಾಣವಾಗಿದೆ. ರೋಡ್ ಶೋ ನಲ್ಲಿ ಸುಮಾರು 40 ಸಾವಿರ ಜನ ನಿರೀಕ್ಷೆ ಇದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 50 ಮೀ. ಕಾಲ್ನಡಿಗೆ, ವೀಕ್ಷಣೆ ಬಳಿಕ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಪ್ರಧಾನಿ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 12.05ಕ್ಕೆ ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಗೆಜ್ಜಲಗೆರೆಯಲ್ಲಿ ಸಾರ್ವಜನಿಕ ಸಭೆಗೋಸ್ಕರ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಈ ಸಭೆಗೆ
ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ವೀಕ್ಷಕರ ಅನುಕೂಲಕ್ಕೆ ಬೃಹತ್ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ.
ನಿತಿನ್ ಗಡ್ಕರಿ ಅವರು ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್‌ಗೆ ಬಂದು ರಸ್ತೆ ಮಾರ್ಗವಾಗಿ ಮಂಡ್ಯಕಕೆ ಆಗಮಿಸಲಿದ್ದಾರೆ. ಮಂಡ್ಯದ ಐಬಿ ಸರ್ಕಲ್‌ನಿಂದ ಸಂಜಯ್ ಸರ್ಕಲ್ ಮಾರ್ಗವಾಗಿ ನಂದ ಸರ್ಕಲ್ ತನಕ ಮೋದಿಯವರ ರೋಡ್ ಶೋ ನಡೆಯಲಿದೆ. ಸಂಜಯ್ ಟಾಕೀಸ್ ವೃತ್ತದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ. ರಸ್ತೆಯ ಎರಡು ಬದಿ ಕೇಸರಿಮಯವಾಗಿದೆ.
ಮಂಡ್ಯಕ್ಕೆ 41 ವರ್ಷದ ಬಳಿಕ ಪ್ರಧಾನಿ ಭೇಟಿ:
41 ವರ್ಷದ ಬಳಿಕ ಮೊದಲ ಬಾರಿಗೆ ಮಂಡ್ಯದ ನೆಲಕ್ಕೆ ಪ್ರಧಾನಿ ಕಾಲಿಡುತ್ತಿದ್ದಾರೆ. ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ಇಂದಿರಾಗಾಂಧಿ ಆಗಮಿಸಿದ್ದರು. ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದರು. ನಂತರ ಈಗ 41 ವರ್ಷಗಳ ಬಳಿಕ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.