Site icon Vistara News

Amit Shah | ಹಳೆ ಮೈಸೂರಿನಲ್ಲಿ ಕಹಳೆ ಮೊಳಗಿಸಿದ ಬಿಜೆಪಿ; HDK ಟೀಕೆ ಮೂಲಕ ಅಮಿತ್‌ ಶಾಗೆ ಸ್ವಾಗತ ಕೋರಿದ ಪಕ್ಷ

amit shah to launch party campaign in old mysuru region

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಡಿಸೆಂಬರ್‌ 30ರಂದು ಕರ್ನಾಟಕಕ್ಕೆ ಆಗಮಿಸುತ್ತಿರುವುದು ಹಳೆ ಮೈಸೂರಿನಲ್ಲಿ ಪಕ್ಷದ ಕಹಳೆ ಮೊಳಗಿಸಲು ಎನ್ನುವುದು ಇದೀಗ ಸುಸ್ಪಷ್ಟವಾಗಿದೆ. ರಾಜ್ಯ ಬಿಜೆಪಿ ಟ್ವಿಟರ್‌ ಖಾತೆ ಮೂಲಕ ಬಹಿರಂಗವಾಗಿಯೇ ಈ ಮಾಹಿತಿಯನ್ನು ನೀಡಲಾಗಿದ್ದು, ಹಳೆ ಮೈಸೂರಿನಲ್ಲಿ ಬಿಜೆಪಿ ಸಂಚಲನ ಆರಂಭದ ಮೊದಲ ಹೆಜ್ಜೆಯಾಗಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದದೆ.

ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲೂ ಉತ್ತಮ ಮತಗಳನ್ನು ಪಡೆಯುವ ಬಿಜೆಪಿ, ಹಳೆ ಮೈಸೂರು ಭಾಗದಲ್ಲಿ ಮಾತ್ರ ಎಂದಿನಿಂದಲೂ ದುರ್ಬಲವಾಗಿದೆ. ಅಲ್ಲಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಬಲದ ಮೇಲೆ, ಜಾತಿ ಬಲದ ಮೇಲೆ ಗೆದ್ದು ಬರುತ್ತಾರಾದರೂ, ಪಕ್ಷದ ಮತಗಳು ಗೆಲ್ಲುವಷ್ಟು ಲಭಿಸುತ್ತಿಲ್ಲ.

ಒಕ್ಕಲಿಗ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ಜೆಡಿಎಸ್‌ ಜತೆಗಿದ್ದು, ಕಾಂಗ್ರೆಸ್‌ನಲ್ಲೂ ತಕ್ಕ ಮಟ್ಟಿಗೆ ಹಂಚಿದೆ. ಬಿಜೆಪಿಯದ್ದು ಮೂರನೇ ಸ್ಥಾನ. ಅನೇಕ ಸಂದರ್ಭಗಳಲ್ಲಿ, ಕ್ಷೇತ್ರಗಳಲ್ಲಿ ಜೆಡಿಎಸ್‌ ಜತೆಗೆ ಹೊಂದಾಣಿಕೆ ಇರುತ್ತಿದ್ದದ್ದೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆಗೆ ಬಾಧಕವಾಯಿತು. ಆದರೆ ಈ ಬಾರಿ ಬಿಜೆಪಿಯು ಜೆಡಿಎಸ್‌ ಜತೆ ಗುದ್ದಾಟಕ್ಕೆ ಗಂಭೀರವಾಗಿ ಸಿದ್ಧವಾಗಿರುವಂತೆ ಕಾಣುತ್ತಿದೆ. ಮಂಡ್ಯದಲ್ಲಿ ಹಾಲು ಮಹಾ ಮಂಡಲದ ಕಟ್ಟಡ ಉದ್ಘಾಟನೆ ನೆಪದಲ್ಲಿ ಪಕ್ಷ ಬಲವರ್ಧನೆಗೆ ಅಮಿತ್‌ ಶಾ ಮುಂದಾಗಿದ್ದಾರೆ.

ಜೆಡಿಎಸ್‌ ವಿರುದ್ಧ ಸರಣಿ ಟ್ವೀಟ್‌ ಮೂಲಕ ಬಿಜೆಪಿ ಹರಿಹಾಯ್ದಿದೆ. “ಕೇವಲ ಹಳೆ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ ಅವರಿಗೇ ಇಂದು ದ್ರೋಹ ಬಗೆಯುತ್ತಿದೆ. ಜಿ. ಪಂ.ಯಿಂದ ಹಿಡಿದು ಸಂಸತ್ತಿನ ತನಕ ಹುದ್ದೆ ಹೊಂದಿರುವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ! ಅಭಿವೃದ್ಧಿಯ ಹೆಸರಿನಲ್ಲಿ JDS ಹಳೆ ಮೈಸೂರು ಭಾಗದಲ್ಲಿ ಮಾಡಿದ್ದೆಲ್ಲಾ ಜನರ ಲೂಟಿ.”

“ಇಷ್ಟು ವರ್ಷಗಳ ಕಾಲ ಅಧಿಕಾರ ಕೊಟ್ಟ ಜನರಿಗೆ ತಿರುಗಿ ಕೊಟ್ಟಿದ್ದು ಮಾತ್ರ ಶೂನ್ಯ. ಮಾನ್ಯ ಎಚ್‌.ಡಿ. ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು ಕೇವಲ ಈ ಭಾಗದ ಜನರನ್ನು ಮೂರ್ಖರನ್ನಾಗಿಸಲು ಮಾಡುವ ತಂತ್ರ. ‘ಏನಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು’ ಎನ್ನುವುದಷ್ಟೇ ಅವರ ಪಕ್ಷದ ಸಿದ್ಧಾಂತ. ಹೆಸರಲ್ಲಷ್ಟೇ ಜಾತ್ಯಾತೀತತೆ ಆಗಿರುವ ಪಕ್ಷ ಮಾಡಿದ್ದೆಲ್ಲವೂ ಜಾತಿ ರಾಜಕಾರಣವೇ. ಕೇವಲ ಒಂದು ಸಮುದಾಯದವರನ್ನು ನೆಚ್ಚಿ ಬದುಕುತ್ತಿರುವ ಪಕ್ಷ ಆ ಸಮುದಾಯದ ಉದ್ದಾರವನ್ನೂ ಕಡೆಗಣಿಸಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದುಬಿಟ್ಟಿದೆ.”

“ಕಾರ್ಯಕರ್ತರೇ ರಾಜಕೀಯ ಪಕ್ಷಗಳ ಬೆನ್ನೆಲುಬು. ಆದರೆ, ಜೆಡಿಎಸ್ ಕಾರ್ಯಕರ್ತರನ್ನೇ ಕಡೆಗಣಿಸಿ ಕೇವಲ ತಮ್ಮ ಕುಟುಂಬದವರನ್ನೇ ಚುನಾವಣಾ ಅಭ್ಯರ್ಥಿಯನ್ನಾಗಿಸುತ್ತದೆ. ಇದಕ್ಕೆ ಸ್ವಂತ ಕಾರ್ಯಕರ್ತರನ್ನೇ ನಂಬದ ಹೆಚ್.ಡಿ.ರೇವಣ್ಣನವರ ಸಮಜಾಯಿಷಿ, ‘ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ಟೋಪಿ ಹಾಕಿ ಹೋಗ್ತಾರೆ’ ಅನ್ನೋದು!. ಕಾಂಗ್ರೆಸ್ ಪಕ್ಷ ಈ ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ. ಸ್ವತಃ ಮುಖ್ಯಮಂತ್ರಿಯಾಗಿದ್ದ ಈ ಭಾಗದವರಾದ ಸಿದ್ದರಾಮಯ್ಯನವರು ಕೂಡ ಅಭಿವೃದ್ಧಿ ಕಡೆಗಣಿಸಿ ಒಡೆದಾಳುವ ನೀತಿ ಅನುಸರಿಸಿ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಿಳಿದುಬಿಟ್ಟರು. ಆದರೆ ಜನ ಇದಾವುದನ್ನೂ ಮರೆಯದೇ ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದರು.” ಎಂದಿದೆ.

ಇದನ್ನೂ ಓದಿ | BJP Target 150 | ಹಳೆ ಮೈಸೂರಿನಲ್ಲಿ ಗುರಿ ಸಾಧಿಸಲು ಬಿಜೆಪಿಯ 11 ಪ್ರಯತ್ನಗಳು

ಈ ನಡುವೆ ಮಾಜಿ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿರುವ ಬಿಜೆಪಿ, “2018ರ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿವಾದಾಗ ಸಿದ್ದರಾಮಯ್ಯ ಅವರು ತಮ್ಮನ್ನು ನಂಬಿದವರನ್ನು ಅನಾಥರನ್ನಾಗಿಸಿ ಬಾದಾಮಿಗೆ ಓಡಿಹೋದರು. ಅಲ್ಲಿಂದ ಮತ್ತೆ ಇಲ್ಲಿಗೆ ಬರುವ ಯೋಚನೆ ಮಾಡುತ್ತಿದ್ದಾರೆ. ಆದರೆ ಒಡೆಯರ್‌ ಅವರಿಗೆ ಅಗೌರವದ ಏಕವಚನದ ಪದ ಬಳಸಿದವರನ್ನು ಈ ಭಾಗದ ಸುಸಂಸ್ಕೃತ ಜನರು ಶಾಶ್ವತವಾಗಿ ತಿರಸ್ಕರಿಸಿದ್ದಾರೆ. ಈಗ ಮತ್ತೆ ಸಿದ್ದರಾಮಯ್ಯ ಅವರು ಓಡಲೆಂದು ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಈಗ ಬನ್ನೂರು-ಮಳವಳ್ಳಿ ಮಾರ್ಗದಲ್ಲಿ ಓಡಲು ಕನಕಪುರದಲ್ಲಿ ಬಂಡೆ ಅಡ್ಡಲಾಗಿದೆ! ಸಿಎಂ ಆಗಿದ್ದಾಗ ನಿದ್ದೆ ಮಾಡಿ, ಈಗ ಚುನಾವಣೆಯೆಂದು ತಟ್ಟನೆ ಎಚ್ಚರಗೊಂಡು ಈ ಭಾಗದ ಬಗ್ಗೆ ಮಾತಾಡುತ್ತಿದ್ದಾರೆ” ಎಂದಿದೆ.

ಕೊನೆಯ ಟ್ವೀಟ್‌ನಲ್ಲಿ, “ಹಳೆ ಮೈಸೂರು ಭಾಗದ ಜನರಿಗೆ ಬೇಕಿರೋದು ಅಭಿವೃದ್ಧಿಯ ರಾಜಕಾರಣ. ಈ ಭಾಗದ ಜನರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಷಾಢಭೂತಿತನವನ್ನು ಕಂಡು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಇದೆಲ್ಲದಕ್ಕೂ ಮಂಡ್ಯದಲ್ಲಿ ನಡೆಯುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್‌ ಶಾ ಅವರ ಕಾರ್ಯಕ್ರಮವೇ ಮುನ್ನುಡಿಯಾಗಲಿದೆ” ಎಂದಿದೆ. #OldMysuruWelcomesAmitShah (ಹಳೆ ಮೈಸೂರು, ಅಮಿತ್‌ ಶಾ ಅವರನ್ನು ಸ್ವಾಗತಿಸುತ್ತದೆ) ಎನ್ನುವ ಮೂಲಕ ಅಮಿತ್‌ ಶಾ ಪ್ರವಾಸವು ಹಳೆ ಮೈಸೂರಿನಲ್ಲಿ ಪಕ್ಷದ ಗಂಭೀರ ಪ್ರಯತ್ನಕ್ಕೆ ನಾಂದಿ ಎಂದು ಸಾರಿದೆ.

ಬೆಳಗಾವಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ, ಒಳ್ಳೆಯ ಆಟಗಾರನಾದವರು ಯಾವುದೇ ಪಿಚ್‌ನಲ್ಲಿ ಆಡಬಲ್ಲ. ಅದೇ ರೀತಿ ಅಮಿತ್‌ ಶಾ, ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆಸಬಲ್ಲರು. ಹಳೆ ಮೈಸೂರಿನಲ್ಲಿ ಜನರ ವಿಶ್ವಾಸ ಪಡೆಯದೇ ಸರಳ ಬಹುಮತ ಪಡೆಯುವುದು ಕಷ್ಟ ಎನ್ನುವುದು 2008 ಹಾಗೂ 2018ರಲ್ಲಿ ನಮಗೆ ಅನುಭವಕ್ಕೆ ಬಂದಿರುವ ಸಂಗತಿ. ಇಡೀ ರಾಜ್ಯದ ಜತೆಗೆ ಹಳೆ ಮೈಸೂರನ್ನು ಕೇಂದ್ರೀಕರಿಸುತ್ತೇವೆ. ಇದೇನು ನಮಗೆ ಕಬ್ಬಿಣದ ಕಡಲೆ ಅಲ್ಲ. ಒಂದು ಕಾಲದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು, ಇಂದು ಪರಿಸ್ಥಿತಿ ಬದಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಹಾಸನವೂ ಸೇರಿ ಹಳೆ ಮೈಸೂರು ಭಾಗದಲ್ಲಿ ಗಮನ ಕೇಂದ್ರೀಕರಿಸುತ್ತೇವೆ.

ಇದನ್ನೂ ಓದಿ | ಹಳೆ ಮೈಸೂರು ಸಂಘಟನೆಗೆ ಮುಂದಾದ ಬಿಜೆಪಿ: ರಾಜ್ಯ ಪದಾಧಿಕಾರಿಗಳ ಸಭೆ ಆರಂಭ

Exit mobile version