ಮಂಡ್ಯ: ಇಲ್ಲಿಯವರೆಗೆ ಕರ್ನಾಟಕದಲ್ಲಿ ಅಧಿಕಾರ ನಡೆಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣವನ್ನು ನಡೆಸಿದ್ದು, ಅವರನ್ನು ಕಿತ್ತೊಗೆದು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಸರಳ ಬಹುಮತ ನೀಡಿ ಎಂದು ಕೇಂದ್ರ ಗೃಹಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ (amit shah) ಕರೆ ನೀಡಿದ್ದಾರೆ.
ಮಂಡ್ಯದಲ್ಲಿರುವ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಅಮಿತ್ ಶಾ ಹರಿಹಾಯ್ದರು.
ರೈತರಿಗೆ ನ್ಯಾಯ ಕೊಡಿಸಲು ಒಂದು ಮುಷ್ಠಿ ಅಕ್ಕಿ ಸಂಗ್ರಹ ಮಾಡುವ ಮೂಲಕ ಮಂಡ್ಯದಿಂದಲೇ 2018ರ ಚುನಾವಣೆಗೆ ಚಾಲನೆ ನೀಡಿದ್ದೆವು. ಆಗ ಕರ್ನಾಟಕದ ಜನರು ಅತಿ ದೊಡ್ಡ ಪಕ್ಷವಾಗಿ ಆಶೀರ್ವಾದ ಮಾಡಿದರು. 2019ರಲ್ಲಿ ಮೋದಿಯವರ ನೇತೃತ್ವದಲ್ಲಿ 52% ವೋಟ್ ಲಭಿಸಿತ್ತು ಎಂದ ಅಮಿತ್ ಶಾ, ಈ ಮೂಲಕ ಕರ್ನಾಟಕದ 28 (ಅಟ್ಠಾಯೀಸ್) ರಲ್ಲಿ 26(ಛಬ್ಬೀಸ್) ಸಂಸದರನ್ನು ಗೆಲ್ಲಿಸಿ ನಮ್ಮ ಜೋಳಿಗೆಗೆ ಹಾಕಿದಿರಿ ಎಂದರು. ಅಸಲಿಗೆ ಬಿಜೆಪಿ ಗೆದ್ದಿದ್ದು 25 ಸಂಸದರಾದರೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅವರಿಗೆ ಬೆಂಬಲ ಸೂಚಿಸಿತ್ತು.
ಭಾಷಣ ಮುಂದುವರಿಸಿದ ಅಮಿತ್ ಶಾ, ಇಲ್ಲಿವರೆಗೆ ಜೆಡಿಎಸ್-ಕಾಂಗ್ರೆಸ್ ಸಹವಾಸ ಸಾಕಾಯಿತು. ಈ ಬಾರಿ ಮಂಡ್ಯ ಹಾಗೂ ಮೈಸೂರಿನಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಗೆಲ್ಲಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಪಕ್ಷಗಳು. ಕಾಂಗ್ರೆಸ್ ಬಂದರೆ ಕರ್ನಾಟಕ ದೆಹಲಿಯ ಎಟಿಎಂ ಆಗುತ್ತದೆ. ಜೆಡಿಎಸ್ ಬಂದರೆ ಕುಟುಂಬದ ಎಟಿಎಂ ಆಗುತ್ತದೆ. ಎರಡೂ ಪಕ್ಷಗಳು ಭ್ರಷ್ಟಾಚಾರ ಮಾಡಿಕೊಂಡು ಕರ್ನಾಟಕದ ಅಭಿವೃದ್ಧಿಯನ್ನು ನಿಲ್ಲಿಸಿವೆ.
ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದಿಂದ ಹೊರಬರಬೇಕೆಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ನೀಡಿ ಡಬಲ್ ಇಂಜಿನ್ ಸರ್ಕಾರ ನೀಡಿ. ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ. ಇವೆರಡೂ ಪಕ್ಷಗಳು ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಜತೆಗೆ ಕೋಮುವಾದಿ ಹಾಗೂ ಕ್ರಿಮಿನಲ್‌ಗಳನ್ನು ಸಲಹುತ್ತಿವೆ.
ಇಷ್ಟು ವರ್ಷಗಳ ಆಡಳಿತದಲ್ಲಿ ದಲಿತರು ಹಾಗೂ ಆದಿವಾಸಿಗಳಿಗೆ ಅನ್ಯಾಯ ಮಾಡಿವೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದುಳಿದ ಸಮುದಾಯಗಳ ಇಬ್ಬರನ್ನು ರಾಷ್ಟ್ರಪತಿಯನ್ನಾಗಿಸಿದ್ದೇವೆ. ಬಿಜೆಪಿಯು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯ ಮಾಡಿದೆ. ಮೈಸೂರು, ಮಂಡ್ಯ ಅಭಿವೃದ್ಧಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಏನನ್ನೂ ಮಾಡಿಲ್ಲ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ, ರೈಲ್ವೆ ಡಬ್ಲಿಂಗ್, ವಿದ್ಯುದೀಕರಣ ಮಾಡಿದ್ದೇವೆ. ಮೈಶುಗರ್ ಕಾರ್ಖಾನೆಯನ್ನು ಆರಂಭ ಮಾಡಿದ್ದು ಬಿಜೆಪಿ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು, ಮೋದಿ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿ ಎಲ್ಲರನ್ನೂ ಜೈಲಿಗೆ ಹಾಕಿದೆ.
ರಾಮಮಂದಿರ ನಿರ್ಮಿಸಲು ಕಾಂಗ್ರೆಸ್ ಮೀನಮೇಷ ಎಣಿಸುತ್ತಿತ್ತು. ಆದರೆ ಈಗ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇಲ್ಲಿನ ಯುವಕರಿಗೆ ಹೇಳುತ್ತೇನೆ, 2024ರ ಜನವರಿ 1ಕ್ಕೆ ಅಯೋಧ್ಯೆಗೆ ತೆರಳಲು ರಿಸರ್ವೇಷನ್ ಮಾಡಿಕೊಳ್ಳಿ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತದೆ ಎಂದರು.
ಇದನ್ನೂ ಓದಿ | Amit Shah | ಗೃಹಸಚಿವರಿಗೆ ತಲೆಬಾಗಿ ನಮಿಸುವೆ ಎಂದ ಎಚ್.ಡಿ. ದೇವೇಗೌಡ; ಅಮಿತ್ ಶಾಗೆ ಹೊಗಳಿಕೆಯ ಸುರಿಮಳೆ