Site icon Vistara News

Foeticide Case : 900 ಭ್ರೂಣಹತ್ಯೆ ನಡೆದ ಆಲೆಮನೆ ಇನ್ನೂ Working!: ಆರ್‌ ಅಶೋಕ್‌ ಭೇಟಿ ವೇಳೆ ಬಯಲು

Mandya Alemane R Ashok

ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಸುಮಾರು 900ಕ್ಕೂ ಅಧಿಕ ಭ್ರೂಣ ಹತ್ಯೆ ಪ್ರಕರಣ (Foeticide Case) ನಡೆದ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ-ಹಾಡ್ಯ ಗ್ರಾಮದ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿದ್ದ ‘ಆಲೆಮನೆʼ (Alemane Scanning Centre) ಇನ್ನೂ ಕಾರ್ಯಾಚರಣೆ ನಡೆಸುತ್ತಿದೆ ಎಂಬುದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ (R Ashok) ಅವರ ಭೇಟಿಯ ವೇಳೆ ಬಯಲಾಗಿದೆ. ಹುಳ್ಳೇನಹಳ್ಳಿ ಗ್ರಾಮದ ನಯನ್ ಮತ್ತು ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಎಂಬಿಬ್ಬರು ಭಾವ ಹಾಗೂ ಬಾಮೈದುನರು ಆಲೆಮನೆಯನ್ನು ಬಾಡಿಗೆಗೆ ಪಡೆದು ಪಕ್ಕದಲ್ಲೇ ಸಣ್ಣದಾದ ಶೆಡ್ ನಿರ್ಮಿಸಿ ಸ್ಕ್ಯಾನಿಂಗ್ ನಡೆಸುತ್ತಿದ್ದರು. ಮತ್ತೊಂದು ಗ್ಯಾಂಗ್ ಮಧ್ಯವರ್ತಿಗಳ ಸಹಾಯದಿಂದ ಗರ್ಭಿಣಿಯರನ್ನು ಸಂಪರ್ಕಿಸಿ, ಬಳಿಕ ಬೆಂಗಳೂರಿನಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿತ್ತು. ಅಲ್ಲಿ ಭ್ರೂಣ ಹೆಣ್ಣು ಎನ್ನುವುದು ತಿಳಿದರೆ, ಮೈಸೂರಿಗೆ ಕರೆದುಕೊಂಡು ಬಂದು ಗರ್ಭಪಾತ ಮಾಡಿಸಲಾಗುತ್ತಿತ್ತು.

ಆದರೆ, ಘಟನೆ ಬೆಳಕಿಗೆ ಬಂದು ಇಷ್ಟು ವಾರಗಳೇ ಕಳೆದರೂ ಆಲೆಮನೆ ಮಾತ್ರ ಇನ್ನೂ ಯಥಾಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಂಡು ಅಶೋಕ್‌ ಅವರು ಅಚ್ಚರಿ ವ್ಯಕ್ತಪಡಿಸಿದರು. ಇಡೀ ಹೇಯ ಕೃತ್ಯದ ಕೇಂದ್ರ ಸ್ಥಾನವಾದ ಮಂಡ್ಯದ ಆಲೆಮನೆಯನ್ನು ಪೊಲೀಸ್ ಇಲಾಖೆಯಾಗಲೀ ಅಥವಾ ಆರೋಗ್ಯ ಇಲಾಖೆಯಾಗಲೀ ಸೀಜ್ ಮಾಡಿಲ್ಲ. ಈ ಬಗ್ಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರ್. ಅಶೋಕ್ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಭ್ರೂಣ ಹತ್ಯೆಯ ಮುನ್ನ ನಡೆಯುವ ಸ್ಕ್ಯಾನಿಂಗ್‌ ಜಾಗಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆದರೆ, ಈವರೆಗೂ ಆಲೆಮನೆ ಯಥಾಪ್ರಕಾರ ನಡೆಯುತ್ತಿದೆ. ಮುಖ್ಯವಾಗಿ ಸರ್ಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾದರೆ, ಕೂಡಲೇ ಸ್ಥಳವನ್ನು ಮಹಜರ್ ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು. ಆದರೆ, ಈ ಜಾಗದಲ್ಲಿ ಏನೂ ಕ್ರಮ ಆಗಿಲ್ಲ. ಎಲ್ಲ ಸಾಕ್ಷಿಗಳು ನಾಶವಾಗಿವೆ. ಮುಖ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಯಾವುದೇ ಸಾಕ್ಷ್ಯಗಳು ಇಲ್ಲಿ ಸಿಗುತ್ತಿಲ್ಲ ಎಂದರು.

ಆರ್.‌ ಅಶೋಕ್‌ ಭೇಟಿ ನೀಡಿದ ಮಂಡ್ಯದ ವಿವಾದಿತ ಆಲೆಮನೆಗೆ

ಭ್ರೂಣಲಿಂಗಪತ್ತೆ, ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಕೃತ್ಯಕ್ಕೆ ಬಳಸಿರುವ ಯಾವುದೇ ವಸ್ತು ಇಲ್ಲಿ ಇಲ್ಲ, ಎಲ್ಲಾ‌ ಕ್ಲೀನ್ ಮಾಡಿದ್ದಾರೆ. ವೈದ್ಯರು ವರ್ಷಕ್ಕೆ 600-700 ಭ್ರೂಣ ಹತ್ಯೆ ಮಾಡ್ತಿದ್ದರು. ಈ ದಂಧೆಯಿಂದ ಕೋಟಿ ಕೋಟಿ ಹಣ ಸಂಪಾದಿಸಿದ್ದಾರೆ. ವ್ಯವಸ್ಥಿತವಾದ ಜಾಲದ ಇದರ ಹಿಂದೆ ಕೆಲಸ ಮಾಡಿದ್ದಾರೆ ಎಂದು ಆರ್‌. ಅಶೋಕ್‌ ಆರೋಪಿಸಿದರು.

ಕೃತ್ಯ ಬೆಳಕಿಗೆ ಬಂದ ಮೇಲೆ ಸರ್ಕಾರ ಏನು ಕ್ರಮ‌ ತೆಗೆದುಕೊಂಡಿಲ್ಲ. ಸಿಐಡಿ ಅಧಿಕಾರಿಗಳು ಯಾವ ಊರು ಅಂತ ನನ್ನ ಕೇಳ್ತಾರೆ. ಆರೋಗ್ಯ ಇಲಾಖೆಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಾರೆ. ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ, ಪೊಲೀಸರಿಗೆ ಅಶೋಕ್‌ ತರಾಟೆ

ಆಲೆ ಮನೆಗೆ ಭೇಟಿ ನೀಡಿದ ವೇಳೆ ಆರ್‌. ಅಶೋಕ್‌ ಅವರು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಉದ್ದೇಶಿಸಿ, ಈ ಆಲೆಮನೆಯ ಮಾಲೀಕ ಎಂದು ಕೇಳಿದರು. ಆಗ ಇಲ್ಲೇ ಇದ್ದಾನೆ ಎಂದ ಡಿಹೆಚ್‌ಓ ಡಾ.ಮೋಹನ್ ಹೇಳಿದರು. ಆಗ ಅಶೋಕ್‌ ಅವರು ಶಾಕ್‌ಗೆ ಒಳಗಾದರು. ʻʻಆಲೆಮನೆ ಯಾಕೆ ಸೀಜ್ ಮಾಡಿಲ್ಲ? ಇದುವರೆಗೂ ಸೀಜ್ ಮಾಡಿಲ್ಲ ಅಂದ್ರೆ ನೀವು ಶಾಮೀಲಾಗಿದ್ದೀರ?. ನೀವೆಲ್ಲರೂ ಶಾಮೀಲಾಗಿದ್ದೀರ ಎಂದು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ʻʻನಿಮ್ಮ ಕಾರ್ಯವೈಖರಿ ಇದರಲ್ಲೇ ಗೊತ್ತಾಗುತ್ತದೆ. ಎಷ್ಟರ ಮಟ್ಟಿಗೆ ಕೆಲಸ ಮಾಡ್ತಿದ್ದೀರಿʼʼ ಎಂದು ಹೇಳಿದರು. ಅಲ್ಲಿಂದಲೇ ಸಿಐಡಿ ಅಧಿಕಾರಿ ಸಲೀಂ ಎಂಬುವವರಿಗೆ ಕರೆ ಮಾಡಿ ಪ್ರಶ್ನೆ ಮಾಡಿದರು. ಜನರಿಗೆ ಯಾವ ಮೆಸೇಜ್ ಕೊಡ್ತಿದ್ದೀರ ಎಂದು ಕ್ಲಾಸ್ ತೆಗೆದುಕೊಂಡರು.

Exit mobile version