Site icon Vistara News

ಬಿ.ಎಸ್‌. ಯಡಿಯೂರಪ್ಪ ಮುನಿಸನ್ನು ತಣ್ಣಗಾಗಿಸಿದ ಸಿಎಂ ಬೊಮ್ಮಾಯಿ; ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ BSY

bjp karnataka preperatory meeting cancelled in delhi

ಮಂಡ್ಯ: ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮುನಿಸು ಉಂಟಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲೇ, ವಿವಾದವನ್ನು ತಣ್ಣಗಾಗಿಸಲು ಬೊಮ್ಮಾಯಿ ಮುಂದಾಗಿದ್ದಾರೆ.

ತಮ್ಮ ಹಾಗೂ ಯಡಿಯೂರಪ್ಪ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಗುರುವಾರವಷ್ಟೆ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದರು. ಬಿ.ಎಸ್‌. ಯಡಿಯೂರಪ್ಪ ಸಹ ಇದೇ ಮಾತನ್ನು ಹೇಳಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಮೇಲುಕೋಟೆ ಕ್ಷೇತ್ರದ ಪಾಂಡವಪುರದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಯಡಿಯೂರಪ್ಪ ಅವರ ಮನೆಗೇ ಹೋಗಿ ಕರೆದುಕೊಂಡು ಹೋಗಿದ್ದಾರೆ ಸಿಎಂ ಬೊಮ್ಮಾಯಿ.

ಹೆಲಿಕಾಪ್ಟರ್‌ ಮೂಲಕ ತೆರಳಲು ಬೆಳಗ್ಗೆ ಯಡಿಯೂರಪ್ಪ ಅವರ ಮನೆಗೆ ಆಗಮಿಸಿದ ಬೊಮ್ಮಾಯಿ ಅವರ ಜತೆಗೇ ಪಾಂಡವಪುರಕ್ಕೆ ಪ್ರಯಾಣ ಮಾಡಿದರು.

ಪಾಂಡವಪುರ ಹಾಗೂ ಮದ್ದೂರಿನ ಕಾರ್ಯಕ್ರಮದಲ್ಲಿ ಸಾಮಾನ್ಯ ಭಾಷಣದ ಜತೆಗೆ ಯಡಿಯೂರಪ್ಪ ಅವರನ್ನು ಹೊಗಳುವುದಕ್ಕೇ ಪ್ರತ್ಯೇಕ ಸಮಯ ಮೀಸಲಿಟ್ಟರು. ಯಡಿಯೂರಪ್ಪ ಅವರು ಜನಿಸಿದ ಬೂಕನಕೆರೆಯೂ ಮಂಡ್ಯ ಜಿಲ್ಲೆಯಲ್ಲೇ ಇರುವುದರಿಂದ ಇದಕ್ಕೆ ಮತ್ತಷ್ಟು ಜನಸ್ಪಂದನೆ ಸಿಕ್ಕಿತು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು, ಕರ್ನಾಟಕದ ಕಣ್ಮಣಿ, ಅಭಿವೃದ್ಧಿ ಹರಿಕಾರರು, ಗಂಡು ಮೆಟ್ಟಿನ ಮಂಡ್ಯದ ಗಂಡು ಮಗ, ರಾಜಾಹುಲಿ ಬಿ.ಎಸ್‌. ಯಡಿಯೂರಪ್ಪ ಎಂದು ಸಂಬೋಧಿಸಿದರು. ಅವರ ಸುದೀರ್ಘವಾದ ರಾಜಕಾರಣಕ್ಕೆ ಇಂದು ಮಂಡ್ಯ ಜಿಲ್ಲೆಯ ಜನರು ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಮಂಡ್ಯದಿಂದ ಆರಂಭವಾದ ಅವರ ಸುದೀರ್ಘವಾದ ಹೋರಾಟದ ಫಲವಾಗಿ, ರಾಜ್ಯದ ಜನಮಾನಸವನ್ನು ಗೆದ್ದು ಜನರ ಹೃದಿಯದಲ್ಲಿ ಸ್ಥಾನ ಪಡೆದಿದ್ದಾರೆ. ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಈ ಬಾರಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಜನಸಂಕಲ್ಪ ಯಾತ್ರೆಯಯ ನೇತೃತ್ವ ವಹಿಸಿಕೊಂಡಿದ್ದಾರೆ. ಅವರ ಸುದೀರ್ಘ ರಾಜಕಾರಣಕ್ಕೆ ಗೌರವ ತರಲು ಮಂಡ್ಯ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ತಾವು ಮಾತನಾಡುವ ವೇಳೆಗೆ ಯಡಿಯೂರಪ್ಪ ಅವರ ಹತ್ತಿರಕ್ಕೆ ಬಂದ ಬೇರೆ ನಾಯಕರನ್ನು ಗದರಿಸಿ, ತಾವು ಮಾತು ಮುಗಿಸುವವರೆಗೆ ಸುಮ್ಮನಿರುವಂತೆ ಸೂಚಿಸಿದರು. ಮತ್ತೆ ಹೊಗಳಿಕೆಯನ್ನು ಮುಂದುವರಿಸಿದರು. ಯಡಿಯೂರಪ್ಪ ನಮ್ಮ ಧೀಮಂತ ನಾಯಕರು. ಮುಖ್ಯಮಂತ್ರಿಯಾಗಿ ರೈತರ 10 ಎಚ್.ಪಿ. ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರು. ಕಿಸಾನ್ ಸಮ್ಮಾನ್ ಯೋಜನೆಗೆ 4,000 ರೂ. ಕೊಟ್ಟರು. ಅಂಗವಿಕಲ, ವೃದ್ಧಾಪ್ಯ ವೇತನ ಹೆಚ್ಚು ಮಾಡಿದರು. ಭಾಗ್ಯಲಕ್ಷ್ಮಿ ಯೋಜನೆಯಡಿ 20 ಲಕ್ಷ ಮಕ್ಕಳಿಗೆ ಹಣ ಬಂದಿದೆ. ಈ ಪೈಕಿ ಶೇ.25ರಷ್ಟು ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿದೆ. ಎಲ್ಲ ವರ್ಗದ ಜನರಿಗೆ ಸಾಗುತ್ತಿದೆ ಎಂದು ಹೇಳಿದರು.

ಒಟ್ಟಿನಲ್ಲಿ ಯಡಿಯೂರಪ್ಪ ಅವರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲು ಹಾಗೂ ಜನರಲ್ಲಿ ಮೂಡಿರುವ ಭಾವನೆಯನ್ನು ಸರಿಪಡಿಸಲು ಬೊಮ್ಮಾಯಿ ಎಲ್ಲ ಕಸರತ್ತು ಮಾಡಿದರು. ಕೊಪ್ಪಳದಲ್ಲಿ ಬಿಜೆಪಿ ಕಾರ್ಯಾಲಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿದ್ದ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಯಡಿಯೂರಪ್ಪ ಅವರನ್ನು ಪಿತಾಮಹ ಎಂದು ಸಂಬೋಧಿಸಿ ಹೊಗಳಿದ್ದರು.

ಕಳೆದ ವಾರ ತುಮಕೂರಿನಲ್ಲಿ ನಡೆದ ಎರಡು ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸದೇ ಇರುವ ನಿರ್ಧಾರವನ್ನು ಅಂತಿಮ ಕ್ಷಣದಲ್ಲಿ ಯಡಿಯೂರಪ್ಪ ಕೈಗೊಂಡಿದ್ದರು. ನಂತರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎರಡು ಯಾತ್ರೆಗಳ ದಿನವೇ ಯಡಿಯೂರಪ್ಪ ಗುಜರಾತ್‌ನಲ್ಲಿದ್ದರು. ಮಳೆಯ ಕಾರಣ ನೀಡಿ ಈ ಯಾತ್ರೆಗಳನ್ನು ರದ್ದುಪಡಿಸಲಾಯಿತು. ಇದೀಗ ಮುನಿಸು ತಣ್ಣಗಾಗಿಸಿದ ನಂತರ ಇಬ್ಬರೂ ನಾಯಕರು ಎರಡು ಕಾರ್ಯಕ್ರಮಗಳಲ್ಲಿ ಶುಕ್ರವಾರ ಭಾಗವಹಿಸಿದ್ದಾರೆ.

ಅಭ್ಯರ್ಥಿಗಳನ್ನು ಘೋಷಿಸಿದ ಯಡಿಯೂರಪ್ಪ

ತವರು ಜಿಲ್ಲೆ ಮಂಡ್ಯದಲ್ಲಿ ಜನಸ್ಪಂದನವನ್ನು ಗಮನಿಸಿದ ಯಡಿಯೂರಪ್ಪ, ಮೇಲುಕೋಟೆ ಹಾಗೂ ಮದ್ದೂರು ಕ್ಷೇತ್ರಗಳಿಗೆ ಪರೋಕ್ಷವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.

ಪಾಂಡವಪುರದ(ಮೇಲುಕೋಟೆ ವಿಧಾನಸಭಾ ಕ್ಷೇತ್ರ) ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಇಷ್ಟು ಸಾಮಾಜಿಕ ಕೆಲಸ ಮಾಡುತ್ತಿರುವ ಡಾ. ಇಂದ್ರೇಶ್‌ ಅವರನ್ನು ಅಭಿನಂದಿಸುತ್ತೇನೆ, ನಿಮ್ಮೆಲ್ಲರ ಸಹಕಾರ ಡಾ. ಇಂದ್ರೇಶ್‌ ಮೇಲೆ ಇರಬೇಕು. ಈಗಿನಿಂದಲೇ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿ ಇಂದ್ರೇಶ್‌ ಕೈ ಬಲಪಡಿಸಬೇಕು. ಇಂದ್ರೇಶ್‌ ಅವರನ್ನು ಸೇರಿಸಿ ನಾಲ್ಕೈದು ಜನರನ್ನು ಆಯ್ಕೆ ಮಾಡಿಕಳಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇರಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ಮದ್ದೂರಿನ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್‌.ಪಿ. ಸ್ವಾಮಿಯವರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರ ಪರವಾಗಿ ಬೆಂಬಲಿಗರಾಗಿ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ. ನೀವು ಮನಸ್ಸು ಮಾಡಿದರೆ ಅಸಾಧ್ಯ ಯಾವುದೂ ಇಲ್ಲ ಎಂದು ಜನರಿಗೆ ಕರೆ ನೀಡಿದರು.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

Exit mobile version