Site icon Vistara News

Attack on Police : ರೈಲಿನಲ್ಲಿ ಗಾಂಜಾ ಸೇದುತ್ತಿದ್ದ ಯುವಕರು; ಆಕ್ಷೇಪಿಸಿದ ಪೊಲೀಸ್‌ಗೆ ಇರಿತ!

Attack on Police Maddur Railway station

ಮಂಡ್ಯ: ಈಗ ಯಾರೂ ಏನೇ ಮಾಡಿದರೂ ಯಾರೂ ಕೇಳುವ ಹಾಗಿಲ್ಲ ಎನ್ನುವ ಅಘೋಷಿತ ನಿಯಮವೊಂದು ಜಾರಿಗೆ ಬಂದಂತಿದೆ. ನನ್ನಿಷ್ಟ.. ನಾನು ಏನು ಬೇಕಾದ್ರೂ ಮಾಡುತ್ತೀನಿ ಎನ್ನುವ ಧಿಮಾಕು ಜೋರಾಗುತ್ತಿದೆ. ಇದೇ ಗುಂಗಿನಲ್ಲಿದ್ದ ಯುವಕರ ತಂಡವೊಂದು ತಮ್ಮ ದುರ್ವರ್ತನೆಯನ್ನು ಪ್ರಶ್ನೆ ಮಾಡಿದ ಪೊಲೀಸ್‌ ಪೇದೆಗೇ ಚಾಕುವಿನಿಂದ (Attack on Police) ಇರಿದಿದೆ.

ಮಂಡ್ಯ ಜಿಲ್ಲೆಯ (Mandya News) ಮದ್ದೂರು ರೈಲ್ವೇ ನಿಲ್ದಾಣದಲ್ಲಿ (Maddur Railway Station) ಈ ಘಟನೆ ನಡೆದಿದೆ. ರೈಲಿನಲ್ಲಿ ಗಾಂಜಾ ಮಿಶ್ರಿತ ಸಿಗರೇಟು (Ganja Cigarette) ಸೇದಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ಈ ಯುವಕರ ತಂಡ ರೈಲ್ವೇ ಪೊಲೀಸ್‌ ಸಿಬ್ಬಂದಿಯನ್ನೇ ಕೊಲೆ ಮಾಡಲು ಮುಂದಾಗಿದೆ. ದುಷ್ಕರ್ಮಿಗಳ ಈ ಕೃತ್ಯದಿಂದ ಗಾಯಗೊಂಡ ರೈಲ್ವೇ ಪೊಲೀಸ್‌ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಡ್ಯ ರೈಲ್ವೆ ಔಟ್ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ ಅವರೇ ಗಾಯಗೊಂಡವರು.
ಸತೀಶ್ ಚಂದ್ರ ಅವರು ಕರ್ತವ್ಯಕ್ಕಾಗಿ ಮದ್ದೂರು ಕಡೆಗೆ ಪ್ರಯಾಣ ಮಾಡುತ್ತಿದ್ದರು. ಅದು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌ ರೈಲು.

ಇದನ್ನೂ ಓದಿ: Murder Case : ದೃಶ್ಯಂ ಸ್ಟೈಲಲ್ಲಿ ಅತ್ತೆಯನ್ನೇ ಸುಟ್ಟ ಕಿರಾತಕ; ಇತ್ತಾ ಅಕ್ರಮ ಸಂಬಂಧ?

ಆಗ ಅವರು ಕುಳಿತಿದ್ದ ಬೋಗಿಯಲ್ಲಿ ಒಂದು ಯುವಕರ ತಂಡವೂ ಇತ್ತು. ಆ ಯುವಕರು ರೈಲಿನಲ್ಲಿ ಗಾಂಜಾ ಮಿಶ್ರಿತ ಸಿಗರೇಟ್ ಸೇದುತ್ತಿರುವುದು ಸತೀಶ್ಚಂದ್ರ ಅವರ ಗಮನಕ್ಕೆ ಬಂತು. ಅವರು ರೈಲಿನಲ್ಲಿ ಸಿಗರೇಟ್ ಸೇದದಂತೆ ತಾಕೀತು ಮಾಡಿದರು. ಈ ವೇಳೆ 6 ಜನ ಯುವಕರ ಗುಂಪು ಹಾಗೂ ಪೇದೆಯ ನಡುವೆ ಮಾತಿನ ಚಕಮಕಿ ನಡೆದಿತ್ತು.

ರೈಲಿನಲ್ಲಿ ಮಾತುಕತೆ ಮುಂದುವರಿದು ಒಂದು ಹಂತಕ್ಕೆ ನಿಂತಿತು. ಈ ನಡುವೆ, ಮದ್ದೂರು ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿಯುತ್ತಿದ್ದಂತೆಯೇ ಯುವಕರ ಗುಂಪು ಪೇದೆಗೆ ಚಾಕುವಿನಿಂದ ಇರಿದು ಯುವಕರು ಎಸ್ಕೇಪ್ ಆಗಿದೆ.

ಗಾಯಗೊಂಡ ರೈಲ್ವೆ ಪೊಲೀಸ್ ಪೇದೆಯನ್ನು ಸ್ಥಳೀಯರು ಕೂಡಲೇ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣ ಸಂಬಂದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ. ಮೈಸೂರು ರೈಲ್ವೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Exit mobile version