Site icon Vistara News

ಮಂಡ್ಯ| ಶ್ರೀರಂಗಪಟ್ಟಣದಲ್ಲಿ ಅಪ್ಪು ಅಭಿಮಾನಿ ಆತ್ಮಹತ್ಯೆ: ನಮ್ಮ ಮನೆಗೇ ಇದು ಕೊನೆಯಾಗಲಿ ಎಂದ ಮಾವ

appu fan kiran

ಮಂಡ್ಯ: ಅಪ್ಪು ಪುಣ್ಯಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಅಪ್ಪು ಅಭಿಮಾನಿಯೊಬ್ಬರು, ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಕಿರಣ್(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪ್ಪು ಇಲ್ಲದ ಜೀವನ ಬೇಡವೆಂದು ನೊಂದುಕೊಂಡಿದ್ದ ಅವರು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದಲ್ಲಿ ಶನಿವಾರ ನಡೆದ ಅಪ್ಪು ಸ್ಮರಣೆಯಲ್ಲಿ ಕಿರಣ್ ಪಾಲ್ಗೊಂಡಿದ್ದರು. ಅಪ್ಪುಗೆ ಪೂಜೆ ಸಲ್ಲಿಸಿದ್ದರು. ಅನ್ನಸಂತರ್ಪಣೆಯನ್ನೂ ನಡೆಸಿದ್ದರು. ಈ ಕಾರ್ಯಕ್ರಮದ ಬಳಿಕ ಮನೆಗೆ ಹಿಂತಿರುಗಿದ್ದ ಕಿರಣ್‌, ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅವರ ಅಕಾಲಿಕ ಅಗಲಿಕೆಯ ಬಳಿಕ ಕಿರಣ್‌ ಸಾಕಷ್ಟು ನೊಂದುಕೊಂಡಿದ್ದರು ಎನ್ನಲಾಗಿದೆ. ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿರಣ್‌ ಮಾವ ರವಿಚಂದ್ರ, ಅಭಿಮಾನವೇ ಬೇರೆ, ಮೊದಲು ತಂದೆ ತಾಯಿಗಳನ್ನು ನೋಡಿಕೊಳ್ಳಿ. ಅವನು ಪುನೀತ್ ಅವರ ಪ್ರತಿ ಸಿನಿಮಾ ಶೂಟಿಂಗ್ ಅಟೆಂಡ್ ಮಾಡುತ್ತಿದ್ದ. ಶನಿವಾರ ಸ್ನೇಹಿತರ ಜತೆ ಸೇರಿ ಅನ್ನ ಸಂತರ್ಪಣೆ ಮಾಡಿದ್ದ. ಎಲ್ಲರ ಜತೆ ಸೇರಿ ಗಂಧದಗುಡಿ ಸಿನಿಮಾ ನೋಡಿಕೊಂಡು ಬಂದಿದ್ದ.

ಅಪ್ಪು ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಈ ರೀತಿ ಮಾಡಿಕೊಂಡಿರಬಹುದು. ಆದರೆ ಈಗ ವಯಸ್ಸಾದ ತಂದೆ ತಾಯಿ ನೋಡಿಕೊಳ್ಳುವವರು ಯಾರು? ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆ ಸೇರಿದ್ದಾಗ ಅಪ್ಪು ಯಾವ ರೀತಿ ನೋಡಿಕೊಂಡಿದ್ದರು. ವೈದ್ಯರು ಎಲ್ಲ ಸರಿಯಾಗಿದೆ ಎಂದರೂ ಇನ್ನೂ 15 ದಿನ ವೆಂಟಿಲೇಟರ್‌ನಲ್ಲಿ ಇರಲಿ ಎಂದಿದ್ದರು. ಇಂತಹ ಸಾವು ನಮ್ಮ ಮನೆಗೇ ಕೊನೆಯಾಗಲಿ. ಅಭಿಮಾನದಿಂದ ಯಾರೂ ಈ ರೀತಿ ಮಾಡಿಕೊಳ್ಳಬೇಡಿ. ಆ ಮೂಲಕ ತಂದೆ ತಾಯಿಗೆ ನೋವು ಕೊಡಬೇಡಿ ಎಂದು ನೋವಿನಿಂದ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Appu Namana | ಪುನೀತ್‌ ಸಮಾಧಿ ದರ್ಶನ ಪಡೆದ 1.30 ಲಕ್ಷ ಮಂದಿ; ಇನ್ನೂ ಕರಗದ ಸರತಿ ಸಾಲು!

Exit mobile version